ಬೆಂಗಳೂರು: ಮಾರಕಾಸ್ತ್ರಗಳಿಂದ ಹತ್ಯೆಗೈದ ಸ್ಥಿತಿಯಲ್ಲಿದ್ದ ಶವ ಪತ್ತೆ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಭೇದಿಸಿದ್ದು, ಪತ್ನಿಯೇ ತನ್ನ ಪ್ರಿಯಕರನ ಜತೆ ಸೇರಿಕೊಂಡು ಪತಿಯನ್ನು ಹತ್ಯೆಗೈದಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಚನ್ನಪಟ್ಟಣ ಮೂಲದ ಅರುಣ್(43) ಕೊಲೆಯಾದವ. ಕೃತ್ಯ ಎಸಗಿದ ಅರುಣ್ ಪತ್ನಿ ರಂಜಿತಾ, ಆಕೆಯ ಪ್ರಿಯಕರ ಗಣೇಶ್, ಆತನ ಸಹಚರರಾದ ಶಿವಾನಂದ್, ದೀಪಕ್ ಅಲಿಯಾಸ್ ದೀಪು ಮತ್ತು ಶರತ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಜೂನ್ 28ರಂದು ರಾತ್ರಿ 11 ಗಂಟೆ ಸುಮಾರಿಗೆ ಅರುಣ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ, ಬಳಿಕ ಮುಖ ಹಾಗೂ ದೇಹದ ಇತರೆ ಭಾಗಗಳ ಮೇಲೆ ಗುರುತು ಸಿಗದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು, ವರಹಸಂದ್ರ ಬಳಿಯ ನೈಸ್ ರಸ್ತೆ ಸೇತುವೆ ಬಳಿ ಎಸೆದು ಹೋಗಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಗಣೇಶ್ ವಾಟರ್ ಸಪ್ಲೆಯರ್ ಆಗಿದ್ದಾನೆ. ಶಿವಾನಂದ್ ಫೈನಾನ್ಸ್ ಇಟ್ಟುಕೊಂಡಿದ್ದಾನೆ. ಇನ್ನು ದೀಪಕ್ ಮತ್ತು ಶರತ್ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರುಣ್ 6 ವರ್ಷಗಳ ಹಿಂದೆ ರಂಜಿತಾಳನ್ನು ಮದುವೆ ಯಾಗಿದ್ದು, ದಂಪತಿ ಆರ್.ಆರ್. ನಗರದಲ್ಲಿ ವಾಸವಾಗಿದ್ದರು. ಉತ್ತರಹಳ್ಳಿಯ ಜೆಎಸ್‌ಎಸ್ ಕಾಲೇಜು ಪಕ್ಕದಲ್ಲಿ ಅರುಣ್ ಗೌಡ್ರು ಬೀಗರ ಊಟ ಎಂಬ ಹೋಟೆಲ್ ನಡೆಸುತ್ತಿದ್ದ. ಈ ಹೋಟೆಲ್‌ಗೆ ಗಣೇಶ್ ನೀರು ಪೂರೈಕೆ ಮಾಡುತ್ತಿದ್ದ. ಜತೆಗೆ ಅರುಣ್‌ಗೆ ಹೋಟೆಲ್ ನಡೆಸಲು ಲಕ್ಷಾಂತರ ರೂ. ಸಾಲ ನೀಡಿದ್ದ. ಜತೆಗೆ ಇತರೆ ಫೈನಾನ್ಸಿಯರ್‌ಗಳಿಂದ ಸಾಲ ಕೊಡಿಸಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಾಗಿ ಹೋಟೆಲ್‌ಗೆ ಬರುತ್ತಿದ್ದ ಗಣೇಶ್‌ನನ್ನು ರಂಜಿತಾ ಪರಿಚಯಿಸಿಕೊಂಡಿದ್ದು, ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ಅರುಣ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಇದೇ ವೇಳೆ ಲಕ್ಷಾಂತರ ರೂ. ಸಾಲ ಪಡೆದು ನಡೆಸುತ್ತಿದ್ದ ಹೋಟೆಲ್ ನಷ್ಟ ಹೊಂದಿದ್ದರಿಂದ ಅರುಣ್ ಹೋಟೆಲ್ ಮುಚ್ಚಿದ್ದ ಎಂದು ಪೊಲೀಸರು ಹೇಳಿದರು.
ಪತಿಯನ್ನು ಕೊಲ್ಲು ಎಂದ ಪತ್ನಿ!: ಪತಿಯ ಎಚ್ಚರಿಕೆ ನಡುವೆಯೂ ರಂಜಿತಾ, ಗಣೇಶ್ ಅಕ್ರಮ ಸಂಬಂಧ ಮುಂದುವರಿಸಿದ್ದರು. ಅಲ್ಲದೆ, ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಈ ವಿಚಾರ ತಿಳಿದ ಅರುಣ್, ಪತ್ನಿಗೆ ನಿಂದಿಸಿ, ಹಲ್ಲೆ ನಡೆಸುತ್ತಿದ್ದ. ಈ ವಿಚಾರವನ್ನು ರಂಜಿತಾ, ತನ್ನ ಪ್ರೀಯಕನಿಗೆ ತಿಳಿಸಿ, “ಪತಿಯ ಕಿರಿಕಿರಿ ತಾಳಲು ಸಾಧ್ಯವಿಲ್ಲ. ನಾವಿಬ್ಬರು ಒಟ್ಟಿಗೆ ಇರಬೇಕಾದರೆ ಪತಿ ಅರುಣ್‌ನನ್ನು ಮುಗಿಸಿಬಿಡು. ಬಳಿಕ ಇಬ್ಬರು ನೆಮ್ಮದಿಯಾಗಿ ಇರಬಹುದು’ ಎಂದು ಹೇಳಿದ್ದಳು. ಅದರಿಂದ ಪ್ರಚೋದನೆಗೊಂಡ ಗಣೇಶ್, ತನ್ನ ಮೂವರು ಸಹಚರರ ಜತೆ ಸೇರಿಕೊಂಡು ಅರುಣ್ ಕೊಲೆಗೆ ಸಂಚು ರೂಪಿಸಿದ್ದ. ಜೂ.28ರಂದು ಸಂಜೆ ಅರುಣ್‌ಗೆ ಕರೆ ಮಾಡಿದ್ದ ಗಣೇಶ್, ಹೊಸ ವ್ಯವಹಾರ ಸಂಬಂಧ ಚರ್ಚಿಸೋಣ ಜತೆಗೆ ಹೂಡಿಕೆಗೆ ಹಣ ಕೊಡಿಸುವುದಾಗಿ ಗಟ್ಟಿಗೆರೆಯ ವರಹಸಂದ್ರದ ಬಳಿ ಕರೆಸಿಕೊಂಡಿದ್ದಾರೆ. ಬಳಿಕ ಎಲ್ಲರೂ ಮದ್ಯ ಸೇವಿಸಿದ್ದು, ಅರುಣ್‌ಗೆ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ಅರುಣ್ ಮುಖಕ್ಕೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಮೀಪದ ಸೇತುವೆ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ತವರು ಮನೆಗೆ ಹೋಗಿದ್ದ ರಂಜಿತಾ: ಹತ್ಯೆಗೂ ಒಂದು ದಿನ ಮೊದಲು ರಂಜಿತಾ ಮಂಡ್ಯದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು. ಮತ್ತೂಂದೆಡೆ ಜೂ.28ರಂದು ತಡರಾತ್ರಿ ಪ್ರಿಯಕರ ಗಣೇಶ್, ರಂಜಿತಾಳಿಗೆ ಕರೆ ಮಾಡಿ ಪತಿ ಅರುಣ್‌ನನ್ನು ಹತ್ಯೆಗೈದಿರುವ ವಿಚಾರ ತಿಳಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.