Advertisement

“ಬೆಂಗಳೂರು ಕಂಬಳ-ನಮ್ಮ ಕಂಬಳ” ಪೂರ್ವಭಾವಿಯಾಗಿ ಕುದಿ ಕಂಬಳಕ್ಕೆ ಇಂದು ಚಾಲನೆ

10:14 AM Nov 22, 2023 | Team Udayavani |

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯಲಿರುವ “ಬೆಂಗಳೂರು ಕಂಬಳ -ನಮ್ಮ ಕಂಬಳ’ದ ಪೂರ್ವಭಾವಿಯಾಗಿ ಬುಧವಾರ ಕುದಿ ಕಂಬಳಕ್ಕೆ ಚಾಲನೆ ಸಿಗಲಿದೆ.

Advertisement

ಚಿತ್ರ ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಅವರು ಬೆಳಗ್ಗೆ 10ಕ್ಕೆ ಅರಮನೆ ಮೈದಾನದ 5ನೇ ಗೇಟ್‌ನಲ್ಲಿ ನಿರ್ಮಿಸಲಾದ ಕಣದಲ್ಲಿ ಕುದಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಅರಮನೆ ಮೈದಾನದಲ್ಲಿ ಕಂಬಳದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ವೇದಿಕೆ, ಆಸನ, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಹಗಲಿರುಳು ಶ್ರಮಿಸುತ್ತಿದೆ. ಜತೆಗೆ ಸ್ಟಾಲ್‌ಗ‌ಳ ನೋಂದಣಿ ಕೆಲಸವು ಭರದಿಂದ ನಡೆಯುತ್ತಿದೆ.

ಏನಿದು ಕುದಿ ಕಂಬಳ?
ಕಂಬಳ ಸ್ಪರ್ಧಾಕೂಟ ಸಮೀಪಿಸುತ್ತಿದ್ದಂತೆ ಕುದಿ ಕಂಬಳ ಆಯೋಜಿಸಲಾಗುತ್ತದೆ. ಕರಾವಳಿಯಲ್ಲಿ ಸ್ಪರ್ಧೆ ನಡೆಯುವ ಒಂದು ತಿಂಗಳ ಮೊದಲು ಕುದಿ ಕಂಬಳ ಎಂಬ ಕೋಣಗಳ ಓಟದ ರಿಹರ್ಸಲ್‌ ಅಥವಾ ಓಟದ ತಾಲೀಮು ಮಾಡಲಾಗುತ್ತದೆ. ಈ ವೇಳೆ ಕೋಣಗಳಿಗೆ ಹುರಿದುಂಬಿಸುವ ಕೆಲಸವಾಗುತ್ತದೆ. ಅಂತೆಯೇ ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ಬುಧವಾರ ಮಂಗಳೂರಿನಿಂದ ಆಗಮಿಸಿದ ಎರಡು ಜೋಡಿ ಕೋಣಗಳು ಕುದಿ ಕಂಬಳದ ಟ್ರಯಲ್‌ಗೆ ಇಳಿಯಲಿದೆ.

ಬಣ್ಣ -ಲೈಟಿಂಗ್‌ ಕೆಲಸ
ಕೋಣಗಳು ಓಡುವ ಕರೆ (ಟ್ರ್ಯಾಕ್‌)ಗೆ ಪ್ರಾರಂಭ ಹಾಗೂ ಕೊನೆಯಲ್ಲಿ ಬಣ್ಣ ಬಳಿಯುವ ಕೆಲಸಗಳು ನಡೆಯುತ್ತಿದೆ. ಇನ್ನೂ ಕಂಬಳ ರಾತ್ರಿಯೂ ನಡೆಯುವುದರಿಂದ ಅಲ್ಲಲ್ಲಿ ಹೈಮಾಸ್ಟ್‌ ದೀಪಗಳನ್ನು ಆಳವಡಿಸಲಾಗುತ್ತಿದೆ. ಜತೆಗೆ ಕರೆಯ ಸುತ್ತಮುತ್ತಲಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಗತ್ಯವಿರುವ ವ್ಯವಸ್ಥೆಗಳು ನಡೆಯುತ್ತಿವೆ.

ಕಂಬಳ ಪಕ್ಷಾತೀತಿ ಕಾರ್ಯಕ್ರಮ: ಅಶೋಕ್‌ ರೈ
ಬೆಂಗಳೂರು: ಬೆಂಗಳೂರು ಕಂಬಳ ನಮ್ಮ ಕಂಬಳ ಪಕ್ಷಾತೀತಿ ಕಾರ್ಯಕ್ರಮವಾಗಿದೆ. ಎಲ್ಲ ಪಕ್ಷದವರನ್ನು ಆಹ್ವಾನಿಸಲಾಗಿದೆ. ಇದು ರಾಜಕೀಯ ಕಾರ್ಯಕ್ರಮವಲ್ಲ ಎಂದು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಂಬಳ ಒಂದು ದೊಡ್ಡ ಕ್ರೀಡೆಯಾಗಿದೆ. ಇದಕ್ಕಾಗಿ ಬೇರೆ ಬೇರೆ ಸಂಘಟನೆಯವರು ಒಂದಾಗಿದ್ದಾರೆ. ಸಿದ್ದಿ ಜನಾಂಗದವರು ಬಂದು ಬ್ರಿಜ್‌ ಭೂಷಣ್‌ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಕೋರಿದ್ದರು. ಆದರೆ ಮೊನ್ನೆಯೇ ತಾನು ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದಾಗಿ ತಿಳಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ, ಅದನ್ನು ಬದಲು ಮಾಡುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next