ಬೆಂಗಳೂರು: “ನಮ್ಮ ಮೆಟ್ರೋ’ದಲ್ಲೂ ಇನ್ಮುಂದೆ ಬಿಎಂಟಿಸಿ ಬಸ್‌ಗಳಲ್ಲಿರುವಂತೆ ಪಾಸು ತೋರಿಸಿ ಪ್ರಯಾಣಿಸಬಹುದು! ಬರುವ ಏಪ್ರಿಲ್ 2ರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಒಂದು ಮತ್ತು ಮೂರು ದಿನಗಳ ಪಾಸುಗಳನ್ನು ಪರಿಚಯಿಸುತ್ತಿದೆ. ಇದರಿಂದ ಟಿಕೆಟ್‌ಗಾಗಿ ಕ್ಯುನಲ್ಲಿ ಕಾಯುವಿಕೆ ಕಡಿಮೆ ಆಗಲಿದೆ. ವಿಶೇಷವಾಗಿ ಪ್ರವಾಸಿಗರು ಹಾಗೂ ನಾಲ್ಕಾರು ದಿನಗಳ ಮಟ್ಟಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ.
ಪ್ರಯಾಕರು 200 ರೂ. ಕೊಟ್ಟು ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ ಖರೀದಿಸಿದರೆ ಒಂದು ದಿನ ಅನಿಯಮಿತವಾಗಿ ಸಂಚಾರ ಮಾಡಬಹುದು. ಅಥವಾ 400 ರೂ. ಕೊಟ್ಟು ಪಾಸ್ ಖರೀದಿಸಿದಲ್ಲಿ 3 ದಿನ ಅನಿಯಮಿತವಾಗಿ ಮೆಟ್ರೋದಲ್ಲಿ ಪ್ರಯಾಸಬಹುದು. ಎರಡೂ ಮಾದರಿಯ ಪಾಸ್ ಗಳನ್ನು ಪಡೆಯಲು 50 ರೂ. ಮರು ಪಾವತಿಸಬಹುದಾದ ಭದ್ರತಾ ಠೇವಣಿ ಇರಲಿದ್ದು, ಸಂಚಾರ ಅವಧಿ ಪೂರ್ಣಗೊಂಡ ಕೊನೆಯಲ್ಲಿ ಪಾಸ್‌ಗಳನ್ನು ಉತ್ತಮ ಸ್ಥಿತಿಯಲ್ಲಿ ಮರಳಿಸಿದಲ್ಲಿ 50 ರೂ. ಹಿಂತಿರುಗಿಸಲಾಗುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಇನ್ನು ಸ್ಮಾರ್ಟ್‌ಕಾರ್ಡ್ ಹೊಂದಿರುವ ಪ್ರಯಾಣಿಕರು ವೆಬ್‌ಸೈಟ್ ಅಥವಾ ನಮ್ಮ ಮೆಟ್ರೋ ಆ್ಯಪ್ ಮೂಲಕ ರೀಚಾರ್ಜ್ ಮಾಡಿಕೊಂಡ ಒಂದು ಗಂಟೆ ನಂತರದಿಂದ 7 ದಿನಗಳಲ್ಲಿ ಒಮ್ಮೆಯಾದರೂ ಸ್ವಯಂಚಾಲಿತ ಟಿಕೆಟ್ ಗೇಟ್ (ಆಟೋಮೆಟಿಕ್ ಫೇರ್ ಕಲೆಕ್ಷನ್-ಎಎಫ್‌ಸಿ)ಗಳಲ್ಲಿ ಟ್ಯಾಪ್ ಮಾಡಬೇಕು.
ಕಾರ್ಡ್ ಟಾಪ್‌ಅಪ್ ಟರ್ಮಿನಲ್ ಗಳಲ್ಲಿ ರೀಚಾರ್ಜ್ ಮಾಡಿದ ಸ್ಮಾರ್ಟ್‌ಕಾರ್ಡ್‌ಗಳನ್ನು 15 ದಿನಗಳಲ್ಲಿ ನವೀಕರಿಸಬೇಕು. ಒಂದು ವೇಳೆ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ನಲ್ಲಿರುವ ಬಾಕಿ ಹಣವನ್ನು ನವೀಕರಿಸದಿದ್ದರೆ, ಬಳಸದ ಹಣವನ್ನು 30 ದಿನಗಳ ಒಳಗೆ ರಿಚಾರ್ಜ್ ಮಾಡಿಸಿಕೊಂಡ ಮಾರ್ಗದಲ್ಲಿಯೇ ಪ್ರಯಾಣಿಕರಿಗೆ ಮರಳಿಸಲಾಗುತ್ತದೆ. ಈ ವೇಳೆ ಶೇ. 2.5ರಷ್ಟು ಹಣವನ್ನು ರದ್ದತಿ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಎಂದೂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅಂದಹಾಗೆ, ಬಿಎಂಟಿಸಿ ಬಸ್‌ಗಳಲ್ಲಿ ಹಲವು ವರ್ಷಗಳ ಹಿಂದೆಯೇ ಒಂದು ದಿನದ ಪಾಸ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ವಾರದ ಮತ್ತು ಮಾಸಿಕ ಪಾಸು ಕೂಡ ಬಿಎಂಟಿಸಿಯಲ್ಲಿದೆ.