ಬೆಂಗಳೂರು: ಹಳೇ ದ್ವೇಷ ಹಾಗೂ ಸಣ್ಣ ವಿಚಾರಗಳಿಗೆ ಬೇಕಂತಲೇ ಅಪಹಾಸ್ಯ ಮಾಡು ತ್ತಿದ್ದ ಸ್ನೇಹಿತನನ್ನು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಜಗದೇವ್ (28) ಮತ್ತು ಚಂದನ್ ಕುಮಾರ್ (30) ಬಂಧಿ ತರು. ನ.16ರಂದು ಲಕ್ಷ್ಮಣ್ ಮಾಂಜಿ (22) ಎಂಬಾತನನ್ನು ಆರೋಪಿಗಳು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಕೊಲೆಯಾದ ಲಕ್ಷ್ಮಣ್ ಮಾಂಜಿ ಮತ್ತು ಆರೋಪಿಗಳು ಜಾರ್ಖಂಡ್‌ನ ಒಂದೇ ಊರಿನವರಾಗಿದ್ದಾರೆ. ಬೈರತಿ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಶೆಡ್‌ನಲ್ಲಿ ವಾಸವಾಗಿದ್ದರು. ಈ ಮಧ್ಯೆ ಲಕ್ಷ್ಮಣ್ ಮತ್ತು ಆರೋಪಿಗಳ ನಡುವೆ ಜಾರ್ಖಂಡ್‌ನ ಸ್ವಂತ ಊರಿನಲ್ಲಿ ವೈಯಕ್ತಿಕ ವಿಚಾರಕ್ಕೆ ಗಲಾಟೆಯಾಗಿತ್ತು. ಅಂದಿನಿಂದ ಲಕ್ಷ್ಮಣ್ ಮೇಲೆ ದ್ವೇಷ ಸಾಧಿಸುತ್ತಿದ್ದರು.
ಇನ್ನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗಲೂ ಸಣ್ಣ-ಪುಟ್ಟ ವಿಚಾರಕ್ಕೆ ಬೇಕಂತಲೇ ಆರೋಪಿಗಳಿಗೆ ಲಕ್ಷ್ಮಣ್ ರೇಗಿಸುತ್ತಿದ್ದ. ಅದರಿಂದ ಮೂವರ ನಡುವೆ ಜಗಳ ನಡೆಯುತ್ತಿತ್ತು. ನ.16ರಂದು ರಾತ್ರಿ ಮೂವರು ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಆಗಲೂ ಲಕ್ಷ್ಮ ಣ್, ಆರೋಪಿಗಳಿಗೆ ಉದ್ದೇಶ ಪೂರ್ವಕ ವಾಗಿಯೇ ಕಿಚಾಯಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿಗಳು, ಲಕ್ಷ್ಮಣ್‌ನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆಗೈದು, ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ಜಾರ್ಖಂಡ್‌ಗೆ ಪರಾರಿ ಯಾಗಲು ಸಿದ್ಧತೆ ನಡೆಸಿದ್ದರು. ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಪತ್ತೆ ಯಾದ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಅಶ್ವತ್ಥ ನಾರಾಯಣ ಸ್ವಾಮಿ ಮತ್ತು ತಂಡ, ಮೃತದೇಹ ಗುರುತು ಪತ್ತೆ ಹಚ್ಚಿದ್ದರು. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.