ಬೆಂಗಳೂರು: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಭಾವಿಸಿದ ಪತಿಯೊಬ್ಬ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕದಿರೇನಹಳ್ಳಿ ನಿವಾಸಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಕೃತ್ಯದಿಂದ ಗಾಯಗೊಂಡಿದ್ದ ಪತ್ನಿ ಪುಷ್ಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಆರೋಪಿ ಶ್ರೀನಿವಾಸ್ 18 ವರ್ಷಗಳ ಹಿಂದೆ ಪುಷ್ಪಾಳನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಶ್ರೀನಿವಾಸ್ ಪ್ಲಬರ್ ಕೆಲಸ ಮಾಡುತ್ತಿದ್ದು, ಪುಷ್ಪಾ ಆಸ್ಪತ್ರೆಯಲ್ಲಿ ಹೌಸ್‌ಕಿಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಈ ಮಧ್ಯೆ ಶ್ರೀನಿವಾಸ್ ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳ ತೆಗೆದು, ಹಲ್ಲೆ ನಡೆಸುತ್ತಿದ್ದ. ಹಿರಿಯರು ಅನೇಕ ಬಾರಿ ರಾಜಿ-ಸಂಧಾನ ಮಾಡಿದ್ದರು. ನ.16ರಂದು ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದ ಶ್ರೀನಿವಾಸ್, ಪತ್ನಿ ಜತೆ ಮತ್ತೆ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಆಕೆ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾನೆ. ಆಕೆ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಶ್ರೀನಿವಾಸ್ ಕೂಡಲೇ ನೀರು ಸುರಿದಿದ್ದಾನೆ.
ಬಳಿಕ ಆತನೇ ಸ್ಥಳೀಯರ ನೆರವಿನಿಂದ ಪುಷ್ಪರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದ. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶ್ರೀನಿವಾಸ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.