ನವದೆಹಲಿ: ತಾಂತ್ರಿಕ ಕ್ಷೇತ್ರದಲ್ಲಿ ಬೆಳೆಯಬೇಕೆಂದರೆ ವಿದೇಶಕ್ಕೆ ತೆರಳಬೇಕೆಂಬ ಕಾಲವೊಂದಿತ್ತು. ಆದರೆ ಈಗ ಕರ್ನಾಟಕದ ರಾಜಧಾನಿ ತಾಂತ್ರಿಕವಾಗಿ ಎಷ್ಟೊಂದು ಬೆಳೆದಿದೆಯೆಂದರೆ ವಿದೇಶಗಳ ಜನರೂ ಇಲ್ಲಿಗೇ ಬಂದು ಸ್ಟಾರ್ಟ್‌ಅಪ್ ಗಳನ್ನು ಆರಂಭಿಸುತ್ತಿದ್ದಾರೆ. ಇತ್ತೀಚೆಗೆ ಬಂದ ವರದಿಯೊಂದರ ಪ್ರಕಾರ, ಪೂರ್ತಿ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರು ನಗರಗಳ ಪೈಕಿ ಬೆಂಗಳೂರು ಕೂಡ ಒಂದಾಗಿದೆ.
ವೇಗದ ಬೆಳವಣಿಗೆಯ ಕಾರಣದಿಂದಲೇ ನಗರದಲ್ಲಿ ವಿದೇಶಿ ಹೂಡಿಕೆಗಳೂ ಗಣನೀಯವಾಗಿ ಏರಿದೆ. 2016ರಲ್ಲಿ 10 ಸಾವಿರ ಕೋಟಿ ರೂ.ನಷ್ಟಿದ್ದ ವಿದೇಶಿ ಬಂಡವಾಳ 2020ಕ್ಕಾಗಲೇ 57 ಸಾವಿರ ಕೋಟಿ ರೂ.ಗಿಂತ ಹೆಚ್ಚಾಗಿದೆ. ಬೆಂಗಳೂರು ಸ್ಟಾರ್ಟ್‌ಅಪ್ ಹಬ್ ಆಗಿ ಬೆಳೆಯಲಾರಂಭಿಸಿವೆ. ಈ ನಗರ ಜ್ಞಾನ ಉಳ್ಳವರಿಗೆ ಉತ್ತಮ ವೇದಿಕೆಯಾಗಿದೆ ಎನ್ನುತ್ತಾರೆ ನಗರದಲ್ಲಿ ಸ್ಟಾರ್ಟ್‌ಅಪ್ ಗಳನ್ನು ಆರಂಭಿಸಿಕೊಂಡಿರುವ ತಜ್ಞರು.
“ನಾವು ನಮ್ಮ ಗೇಮಿಂಗ್ ಸ್ಟಾರ್ಟ್‌ಅಪ್ ಸ್ಥಾಪನೆಗೆಂದು ಫಿನ್ಲಂಡ್, ಕೆನಡಾ, ಲ್ಯಾಟಿನ್ ಅಮೆರಿಕದಂತಹ ಪ್ರದೇಶಗಳ ಬಗ್ಗೆ ಯೋಚಿಸಿದ್ದೆವು. ಆದರೆ ಬೆಂಗಳೂರು ನಮ್ಮ ಸ್ಟಾರ್ಟ್‌ಅಪ್ ಗೆ ಅತ್ಯುತ್ತಮ ಸ್ಥಳ ಎಂದು ಇಲ್ಲೇ ಅದನ್ನು ಆರಂಭಿಸಿದ್ದೇವೆ. ಇಲ್ಲಿನ ಜನರು ಯಾವಾಗಲೂ ಏನಾದರೂ ಕಲಿಯುವುದಕ್ಕೆ ಬಯಸುವಂಥವರು’ ಎಂದು ನಗರವನ್ನು ಹೊಗಳುತ್ತಾರೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬಂದು ಸ್ಟಾರ್ಟ್‌ಅಪ್ ಆರಂಭಿಸಿರುವ ಜೋಸೆಫ್ ಕಿಮ್(49).
ಕೇವಲ ಬೆಂಗಳೂರು ಮಾತ್ರವಲ್ಲ, ಮಲೇಷ್ಯಾದ ಕೌಲಾಲಂಪುರ, ಯುರೋಪ್‌ನ , ಅರಬ್ ಸಂಯುಕ್ತ ಸಂಸ್ಥಾನದ ದುಬೈ, ಮೆಕ್ಸಿಕೋ ರಾಷ್ಟ್ರದ ಮೆಕ್ಸಿಕೋ ನಗರ, ಬ್ರೆಜಿಲ್‌ನ ರಿಯೋ ಡಿ ಜನೈರೋ ನಗರಗಳೂ ಕೂಡ ಸ್ಟಾರ್ಟ್‌ಅಪ್ ಗಳಿಗೆ ಉತ್ತಮ ವೇದಿಕೆಯಾಗಿವೆ.