Advertisement

Bangalore: ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

08:09 AM Jan 05, 2024 | Team Udayavani |

ಬೆಂಗಳೂರು: ಪ್ರಥಮ ವರ್ಷದ ಎಂಜಿನಿಯರ್‌ ವಿದ್ಯಾರ್ಥಿಯೊಬ್ಬ ಡಬಲ್‌ ಬ್ಯಾರಲ್‌ ಬಂದೂಕಿ ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕೆ.ಡಿ.ತಿಮ್ಮಯ್ಯ ಎಂಬವರ ಪುತ್ರ ವಿಶು ಉತ್ತಪ್ಪ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೃತ ವಿಶು ಉತ್ತಪ್ಪ ತಂದೆ ಕೆ.ಡಿ.ತಿಮ್ಮಯ್ಯ ಕುಟುಂಬ ಸಮೇತ ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನೈಸ್‌ ರಸ್ತೆಯ ಟೋಲ್‌ ನಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಿಶು ಉತ್ತಪ್ಪ ಒಬ್ಬನೇ ಮಗ. ಈತ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರ್‌ ವ್ಯಾಸಂಗ ಮಾಡುತ್ತಿದ್ದ. ತಿಮ್ಮಯ್ಯ ಪರವಾನಗಿ ಹೊಂದಿದ್ದ ಡಬಲ್‌ ಬ್ಯಾರಲ್‌ ಬಂದೂಕು ಹೊಂದಿದ್ದು, ಕೆಲಸ ಮಾಡುವ ಸ್ಥಳಕ್ಕೆ ಬಂದೂಕು ಅಗತ್ಯವಿಲ್ಲವಾದರಿಂದ ಮನೆಯಲ್ಲೇ ಇಟ್ಟು ಹೋಗುತ್ತಿದ್ದರು.

ಸಾವಿಗೂ ಮುನ್ನ ಸಾರಿ ಎಂದು ಅಮ್ಮನಿಗೆ ಕರೆ: ಕೆಲ ದಿನಗಳಿಂದ ವಿಶು ಉತ್ತಪ್ಪ ಅಷ್ಟಾಗಿ ಸಕ್ರಿಯವಾಗಿರಲಿಲ್ಲ. ಮನೆಯಲ್ಲೇ ಮಂಕಾಗಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಬುಧವಾರ ಮಧ್ಯಾಹ್ನ ತಿಮ್ಮಯ್ಯ ದಂಪತಿ ಸಾಮಾಗ್ರಿ ತರಲು ಹೊರಗಡೆ ಹೋಗಿದ್ದಾರೆ. ಕೆಲ ಸಮಯದ ಬಳಿಕ ತಾಯಿಗೆ ಕರೆ ಮಾಡಿ ಕ್ಷಮಿಸಿ ಎಂದು ಕರೆ ಮಾಡಿದ್ದಾನೆ. ಆಗ ತಾಯಿ, ಯಾವ ವಿಚಾರಕ್ಕೆ ಕ್ಷಮೆ ಕೇಳುವೆ ಎಂದು ಸಮಾಧಾನಪಡಿಸಿದ್ದಾರೆ.

Advertisement

ಅಪ್ಪನಿಗೂ ಕರೆ: ಆ ನಂತರ ತಂದೆಗೆ ಕರೆ ಮಾಡಿ, “ನಾನು ಇನ್ಮುಂದೆ ಯಾವುದೇ ತಪ್ಪು ಮಾಡುವುದಿಲ್ಲ’ ಎಂದು ಹೇಳಿ, ಕರೆ ಸ್ಥಗಿತಗೊಳಿಸಿದ್ದಾನೆ. ಆ ಬಳಿಕ ಡಬಲ್‌ ಬ್ಯಾರಲ್‌ ಬಂದೂಕಿನಿಂದ ಎಡಭಾಗದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಮಾತಿನಿಂದ ಅನುಮಾನಗೊಂಡ ಪೋಷಕರು ಕೂಡಲೇ ಮನೆಗೆ ವಾಪಸ್‌ ಬಂದಿದ್ದಾರೆ. ಅಷ್ಟರಲ್ಲಿ ಪುತ್ರ ವಿಶು ಉತ್ತಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಇನ್ನು ಕಳೆದ ನಾಲ್ಕೈದು ದಿನಗಳಿಂದ ಪುತ್ರ ವಿಶು ಮೌನವಾಗಿದ್ದ ಎಂದು ತಂದೆ ತಿಮ್ಮಯ್ಯ ತಿಳಿಸಿದ್ದಾರೆ. ಕಾಲೇಜಿನ ಬಗ್ಗೆಯೂ ತಂದೆಗೆ ಯಾವುದೇ ಅನುಮಾನ ಇಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next