Advertisement

ಬೆಂಗಳೂರು –ಕಾರವಾರ ರೈಲಿನ ವೇಳೆೆ ಬದಲಿಗೆ ಆಗ್ರಹ

07:53 AM Oct 23, 2017 | Team Udayavani |

ಕುಂದಾಪುರ: ಬೆಂಗಳೂರು-ಕಾರವಾರ ರೈಲು ಫೆಬ್ರವರಿಯ ಅನಂತರ ಕುಣಿಗಲ್‌ ಮಾರ್ಗವಾಗಿ ಸಂಚರಿಸುವ ಬಗ್ಗೆ ನೈಋತ್ಯ ರೈಲ್ವೇ ಮಂಡಳಿ ಒಪ್ಪಿಗೆ ನೀಡಿದ್ದು, ವಾರದಲ್ಲಿ ನಾಲ್ಕು ದಿನ ಬೆಂಗಳೂರು- ಕುಣಿಗಲ್‌- ಶ್ರವಣಬೆಳಗೊಳ- ಹಾಸನ ಮಾರ್ಗವಾಗಿ ಹಾಗೂ ಉಳಿದ ಮೂರು ದಿನ ಮೈಸೂರು ಹಾಸನ ಮಾರ್ಗವಾಗಿ ಮಂಗಳೂರು ತಲುಪಲಿದೆ. ಆದರೆ ಕುಣಿಗಲ್‌ ಮೂಲಕ ಸಂಚರಿಸುವ ವೇಳಾಪಟ್ಟಿಯಲ್ಲಿ ಬದಲಿಸುವಂತೆ ರೈಲು ಪ್ರಯಾಣಿಕರು ಆಗ್ರಹಿಸಿದ್ದಾರೆ.

Advertisement

ಮಂಗಳೂರಿನ ರೈಲು ನಿಲ್ದಾಣದಲ್ಲಿ ಬೆಳಗ್ಗಿನ ಹೊತ್ತಿನಲ್ಲಿ ಬಹಳಷ್ಟು ರೈಲುಗಳು ಬಂದು ಹೋಗುವುದರಿಂದ ಪ್ಲಾಟ್‌ ಫಾರ್ಮ್ನಲ್ಲಿ ಕೊರತೆಯ ಕಾರಣದಿಂದಾಗಿ ವಾರದ ನಾಲ್ಕು ದಿನ ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಬದಲಾಗಿ ರೈಲು 10.30ಕ್ಕೆ ಹೊರಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಅನ್ಯಾಯವಾಗಲಿದೆ. ಪ್ರಸ್ತುತ ರೈಲು ಕುಂದಾಪುರಕ್ಕೆ ಬೆಳಗ್ಗೆ 10.56ಕ್ಕೆ ತಲುಪುತ್ತಿದ್ದು, ಬೆಂಗಳೂರಿನಿಂದ ಹೊರಡುವ ಸಮಯವನ್ನು 7.30ಕ್ಕೆ ನಿಗದಿಪಡಿಸಬೇಕು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಬೇಡಿಕೆ ಇಟ್ಟಿದೆ.

ಕುಣಿಗಲ್‌ ಮೂಲಕ ರೈಲು ಸಂಚರಿಸುವುದರಿಂದ  ಸುಮಾರು 90 ಕಿ.ಮೀ. ಉಳಿತಾಯವಾಗಲಿದ್ದು, ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಮಂಗಳೂರಿಗೆ ಬೆಳಗ್ಗೆ ಸುಮಾರು 6 ಗಂಟೆಗೆ ತಲುಪುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಈಗಾಗಲೇ ನಿರ್ಧರಿಸಿದಂತೆ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ರೈಲು ಹೊರಟರೆ ಉಡುಪಿ, ಕುಂದಾಪುರಕ್ಕೆ ತಲುಪುವಾಗ ಸಾಕಷ್ಟು ವಿಳಂಬವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರಿಗೆ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಲಿದೆ ಎನ್ನುವುದು ಪ್ರಯಾಣಿಕರ ಅಭಿಪ್ರಾಯ.

ಬೆಂಗಳೂರಿನಿಂದ ರೈಲು ಹೊರಡುವ ಸಮಯವನ್ನು ಬದಲಾಯಿಸುವಂತೆ ಮಾಡಲಾದ ಬೇಡಿಕೆಗೆ ನೈಋತ್ಯ ರೈಲ್ವೇ ಮುಖ್ಯ ನಿರ್ವಹಣಾಧಿಕಾರಿ ಎಚ್‌.ಎಂ. ದಿನೇಶ್‌ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಮೂರು ರೈಲು ವಲಯಗಳ ಹೊಂದಾಣಿಕೆ ಬೇಕಾಗಿರುವುದರಿಂದ ಮೂರು ವಲಯಗಳ ಹಿರಿಯ ಅಧಿಕಾರಿಗಳ ಜಂಟಿಯಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಮಂಗಳೂರು ರೈಲು ನಿಲ್ದಾಣವನ್ನು 4.30.-5 ಗಂಟೆಗೆ ತಲುಪುವಂತೆ ಬೆಂಗಳೂರಿನಿಂದ ಬೇಗ ರೈಲು ಹೊರಟಲ್ಲಿ ಕುಂದಾಪುರ, ಉಡುಪಿ ಭಾಗಗಳಿಗೆ ತೆರಳುವವರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದರಿಂದಾಗಿ ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next