ಬೆಂಗಳೂರು: “ರಾಜ್ಯ ರಾಜಧಾನಿಯ ಕೆಲವು ಪ್ರದೇಶಗಳು ಈಗಾಗಲೇ ದೆಹಲಿಯ ಸ್ಥಿತಿಯನ್ನು ಎದುರಿಸುತ್ತಿವೆ’ ಎಂದು ಕ್ಲೀನ್‌ಏರ್ ಪ್ಲಾಟ್‌ಫಾರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್ ಆತಂಕ ವ್ಯಕ್ತಪಡಿಸಿದರು.
ಉಸಿರಾಡಲ್ಪಡುವಾಗ ದೇಹವನ್ನು ಸೇರುವ ಧೂಳಿನ ಕಣ “ಪಿಎಂ-2.5′ ಪ್ರಮಾಣ ನಗರದ ಸರ್ಜಾಪುರ, ಮಾನ್ಯತಾ ಟೆಕ್‌ಪಾರ್ಕ್, ಟಿನ್‌ಫ್ಯಾಕ್ಟರಿ ಸೇರಿದಂತೆ ಹಲವು ಕಡೆಗಳಲ್ಲಿ ಪೀಕ್ ಅವರ್‌ನಲ್ಲಿ 500ರಿಂದ 600ಕ್ಕೆ ಏರಿಕೆ ಆಗಿದ್ದು ಕಂಡುಬಂದಿದೆ. ಇದು ರಾಷ್ಟ್ರೀಯ ಮಟ್ಟಕ್ಕಿಂತ ಸುಮಾರು ಪಟ್ಟು ಅಧಿಕವಾಗಿದೆ. ಇದರಲ್ಲಿ ವಾಹನಗಳ ಕೊಡುಗೆ ಅತಿ ಹೆಚ್ಚು ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ವಿವಿಧ ಮಾದರಿಯ ಸಾರಿಗೆ ವಾಹನಗಳಿಂದ ಶೇ. 40ರಿಂದ 50ರಷ್ಟು ಹಾಗೂ ರಸ್ತೆ ಧೂಳಿನಿಂದ ಶೇ. 15ರಿಂದ 20ರಷ್ಟು ವಾಯುಮಾಲಿನ್ಯ ಉಂಟಾಗುತ್ತಿದೆ. ಒಟ್ಟಾರೆಯಾಗಿ ಶೇ.50ರಿಂದ 70ರಷ್ಟು ವಾಯುಮಾಲಿನ್ಯ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ವಿವಿಧ ವಲಯದಿಂದ ಆಗುತ್ತಿದೆ. ಈ ಪಿಎಂ-2.5 ಧೂಳಿನ ಕಣಗಳು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸಿ, ಆ ಮೂಲಕ ರಕ್ತದಲ್ಲಿ ಸೇರಲ್ಪಡುತ್ತವೆ. ಇದರಿಂದ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದರು.
ಟ್ರಾಫಿಕ್ ಪೊಲೀಸರಿಂದಲೇ ಎಲ್ಲವೂ ಸಾಧ್ಯವಿಲ್ಲ. ನಾಲ್ಕೈದು ಇಲಾಖೆಗಳು, ಸಾರ್ವಜನಿಕರು ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಬೇಕು. ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಿದರೆ, ವಾಯುಮಾಲಿನ್ಯದ ಸಮಸ್ಯೆಯೂ ತಗ್ಗಲಿದೆ. ನಗರದಲ್ಲಿ ರಸ್ತೆ ಸುರಕ್ಷತಾ ವ್ಯವಸ್ಥೆ ಹೇಗಿದೆ ಎಂಬುದನ್ನು ಅರಿತು, ಅದಕ್ಕೆ ಸರಿಯಾದ ಕಾರ್ಯಯೋಜನೆ ರೂಪಿಸಬೇಕು. ಇದಕ್ಕೆ ಬಿಬಿಎಂಪಿಯಿಂದ ಯಾವ ರೀತಿಯ ನೀತಿ ಸಿದ್ಧಪಡಿಸಿದ್ದಾರೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ ಎಂದು ಹೇಳಿದರು.
“ಎಲ್ಲ ಇಲಾಖೆಗಳ ಸಮನ್ವಯ ಮತ್ತು ಸಾರ್ವಜನಿಕರ ಒಳಗೊಳ್ಳುವಿಕೆಯಿಂದ ಇದು ಸಾಕಾರವಾಗಬೇಕು. ಕ್ಲೀನ್‌ಏರ್ ಫ್ಲಾಟ್‌ಫಾರ್ಮ್ ವತಿಯಿಂದಲೂ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಲ್ಲದೆ, ಇನ್ನೂ ಹಲವು ಕಾರ್ಪೋರೆಟ್ ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉತ್ಸುಕವಾಗಿವೆ. ಸರ್ಕಾರ ಅವುಗಳ ನೆರವು ಪಡೆಯಬೇಕು’ ಎಂದು ಸಲಹೆ ಮಾಡಿದರು.