Advertisement

ಫೆ.22ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

12:07 PM Feb 10, 2018 | Team Udayavani |

ಬೆಂಗಳೂರು: ಹತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಫೆಬ್ರವರಿ 22 ರಂದು ಚಾಲನೆ ಸಿಗಲಿದೆ. ಅಂದು ವಿಧಾನ ಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

Advertisement

ಮಾ.1 ರಂದು ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಕ್ತಾಯ ಸಮಾರಂಭ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲರಾದ ವಿ.ಆರ್‌. ವಾಲಾ ಅವರು ವಿಜೇತ ಚಿತ್ರ ನಿರ್ಮಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಚಲನಚಿತ್ರೋತ್ಸವ ಕುರಿತು ವಿವರ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು ಮಾತನಾಡಿ, “ರಾಜಾಜಿನಗರದಲ್ಲಿರುವ ಒರಾಯನ್‌ ಮಾಲ್‌ನಲ್ಲಿರುವ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಕಲಾವಿದರ ಸಂಘದ ನೂತನ ಕಟ್ಟಡ ಡಾ.ರಾಜ್‌ಭವನದಲ್ಲೂ ಪ್ರದರ್ಶನ ಏರ್ಪಡಿಸಲಾಗಿದೆ. 

ಸ್ಪರ್ಧೆ: ಈ ಬಾರಿ 60 ದೇಶಗಳಿಂದ 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಸ್ಪರ್ಧಾ ವಿಭಾಗದಲ್ಲಿ ಏಷಿಯನ್‌ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳು, ಕನ್ನಡ ಚಿತ್ರಗಳು ಹಾಗು ಕನ್ನಡದ ಜನಪ್ರಿಯ ಚಿತ್ರಗಳು ಪ್ರದರ್ಶನವಾಗುತ್ತಿವೆ. ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ವಿಶ್ವದ ಸಮಕಾಲೀನ ಸಿನಿಮಾ, ಫೋಕಸ್‌ ವಿಭಾಗದಲ್ಲಿ ಥಾಯ್‌ಲ್ಯಾಂಡ್‌, ಕೆನಡಾ, ಜರ್ಮನಿ, ಲ್ಯಾಟಿನ್‌ ಅಮೆರಿಕ ವಲಯ, ಸಿಂಹಾವಲೋಕನದಲ್ಲಿ ರಷ್ಯಾ ನಿರ್ದೇಶಕ ಅಲೆಸ್ಕಿ ಬಾಲಬನೊವ್‌, ಕನ್ನಡ ಚಿತ್ರ ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ್‌, ಮರಾಠಿ ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನಿಲ್‌ ಸುಕಂದರ್‌ಕರ್‌ ಅವರ ಚಿತ್ರಗಳ ಪ್ರದರ್ಶನವಿದೆ ಎಂದು ವಿವರಿಸಿದರು.

Advertisement

ಶ್ರದ್ಧಾಂಜಲಿ: ಅಗಲಿದ ಚಿತ್ರರಂಗದ ಗಣ್ಯರಾದ ಪಾರ್ವತಮ್ಮ ರಾಜಕುಮಾರ್‌, ಆರ್‌.ಎನ್‌.ಸುದರ್ಶನ್‌, ಕಾಶಿನಾಥ್‌, ಬಿ.ವಿ.ರಾಧಾ, ಕೃಷ್ಣಕುಮಾರಿ ಮತ್ತು ಶಶಿಕಪೂರ್‌ ಅವರ ಚಿತ್ರ ಶ್ರದ್ಧಾಂಜಲಿಯೂ ನಡೆಯಲಿದೆ. “ಸಂಸ್ಕಾರ’ ಚಿತ್ರಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕ್ಲಾಸಿಕ್‌ ಸಿನಿಮಾ ನೆನಪು ವಿಭಾಗದಲ್ಲಿ ಚಿತ್ರದ ಬಗ್ಗೆ ಮಾತುಕತೆ ನಡೆಯಲಿದೆ.

ಸಾಕ್ಷ್ಯಚಿತ್ರ ವಿಭಾಗದಲ್ಲಿ ಹೆಸರಾಗಿರುವ ರೀನಾ ಮೋಹನ್‌, ಛಾಯಾಗ್ರಾಹಕ ಜಿ.ಎಸ್‌.ಭಾಸ್ಕರ್‌ ಹಾಗು ವಿನೋದ್‌ರಾಜ್‌ ಭಾಗವಹಿಸುತ್ತಿದ್ದಾರೆ. ಚಲಂಬೆನ್ನೂರ್‌ಕರ್‌ ಮತ್ತು ಗೌರಿಲಂಕೇಶ್‌ ಅವರ ವಿಶೇಷ ಸ್ಮರಣೆಯೂ ಇರಲಿದೆ. ಇವೆಲ್ಲದರೊಂದಿಗೆ ವಿಶೇಷ ಉಪನ್ಯಾಸ, ಕಾರ್ಯಾಗಾರ ನಡೆಯಲಿದೆ.

ಈ ಬಾರಿ ಜಗತ್ತಿನಾದ್ಯಂತ 800 ಚಿತ್ರಗಳು ಬಂದಿದ್ದು, ಆ ಪೈಕಿ 100 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವದಲ್ಲಿ ಕಾಪಿರೈಟ್‌ ಆ್ಯಕ್ಟ್ ಕುರಿತ ಚರ್ಚೆಯೂ ನಡೆಯಲಿದೆ. ಅಷ್ಟೇ ಅಲ್ಲ, ಸ್ಕ್ರಿಪ್ಟ್ ಕುರಿತ ವಿಶೇಷ ಕಾರ್ಯಾಗಾರವೂ ಇದೆ. ಚಿತ್ರೋತ್ಸವದಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಪಾಲ್ಗೊಳ್ಳಲು ಸೂಚಿಸಿ ಎಂದು ಸಭಾಪತಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. 

ಕನ್ನಡ ಚಿತ್ರಗಳಿಗೂ ಮಾನ್ಯತೆ: ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾಗಳ ವಿಭಾಗದಲ್ಲಿ 13 ಚಿತ್ರಗಳು, ಇಂಡಿಯನ್‌ ಸಿನಿಮಾ ವಿಭಾಗದಲ್ಲಿ 14 ಚಿತ್ರಗಳು, ಕನ್ನಡ ಸಿನಿಮಾ ವಿಭಾಗದಲ್ಲಿ ತುಳು ಭಾಷೆಯ ಚಿತ್ರ ಸೇರಿ 12 ಚಿತ್ರಗಳು ಮತ್ತು ಕನ್ನಡ ಮನರಂಜನೆ ಚಿತ್ರ ವಿಭಾಗದಲ್ಲಿ 8 ಚಿತ್ರಗಳು ಪ್ರದರ್ಶನವಾಗಲಿವೆ. 

ಕನ್ನಡ ಸಿನಿಮಾ ವಿಭಾಗದಲ್ಲಿ ಈ ಬಾರಿ, “ಅಲ್ಲಮ’, “ಬೇಟಿ’,”ಡಾ.ಸುಕನ್ಯ’,”ಹೆಬ್ಬೆಟ್‌ ರಾಮಕ್ಕ’,”ಮಾರ್ಚ್‌ 22′,”ಮೂಕಹಕ್ಕಿ’,”ಮೂಕನಾಯಕ’,”ಮೂಡಲ ಸೀಮೆಯಲ್ಲಿ’,”ನೀರು ತಂದವರು’,ನೇಮೊದ ಬೂಳ್ಯ’ (ತುಳು), “ರಿಸರ್ವೇಷನ್‌’ ಮತ್ತು “ಶುದ್ಧಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

“ಭರ್ಜರಿ’,”ಚಮಕ್‌’,”ಕಾಲೇಜ್‌ ಕುಮಾರ್‌’,”ಹೆಬ್ಬುಲಿ’,”ಒಂದು ಮೊಟ್ಟೆಯ ಕಥೆ’,”ಮಫ್ತಿ’,”ರಾಜಕುಮಾರ’ ಮತ್ತು “ತಾರಕ್‌’ ಚಿತ್ರಗಳು ಜನಪ್ರಿಯ ಮನರಂಜನೆ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದು ರಾಜೇಂದ್ರ ಸಿಂಗ್‌ ಬಾಬು ಚಿತ್ರಗಳ ಪಟ್ಟಿ ಸಮೇತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next