Advertisement

ಬೆಂಗಳೂರು-ಹಾಸನ ರೈಲು ಸಂಚಾರಕ್ಕೆ ದಿನಗಣನೆ

03:45 AM Feb 07, 2017 | |

ಕುಣಿಗಲ್‌: ಬಹು ನಿರೀಕ್ಷಿತ ಬೆಂಗಳೂರು-ಹಾಸನ ನಡುವಿನ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ರೈಲು ಸಂಚಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ರೈಲ್ವೆ ಇಲಾಖೆ ಸುರಕ್ಷತಾ ಆಯುಕ್ತ ಮನೋಹರ್‌ ನೇತೃತ್ವದಲ್ಲಿ ಫೆ.7ರಂದು ಕುಣಿಗಲ್‌, ತಿಪ್ಪಸಂದ್ರ ಮತ್ತು ಯಡಿಯೂರುಗಳಲ್ಲಿ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ಸಮಗ್ರವಾಗಿ ಪರಿಶೀಲನೆ ನಡೆಸಲಿದ್ದಾರೆ ಎಂದು ರೈಲ್ವೆ ಮೂಲಗಳು ಖಚಿತಪಡಿಸಿವೆ.

Advertisement

ಹೀಗಾಗಿ ಮಾಜಿ ಪ್ರಧಾನಿ ಅವರ ಕನಸಿನ ಕೂಸಾದ ಈ ಮಾರ್ಗದ ರೈಲು ಸಂಚಾರಕ್ಕೆ ಕೊನೆಗೂ ಕಾಲ ಕೂಡಿಬಂತಾಗಿದೆ. ಈಗಾಗಲೇ ತಿಪ್ಪಸಂದ್ರ, ಸೋಲೂರು, ಕುಣಿಗಲ್‌, ಯಡಿಯೂರು, ಬೆಳ್ಳೂರು ಕ್ರಾಸ್‌ ಮತ್ತಿತರ ಕಡೆ ಸ್ಟೇಷನ್‌ ಮಾಸ್ಟರ್‌ಗಳನ್ನು ನಿಯೋಜಿಸಲಾಗಿದೆ. ನಿಲ್ದಾಣಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.  ಫೆ.11ರಂದು ಪರೀಶಿಲನಾ ವರದಿ ಸಲ್ಲಿಕೆಯಾದ ಬಳಿಕ ಫೆಬ್ರವರಿ ಅಂತ್ಯದಲ್ಲಿ ರೈಲು ಓಡಾಟ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

ಕೇಂದ್ರ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಕುಂಟುತ್ತಾ ಸಾಗಿದ್ದ ಯೋಜನೆ ಈಡೇರಲು 19 ವರ್ಷಗಳೇ ತೆಗೆದುಕೊಂಡಿದ್ದು ವಿಪರ್ಯಾಸ.  ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಬೆಂಗಳೂರಿನಿಂದ ಹಾಸನ ಮಾರ್ಗದ ಮೂಲಕ ಮಂಗಳೂರಿಗೆ ತಲುಪಲು ಪ್ರಸ್ತಾವನೆ ಮುಂದಿಟ್ಟಿದ್ದರು. ಆದರೆ, ಸುದೀರ್ಘ‌ ಕಾಲದ ಬಳಿಕ ಗೌಡರ ಕನಸು ನನಸಾಗುವ ಕಾಲ ಕೂಡಿ ಬರುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿದೆ.
ಶ್ರವಣ ಬೆಳಗೊಳದಿಂದ ಸೋಲೂರು ಬಳಿಯ ಮಾಗಡಿ ಗಡಿಯ ತಿಪ್ಪಸಂದ್ರವರೆಗೂ ಪ್ರಾಯೋಗಿಕವಾಗಿ 2-3 ಬಾರಿ ಇಂಜಿನ್‌ ಓಡಿಸಲಾಗಿದೆ. ಮಂಡ್ಯ ಜಿಲ್ಲೆಯ ಬಿ.ಜಿ.ನಗರದ ರೈಲ್ವೆ ನಿಲ್ದಾಣ, ಕುಣಿಗಲ್‌ ಬಳಿಯ ಯಡಿಯೂರು, ಕುಣಿಗಲ್‌ ಹಾಗೂ ಸೋಲೂರು ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿವೆ. ನೆಲಮಂಗಲ ಬಳಿಯ ಚಿಕ್ಕಬಾಣಾವರದವರೆಗೂ ರೈಲ್ವೆ ಸಂಚಾರ ನಡೆಯುತ್ತಿದೆ.

183ಕಿಮೀ ಉದ್ದದ ಈ ಮಾರ್ಗದಲ್ಲಿ ಬ್ರಾಡ್‌ ಗೇಜ್‌ ರೈಲುಗಳು ಓಡಾಡಲಿದ್ದು, ಗಂಟೆಗೆ 110ಕಿಮೀ ವೇಗದಲ್ಲಿ ಸಂಚರಿಸಲಿವೆ. ಈ ಮಾರ್ಗದುದ್ದಕ್ಕೂ ಮಾನವ ರಹಿತ ಹಾಗೂ ತಡೆ ರಹಿತ ರೈಲು ಸಂಚರಿಸಲಿವೆ. ಇದರಿಂದ ನೈರುತ್ಯ ರೈಲ್ವೆ ಮಾರ್ಗದ ಇತಿಹಾಸದಲ್ಲೇ ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ಮಾರ್ಗ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಕರ್ನಾಟಕದಲ್ಲೇ ಮೊದಲ ಬಾರಿಯ ಪ್ರಯತ್ನ ಇದಾಗಿದೆ.

ರೈಲು ಯೋಜನೆಗೆ 1110 ಕೋಟಿ ವ್ಯಯ
ಏಕಕಾಲಕ್ಕೆ ಕೊಂಕಣ ರೈಲು ಮಾರ್ಗವನ್ನು ಕಡಿಮೆ ಅವಧಿಯಲ್ಲಿ ಸಂಪರ್ಕಿಸಬಲ್ಲ ಈ ಮಾರ್ಗ ಕಳೆದ 19 ವರ್ಷಗಳಿಂದಲೂ ಒಂದಲ್ಲ ಒಂದು ವಿಘ್ನಗಳನ್ನು ಎದುರಿಸುತ್ತಲೇ ಬರುತ್ತಿತ್ತು. ಸೋಲೂರು ಬಳಿ 630 ಮೀಟರ್‌ ಸುರಂಗ ಮಾರ್ಗ ಕೊರೆಯುವ ಕೆಲಸ ಪೂರ್ಣಗೊಂಡಿದೆ. ಬಜೆಟ್‌ನಲ್ಲಿ ನಿಗಧಿಪಡಿಸಿದ್ದ ಮೊತ್ತಕ್ಕಿಂತ ಸುಮಾರು 1110ಕೋಟಿ ರೂಗಳನ್ನು ಈವರೆಗೂ ವ್ಯಯಿಸಲಾಗಿದೆ.

Advertisement

– ಎಸ್‌.ಎನ್‌.ನರಸಿಂಹಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next