Advertisement

“ಪಬ್‌’ಸಂಸ್ಕೃತಿಗೆ ತಬ್ಬಿಬ್ಬಾಗಿದೆ ಬೆಂಗಳೂರು!

12:06 PM Jul 02, 2019 | Lakshmi GovindaRaj |

ಸಂಜೆಗತ್ತಲಾಗುತ್ತಲೇ ಆರಂಭವಾಗುವ ಸಂಗೀತ, ಹೊತ್ತು ಸರಿದಂತೆಲ್ಲಾ ಸ್ವಲ್ಪ ಸ್ವಲ್ಪವೇ ಏರುವ ಮತ್ತು, ರಾತ್ರಿ ಕತ್ತಲು ಆವರಿಸಿದಂತೆ ಕಿವಿ ಮುಚ್ಚುವ ಮಟ್ಟಿಗೆ ಜೋರಾಗುವ ಮ್ಯೂಸಿಕ್‌, ಅಮಲಲ್ಲಿ ತೇಲುವ ಜನರಿರುವ ಕೋಣೆಯೊಳಗೆ ಕೆಂಪು, ಹಸಿರು, ಹಳದಿ ಬೆಳಕಿನ ಬಂದು ಹೋಗುವ ಆಟ, ಹೊಗೆ ಆವರಿಸಿದ ಮಂದ ಬೆಳಕಿನ ರೂಮಿನಲ್ಲಿ ಮತ್ತೇರಿದ ಜನರ ನರ್ತನ… ಇದು ಪಬ್‌ಗಳ ಸಾಮಾನ್ಯ ಚಿತ್ರಣ. ಈ ಸಂಸ್ಕೃತಿ ಇತ್ತೀಚೆಗೆ ಬೆಂಗಳೂರಿನ ಯುವ ಜನರಿಗೆ ಹುಚ್ಚು ಹಿಡಿಸುತ್ತಿದೆ. ಈಗೀಗ ವಸತಿ ಪ್ರದೇಶಗಳಲ್ಲೂ ಪಬ್‌ಗಳು ಸದ್ದು ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿವೆ. ಇಂಥ ಪಬ್‌ಗಳನ್ನು ನಡೆಸಲು ಇರುವ ನಿಯಮಗಳೇನು? ಉಲ್ಲಂ‍ಘಿಸುವವರ ವಿರುದ್ಧ ಕೈಗೊಂಡ ಕ್ರಮಗಳೇನು? ಎಂಬುದರ ನೋಟ ಈ ಬಾರಿಯ ಸುದ್ದಿ ಸುತ್ತಾಟ

Advertisement

ರಾಜಧಾನಿಯಲ್ಲಿ ಪಬ್‌ ಸಂಸ್ಕೃತಿ ಬೇರುಬಿಟ್ಟಿದ್ದು, ಯುವ ಸಮೂಹ ರಂಗು ರಂಗಿನ, ಮಿಣುಕು ಬೆಳಕಿನ, ಜೋರು ಸಂಗೀತದ ತಾಳ ಮೇಳಕ್ಕೆ ಮನಸೋತಿದ್ದಾರೆ. ಇದರ ಬೆನ್ನಲ್ಲೇ ಪಬ್‌ಗಳಲ್ಲಿ ಅನಾಹುತಗಳು ಪುನರಾವರ್ತನೆಯಾಗುತ್ತಲೇ ಇವೆ. ಸಾಕಷ್ಟು ನಿರ್ಬಂಧಗಳ ನಡುವೆಯೂ ಈ ರೀತಿಯ ಘಟನೆಗಳು ಆಂತಕ ಸೃಷ್ಟಿಸಿವೆ. ಹಾಗಿದ್ದರೆ ಸಾವಿರಾರು ಜನ ಸೇರುವ ಈ ಪಬ್‌-ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಮೂಡಿದೆ.

ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳಲ್ಲೂ ಸದ್ದು ಮಾಡುತ್ತಿರುವ ಪಬ್‌ಗಳು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿ, ನೆಮ್ಮದಿ ಕಸಿದುಕೊಂಡಿವೆ ಎಂಬ ಆರೋಪವೂ ಇದೆ. ಮನರಂಜನೆಯ ರಸದೌತಣದ ಕೇಂದ್ರಗಳಾದ ಪಬ್‌ಗಳಿಂದ ಕೋಟ್ಯಂತರ ರೂ. ಆದಾಯ ಸರ್ಕಾರದ ಖಜಾನೆ ಸೇರುತ್ತಿದೆ. ಆದರೆ, ಇತ್ತೀಚಿನ ಘಟನೆಗಳು ಕೆಲವು ಪಬ್‌ಗಳು ಸುರಕ್ಷಿತವಲ್ಲ ಎಂಬ ಭಾವನೆಯನ್ನು ಮೂಡಿಸಿವೆ. ಇವುಗಳಿಗೆ ಕಡಿವಾಣ ಹಾಕುವುದು ಸ್ವತಃ ಪೊಲೀಸ್‌ ಇಲಾಖೆಗೂ ಬಿಸಿತುಪ್ಪವಾಗಿದೆ.

ವಾಣಿಜ್ಯ ಉದ್ದೇಶಗಳಿಗಳಿಗಷ್ಟೇ ಉತ್ತೇಜನ ನೀಡುವ ಬಿಬಿಎಂಪಿ, ಸುರಕ್ಷತೆಯನ್ನು ಗಾಳಿಗೆ ತೂರುತ್ತಿದೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ. ಬೆಂಗಳೂರು ದೇಶದ “ಪಬ್‌ಸಿಟಿ’ ಎಂದೇ ಪ್ರಖ್ಯಾತಿ ಗಳಿಸಿದೆ. ದೇಶದ ಉಳಿದ ನಗರಗಳಿಗಿಂತ ಇಲ್ಲಿ ಪಬ್‌ಗಳಿಗೆ ಬೇಡಿಕೆ ಮತ್ತು ಉತ್ತಮ ವಾತಾವರಣ ಇರುವುದೇ ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ವಸತಿ ಸಮುಚ್ಛಯದ ಮಧ್ಯೆಯೇ ಪಬ್‌ಗಳು ತಲೆಯೆತ್ತುತ್ತಿವೆ.

ಅಲ್ಲಿ ರಾತ್ರಿ 1 ಗಂಟೆವರೆಗೆ ಜೋರಾಗಿ ಮ್ಯೂಸಿಕ್‌ ಹಾಕುವುದು, ಪಬ್‌ಗಳಿಗೆ ಬರುವವರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಮತ್ತು ಅಸಭ್ಯವಾಗಿ ವರ್ತಿಸುತ್ತಿರುವುದು ಸುತ್ತಲ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅಷ್ಟೇ ಅಲ್ಲ, ನಿತ್ಯ ಕೆಲಸ ಒತ್ತಡದಿಂದ ಹೈರಾಣಾಗಿ ಬರುವ ನಿವಾಸಿಗಳು ಪಬ್‌ನಿಂದ ಉಂಟಾಗುತ್ತಿರುವ ತೊಂದರೆಯಿಂದ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ.

Advertisement

ಪಬ್‌ಗಳು ಅಳವಡಿಸಿಕೊಳ್ಳಬೇಕಾದ ಸೌಂಡ್‌ ಪ್ರೂಫಿಂಗ್‌ (ಶಬ್ದ ನಿಯಂತ್ರಕ) ಸಾಧನಗಳನ್ನು ವಸತಿ ಪ್ರದೇಶದ ನಿವಾಸಿಗಳು ತಮ್ಮ ಮನೆಯ ಕೋಣೆಗಳಿಗೆ ಅಳವಡಿಸಿಕೊಂಡಿರುವ ಉದಾಹರಣೆಯೂ ಇದೆ. ಪಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೆಂಕಿ ನಂದಿಸುವ, ಎಚ್ಚರಿಸುವ ಸಾಧನಗಳಿರಬೇಕು ಹಾಗೂ ಅವಘಡಗಳು ಸಂಭವಿಸಿದರೆ ಸಾರ್ವಜನಿಕರು ತಪ್ಪಿಸಿಕೊಳ್ಳಲು ತುರ್ತು ಮಾರ್ಗಗಳಿರಬೇಕು ಎನ್ನುವ ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದ ಪಬ್‌ಗಳಿಗೆ 2017-18ರಲ್ಲಿ 83 ಪಬ್‌ಗಳಿಗೆ ಅಗ್ನಿಶಾಮಕ ಇಲಾಖೆ ನೋಟಿಸ್‌ ಸಹ ನೀಡಿತ್ತು.

ಪಬ್‌ಗಳು 15 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿದ್ದರೆ ವಿಶೇಷ ಸಾಧನಗಳನ್ನು ಅಳವಡಿಸಿರಬೇಕು ಎನ್ನುವ ನಿಯಮವನ್ನು ರೂಪಿಸಲಾಗಿದೆ. ಈ ನಿಯಮ ಪಾಲನೆಯಾಗಿಲ್ಲ. ಬಹುತೇಕ ಪಬ್‌ಗಳು ಕಡಿಮೆ ಸ್ಥಳಾವಕಾಶದಲ್ಲಿ ಇರುವುದರಿಂದ ಅವಘಡಗಳು ಸಂಭವಿಸಿದರೆ ಸಾರ್ವಜನಿಕರು ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಇನ್ನು ಪಬ್‌ಗಳಲ್ಲಿರುವ ಸ್ಕೈವಾಕ್‌ಗಳ ಪಕ್ಕದಲ್ಲಿ ಯಾವುದೇ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಇತ್ತೀಚೆಗೆ ಚರ್ಚ್‌ಸ್ಟ್ರೀಟ್‌ನ ಪಬ್‌ವೊಂದರ 2ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪವನ್‌ ಅತ್ತಾವರ್‌ ಹಾಗೂ ವೇದಾ.ಆರ್‌ ಎಂಬುವರು ಮೃತಪಟ್ಟಿದ್ದರು.

12 ಇಲಾಖೆಗಳ ಅನುಮತಿ ಬೇಕು: ಪಬ್‌ ಮತ್ತು ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳನ್ನು ನಡೆಸಬೇಕಾದರೆ ಸುಮಾರು 12 ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಅವುಗಳ ನಡುವೆ ಸಮನ್ವಯದ ಕೊರತೆ ಇದೆ. ಜವಾಬ್ದಾರಿಯ ವಿಷಯ ಬಂದಾಗ ಪ್ರತಿಯೊಂದು ಇಲಾಖೆಯೂ ನುಣಿಚಿಕೊಳ್ಳುತ್ತವೆ. ಪಬ್‌ಗಳಲ್ಲಿ ಸುರಕ್ಷತಾ ಕ್ರಮಗಳ ಜಾರಿ ಯಾರ ವ್ಯಾಪ್ತಿಗೆ ಬರುತ್ತದೆ, ಇದನ್ನು ತಡೆಯುವುದು ಹೇಗೆ, ಯಾವೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ.

ವಸತಿ ಪ್ರದೇಶಗಳಲ್ಲಿ ಪಬ್‌ಗಳು ನಾಯಿಕೊಡೆಗಳಂತೆ ನಿರ್ಮಾಣವಾಗುತ್ತಿದ್ದು, ಕೋರಮಂಗಲ ಮತ್ತು ಇಂದಿರಾನಗರದ ನಿವಾಸಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇಂದಿರಾನಗರದ ಡಿಫೆನ್ಸ್‌ ಕಾಲೊನಿ ನಿವಾಸಿಗಳ ಸಂಘ ಸೇರಿದಂತೆ ಹಲವು ನಾಗರೀಕ ಸಂಘಟನೆಗಳು ಹಾಗೂ ಆ ಭಾಗದ ನಿವಾಸಿಗಳು, “ಜನವಸತಿ ಪ್ರದೇಶಗಳಲ್ಲಿನ ಪಬ್‌ ಹಾಗೂ ಬಾರ್‌ಗಳಿಂದ ವಿಪರೀತ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಅದನ್ನು ತಡೆಯಲು ಆಡಳಿತ ವಿಫ‌ಲವಾಗಿದೆ’ ಎಂದು ಆರೋಪಿಸಿ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.

ನಗರದ ಜನವಸತಿ ಪ್ರದೇಶಗಳಲ್ಲಿ ಪಬ್‌ ಹಾಗೂ ರೆಸ್ಟೋರೆಂಟ್‌ಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಗೆ ಕ್ರಮಕೈಗೊಳ್ಳಲು ನಿರ್ಲಕ್ಷ್ಯ ತೋರುತ್ತಿರುವ ನಗರ ಪೊಲೀಸರ ವಿರುದ್ಧ ಹೈಕೋರ್ಟ್‌ ಸಹ ಕಿಡಿ ಕಾರಿದೆ. “ಶಬ್ದ ಮಾಲಿನ್ಯ (ನಿಯಂತ್ರಣ ಹಾಗೂ ತಡೆ) ಅಧಿನಿಯಮ-2000ರ ನಿಯಮ 3 ಉಪನಿಯಮ 2ರ’ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎನ್ನುವುದು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಶಬ್ದ ಮಾಲಿನ್ಯ ಪ್ರಮಾಣದ ಮಾಪನಕ್ಕಾಗಿ 51 ಮೀಟರ್‌ಗಳನ್ನು ಖರೀದಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ. ನಿಯಮಾವಳಿ ಉಲ್ಲಂಘನೆ ಕಾರಣಗಳಿಗಾಗಿ 61 ಪಬ್‌ ಮತ್ತು ಬಾರ್‌ಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಕೋರ್ಟ್‌ಗೆ ಮಾಹಿತಿ ನೀಡಿದೆ. ಆದರೆ, ಪೊಲೀಸ್‌ ಇಲಾಖೆ ಪಬ್‌ಗಳಿಂದ ಉಂಟಾಗುತ್ತಿರುವ ಶಬ್ದದ ಪ್ರಮಾಣವನ್ನು ತಿಳಿದುಕೊಳ್ಳಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನೇ ಅವಲಂಬಿಸಿದೆ.

ಪೊಲೀಸ್‌ ಇಲಾಖೆಯಲ್ಲಿ ಶಬ್ದ (ಕಂಪನಾಂಕ) ಮೀಟರ್‌ ಮತ್ತು ತಜ್ಞರ ಲಭ್ಯತೆ ಇಲ್ಲ. ಹೀಗಾಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಯೇ ಪೊಲೀಸರಿಗೆ ನೆರವಾಗುತ್ತಿದ್ದಾರೆ. ಪೊಲೀಸರು ನೂತನ ಸಾಧನಗಳನ್ನು ಖರೀದಿಸಲು ಮಾರ್ಗದರ್ಶನವನ್ನೂ ನೀಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಾಹಿತಿ ನೀಡಿದರು.

“ಪಬ್‌ಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿರುವ ತೆಳುವಾದ ಪರದೆಗಳು ಮತ್ತು ಪ್ಲಾಸ್ಟಿಕ್‌ ವಸ್ತುಗಳು ಹಾಗೂ ಮದ್ಯದಲ್ಲಿರುವ ರಾಸಾಯನಿಕ ಅಂಶ ಬೆಂಕಿ ಸ್ಪರ್ಶಕ್ಕೆ ಬೇಗ ಒಳಗಾಗುತ್ತದೆ. ಇದನ್ನು ತಡೆಯಲು ಬೆಂಕಿ ನಂದಿಸುವ ಸಾಧನಗಳು ಅತ್ಯಗತ್ಯವಾಗಿ ಇರಬೇಕಾಗುತ್ತದೆ. ಆದರೆ, ನಗರದ 10 ಪಬ್‌ಗಳ ಪೈಕಿ, 7 ಪಬ್‌ಗಳಲ್ಲಿ ಇದು ಕಾಣಸಿಗುವುದಿಲ್ಲ’ ಎನ್ನುತ್ತಾರೆ ಮಾಧ್ಯಮ ಸಂಸ್ಥೆಯ ಉದ್ಯೋಗಿ ಯಶಸ್‌.

ಪಬ್‌ಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಮೊದಲೇ ಕುಡಿದ ಅಮಲಿನಲ್ಲಿರುವವರಿಗೆ ಅವಘಡಗಳಿಗೆ ಬೇಗ ಸ್ಪಂದಿಸುವ ಸಾರ್ಮಥ್ಯ ಖಂಡಿತವಾಗಿಯೂ ಇರುವುದಿಲ್ಲ. ಬಹುತೇಕ ಪಬ್‌ಗಳಲ್ಲಿ ಬೆಂಕಿ ಅವಘಡಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಅಥವಾ ಮುನ್ಸೂಚನೆ ನೀಡುವ ಫ‌ಲಕಗಳು ಇರುವುದಿಲ್ಲ. ಬೆಂಕಿಯನ್ನು ನಂದಿಸುವ ಸಾಧನಗಳಾಗಲಿ, ಮಾರ್ಗ ಸೂಚಿಗಳಾಗಲಿ ಇರುವುದಿಲ್ಲ. ಇದರ ಬಗ್ಗೆ ಸಾರ್ವಜನಿಕರೂ ಪ್ರಶ್ನಿಸುವುದಿಲ್ಲ. ಆದರೆ, ಬೆಂಕಿ ನಂದಿಸುವ ಸಾಧನಗಳು ಪಬ್‌ಗಳಲ್ಲಿ ಇರಲೇಬೇಕು’ ಎಂದು ಅವರು ವಿವರಿಸುತ್ತಾರೆ.

ಪ್ರಶ್ನಿಸುವವರೇ ಇಲ್ಲ: ಪಬ್‌ಗಳಲ್ಲಿ ಬಳಸುವ ಲೇಸರ್‌ ಮಾದರಿ ಬೆಳಕಿನ ಕಿರಣಗಳು ಎಷ್ಟು ಪ್ರಮಾಣದಲ್ಲಿ ಇರಬೇಕು, ಅದರ ಪ್ರಖರತೆ ಯಾವ ಪ್ರಮಾಣದಲ್ಲಿ ಇರಬೇಕು ಎನ್ನುವುದಕ್ಕೆ ಯಾವ ನಿಯಮಗಳೂ ಇಲ್ಲ. ಪಬ್‌ಗಳಲ್ಲಿ ಬಳಸುವ ಬೆಳಕಿನ ಕಿರಣಗಳಿಂದ ಅಲ್ಲಿ ಇರುವವರಿಗೆ ತಮ್ಮ ಕೂಗಳತೆಯ ದೂರದಲ್ಲಿ ಏನು ನಡೆಯುತ್ತಿದೆ ಎನ್ನುವುದೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಹೀಗಾಗಿ, ಪಬ್‌ಗಳಲ್ಲಿ ಗಾಢವಾದ ಬಣ್ಣಗಳನ್ನು ಬಳಸದೆ, ತಿಳಿ ಬಣ್ಣಗಳನ್ನು ಬಳಸಬೇಕು ಎನ್ನುವ ಒತ್ತಾಯವೂ ಇದೆ.

ರಾಜಧಾನಿಯಲ್ಲಿ 427 ಪಬ್‌ಗಳಿವೆ!: ನಗರದಲ್ಲಿ 427 ಪಬ್‌ಗಳಿವೆ. ಇದರಿಂದ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಕೋಟ್ಯಂತರ ರೂ.ಗಳು ಹರಿದು ಬರುತ್ತಿದೆ. ಪಬ್‌ಗಳಿಂದ ಸಾವಿರಾರು ಜನರಿಗೆ ಉದ್ಯೋಗವೂ ಸೃಷ್ಟಿಯಾಗಿದ್ದು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ 1,17,660 ಜನ ಬದುಕು ರೂಪಿಸಿಕೊಂಡಿದ್ದಾರೆ ಎಂದು ನ್ಯಾಷನಲ್‌ ರೆಸ್ಟೋರೆಂಟ್‌ ಅಸೋಸಿಯೇಷನ್‌ ತನ್ನ ವರದಿಯಲ್ಲಿ ಉಲ್ಲೇಖೀಸಿದೆ. ಭಾರತೀಯ ರಾಷ್ಟ್ರೀಯ ಹೋಟೆಲ್‌ಗ‌ಳ ಸಂಘದ (ಆಹಾರ ತಯಾರಿಕೆ ಮತ್ತು ಮಾರಾಟ) 2018-19ನೇ ಸಾಲಿನ ವರದಿಯಲ್ಲಿ ಉಲ್ಲೇಖೀಸಿರುವಂತೆ 20 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಉದ್ಯಮವು 20,014 ಕೋಟಿ ರೂ. ವಹಿವಾಟು ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಮಾಣದಲ್ಲಿ ವಹಿವಾಟು ನಡೆಯುವ ಕ್ಷೇತ್ರ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಾರ್ವಜನಿಕ ಮನರಂಜನೆ ಪರವಾನಗಿ ಪಡೆಯುವುದು ಗೋಜಲು ಮಯವಾಗಿದೆ. ಈಗಾಗಲೇ ವಸತಿ ಪ್ರದೇಶಗಳಲ್ಲಿ ಪಬ್‌ಗಳು ಇದೆ ಎಂದು ಕೋರಮಂಗಲ, ಇಂದಿರಾ ನಗರ, ಜಯನಗರ ಮತ್ತು ಲ್ಯಾವೆಲ್ಲೆ ರಸ್ತೆಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್‌ ಸಹ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

“ಪರವಾನಗಿ ಪಡೆಯುವುದಕ್ಕೆ ಹಲವು ಅಡೆತಡೆಗಳಿದ್ದು, ಪರವಾನಗಿ ನವೀಕರಣ, ಅಬಕಾರಿ ಇಲಾಖೆಯಿಂದ ಅನುಮತಿಗೆ ಹಲವು ಅಡ್ಡಿಗಳು, ಲೈವ್‌ ಮ್ಯೂಸಿಕ್‌ಗೆ ಅನುಮತಿ ಇಲ್ಲದಿರುವುದು ಹಾಗೂ ಅಗ್ನಿಶಾಮಕ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಲು ಜಾಗ ಸೇರಿದಂತೆ ಕೆಲವು ಸಮಸ್ಯೆಗಳು ಉಂಟಾಗಿರುವುದು ಈ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತಿದೆ.

ವಯೋಮಿತಿ 18ಕ್ಕೆ ಇಳಿಸುವಂತೆ ಒತ್ತಾಯ: ಈ ಮಧ್ಯೆ, ಮದ್ಯಪಾನದ ವಯೋಮಿತಿಯನ್ನು ರಾಜ್ಯದಲ್ಲಿ 21ರಿಂದ 18 ವರ್ಷಕ್ಕೆ ಇಳಿಸುಂತೆ ಹಲವು ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಮನವಿ ಮಾಡುತ್ತಲೇ ಇದ್ದಾರೆ. ರಾಜ್ಯದಲ್ಲಿ 21 ವರ್ಷದ ಒಳಗಿನವರು ಮದ್ಯಪಾನ ಮಾಡುವಂತಿಲ್ಲ ಎನ್ನುವ ನಿಯಮವಿದೆ. ಆದರೆ, ಮತ ಚಲಾಯಿಸಲು, ವಾಹನ ಚಾಲನೆ ಮಾಡಲು ಮತ್ತು ಸಿಗರೇಟ್‌ ಸೇದುವುದಕ್ಕೆ ಅನುಮತಿ ನೀಡಿರುವಾಗ, 18 ವರ್ಷ ಮೇಲ್ಪಟ್ಟವರಿಗೆ ಬಿಯರ್‌ ಕುಡಿಯುವುದಕ್ಕೆ ನಿರ್ಬಂಧ ವಿಧಿಸಿರುವುದು ಸಮಂಜಸವಲ್ಲ ಎನ್ನುವುದು ಅಸೋಸಿಯೇಷನ್‌ಗಳ ವಾದವಾಗಿದೆ.

ಬಾಂಬ್‌ ಸ್ಫೋಟಗೊಂಡಾಗಲೂ ತಿಳಿದಿರಲಿಲ್ಲ: ಪಬ್‌ಗಳಲ್ಲಿ ಶಬ್ದ ಯಾವ ಪ್ರಮಾಣದಲ್ಲಿ ಇರುತ್ತದೆ? ಅಲ್ಲಿರುವವರು ಹೊರ ಪ್ರಪಂಚದೊಂದಿಗೆ ಹೇಗೆ ಸಂಪರ್ಕ ಕಳೆದುಕೊಂಡಿರುತ್ತಾರೆ ಎನ್ನುವುದಕ್ಕೆ 2014ರಲ್ಲಿ ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟವೇ ಸಾಕ್ಷಿ. ವಾರಾತ್ಯಂದ ದಿನ ಈ ಬಾಂಬ್‌ ದಾಳಿಯಾಗಿತ್ತು. ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ಗಳಲ್ಲಿ ಜನ ಸೇರಿದ್ದರು. ಆದರೆ, ಬಹುತೇಕರಿಗೆ ಬಾಂಬ್‌ ಸ್ಫೋಟಗೊಂಡ ವಿಷಯವೇ ಗೊತ್ತಿರಲಿಲ್ಲ! ಖುದ್ದು ಪೊಲೀಸರೇ ಪಬ್‌ಗಳನ್ನು ಪ್ರವೇಶಿಸಿ ಇದರ ಬಗ್ಗೆ ಮಾಹಿತಿ ನೀಡಿದ್ದರು. ಈ ಬಾಂಬ್‌ ದಾಳಿಯಲ್ಲಿ ಒಬ್ಬ ಮಹಿಳೆ ಮೃತಪಟ್ಟು, ಮೂವರು ಗಾಯಗೊಂಡಿದ್ದರು.

ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ: ಪಬ್‌ಗಳ ಸುತ್ತಲಿನ ಪ್ರದೇಶದಲ್ಲಿ ಸೆಟ್‌ಬ್ಯಾಕ್‌ ಇಲ್ಲದಿರುವುದೂ ಸಹ ಅವುಗಳಿಗೆ ಅನುಮತಿ ನೀಡುವುದಕ್ಕೆ ಸಮಸ್ಯೆಯಾಗಿದೆ. ಕೆಲವು ಕಡೆ ಸೆಟ್‌ಬ್ಯಾಕ್‌ ಇಲ್ಲ. ಆದರೆ, ಬೆಂಕಿ ನಂದಿಸಲು ಇರಬೇಕಾದ ಸಾಧನಗಳಿಂದ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ. ಈಗಾಗಲೇ ಇಂದಿರಾನಗರದ 9 ಬಾರ್‌ಅಂಡ್‌ ರೆಸ್ಟೋರೆಂಟ್‌ಗಳ ಮೇಲೆ ಎಫ್ಐಆರ್‌ ದಾಖಲಿಸಲಾಗಿದೆ. ನಿಯಮಗಳನ್ನು ಪಾಲಿಸದವರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುತ್ತದೆ. ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಎಡಿಜಿಪಿ ಸುನೀಲ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯಬಾರದು ಎನ್ನುವ ನಿಯಮ ರೂಪಿಸುತ್ತಿರುವುದರಿಂದ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ತೆರೆದಿರುವ ಸಣ್ಣ ವ್ಯವಹಾರಗಳಿಗೂ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇದರಿಂದ 8 ಲಕ್ಷಕ್ಕೂ ಹೆಚ್ಚು ಜನ ಬೀದಿಗೆ ಬೀಳಲಿದ್ದಾರೆ. ಇವರಿಗೆ ಪರ್ಯಾಯವೇನು?
-ಆದಿತ್ಯ, ಉದ್ಯಮಿ

ಎಲ್ಲಿ ಎಷ್ಟು ಪ್ರಮಾಣದ ಶಬ್ದ ಇರಬೇಕು?
ಪ್ರದೇಶ ಹಗಲು ರಾತ್ರಿ (ಡಿಸಿಬಲ್‌)
-ಕೈಗಾರಿಕೆ ಪ್ರದೇಶ 75 70
-ವಾಣಿಜ್ಯ ಪ್ರದೇಶ 65 55
-ವಸತಿ ಪ್ರದೇಶ 55 45
-ನಿಶಬ್ದ ಪ್ರದೇಶ 50 40
ಈ ಡಿಸಿಬಲ್‌ ಪ್ರಮಾಣವನ್ನು ಪಬ್‌ಗಳು ಉಲ್ಲಂಘಿಸುತ್ತಿದ್ದು, ನಿಯಮಕ್ಕಿಂತ ದುಪ್ಪಟ್ಟು ಪ್ರಮಾಣದ ಶಬ್ದ ಮಾಡುತ್ತಿವೆ ಎಂದು ಕೆಲ ಬಡಾವಣೆಗಳ ನಿವಾಸಿಗಳು ಆರೋಪಿಸಿದ್ದಾರೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next