ಬೆಂಗಳೂರು: ಒಂಟಿಯಾಗಿದ್ದ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಕುತ್ತಿಗೆ ಹಿಸುಕಿ ಕೊಲೆಗೈದು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಪ್ರಭಾಕರ್‌ರೆಡ್ಡಿ ಲೇಔಟ್ ನಿವಾಸಿ ನೀಲಂ(30) ಕೊಲೆಯಾದ ಮಹಿಳೆ.
ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಈ ಸಂಬಂಧ ನೀಲಂ ಪತಿ ಪ್ರದ್ಯುನ್ಮ ಎಂಬವರು ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ ಮೂಲದ ಪ್ರದ್ಯುನ್ಮ 11 ವರ್ಷಗಳ ಹಿಂದೆ ಬೆಂಗ ಳೂರಿಗೆ ಬಂದಿದ್ದು, ಬೆಟ್ಟದಾ ಸನಪುರ ಸಮೀಪದ ಪ್ರಭಾಕರ್‌ರೆಡ್ಡಿ ಲೇಔಟ್ ನಲ್ಲಿ ಪತ್ನಿ ನೀಲಂ ಹಾಗೂ ಇಬ್ಬರು ಗಂಡು ಮಕ್ಕಳ ಜತೆ ವಾಸವಾಗಿದ್ದಾರೆ. ಮನೆ ಸಮೀಪದಲ್ಲೇ ಹಾರ್ಡ್‌ವೇರ್ ಮಳಿಗೆ ಹೊಂದಿದ್ದು, ಅದನ್ನು ನೀಲಂ ಸಹೋದರ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಪ್ರದ್ಯುನ್ಮ ಪೇಟಿಂಗ್ ಗುತ್ತಿಗೆದಾರರು ಆಗಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಪ್ರದ್ಯುನ್ಮ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ಹೋಗಿದ್ದಾರೆ. ಮನೆಯಲ್ಲಿ ನೀಲಂ ಒಬ್ಬರೇ ಇದ್ದರು. ಅಪರಾಹ್ನ 12 ಗಂಟೆಗೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಮನೆಯ ಪ್ರಾಂಗಣದಲ್ಲೇ ನೀಲಂ ಕುತ್ತಿಗೆ ಬಿಗಿದು ಪರಾರಿಯಾಗಿದ್ದಾರೆ. ಮಕ್ಕಳು ಸಂಜೆ ಶಾಲೆಗೆ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಈ ವೇಳೆ ಮನೆಯಲ್ಲಿ ಚಿನ್ನಾಭರಣ, ನಗದು ಅಥವಾ ಬೇರೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಹೀಗಾಗಿ ಪರಿಚಯಸ್ಥರೇ ಬಂದು ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಗೆ ಮುಂಬಾಗಿಲು ಅಲ್ಲದೆ, ಕಬ್ಬಿಣದಿಂದ ಮಾಡಿರುವ ಡೋರ್ ಕೂಡ ಇದೆ. ಪತಿ ಮತ್ತು ಮಕ್ಕಳು ಹೊರಗಡೆ ತೆರಳಿದಾಗ, ಅದನ್ನು ನೀಲಂ ನಿತ್ಯ ಲಾಕ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಡೋರ್ ತೆರೆದವರು ಯಾರು? ನೀಲಂ ಅವರೇ ತೆರೆದಿದ್ದರಾ? ಆಕೆಯ ಪತಿ ಅಥವಾ ಸಹೋದರಾ ತೆರೆದಿದ್ದರಾ? ಎಂಬುದು ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.