ಬೆಂಗಳೂರು: ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ 19 ವರ್ಷದ ಯುವತಿಯ ಕತ್ತು ಹಿಸುಕಿ ಕೊಲೆಗೈದಿದ್ದ ಮೆಕ್ಯಾನಿಕ್‌ನನ್ನು ಯಶ ವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಮೋಹನ್ ಕುಮಾರ್ ನಗರ ನಿವಾಸಿ ಶರತ್ ಕುಮಾರ್ (29) ಬಂಧಿತ ಆರೋಪಿ. ಈತ ಜೂನ್ 1ರಂದು ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ ಪ್ರಿಯಾ(19) ಎಂಬಾಕೆಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.
ಸಂಜಯ ಗಾಂಧಿನಗರ ನಿವಾಸಿ ಪ್ರಿಯಾ ಎಪಿಎಂಸಿ ಯಾರ್ಡ್‌ನಲ್ಲಿರುವ ವೈಷ್ಣವಿ ಮಾಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯೆ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಶರತ್ ಕುಮಾರ್ ಪರಿಚ ಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರ ವಾಗಿದೆ. ಈ ವಿಚಾರ ತಿಳಿದ ಪ್ರಿಯಾ ಪೋಷಕರು ಇಬ್ಬರಿಗೂ ಪ್ರತ್ಯೇಕವಾಗಿ ವಾಸಿಸಲು ಅನುಮತಿ ನೀಡಿದ್ದರು. ಹೀಗಾಗಿ ಪ್ರಿಯಾ ಮತ್ತು ಶರತ್‌ಕುಮಾರ್ ಮೋಹನ್ ಕಮಾರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಶರತ್‌ಕುಮಾರ್‌ಗೆ ಈಗಾಗಲೇ ಮೊದಲೇ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂಬುದು ಗೊತ್ತಾಗಿದೆ. ಆದರೂ ಪ್ರಿಯಾ, ಶರತ್ ಕುಮಾರ್ ಜತೆ ಸಹ ಜೀವನ ನಡಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಮೊದಲ ಪತ್ನಿ ಭೇಟಿ ವಿಚಾರದಲ್ಲಿ ಗಲಾಟೆ: ಆರೋಪಿ ಶರತ್ ಕುಮಾರ್, ಮೋಹನ್ ಕುಮಾರ್ ನಗರದಲ್ಲೇ ಇರುವ ತನ್ನ ಮೊದಲ ಪತ್ನಿ ಮತ್ತು ಮೂವರು ಮಕ್ಕಳು ವಾಸವಾಗಿರುವ ಮನೆಗೆ ಆಗಾಗ್ಗೆ ಹೋಗಿ ಬರು ತ್ತಿದ್ದ. ಈ ವಿಚಾರ ತಿಳಿದ ಪ್ರಿಯಾ ಪ್ರಶ್ನಿಸಿದ್ದರು. ಅಲ್ಲದೆ, ಮತ್ತೂಮ್ಮೆ ಹೋಗದಂತೆ ತಾಕೀತು ಮಾಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅದರಿಂದ ಆಕ್ರೋಶಗೊಂಡಿದ್ದ ಆರೋಪಿ, ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದ. ಇದೇ ವಿಚಾರವಾಗಿ ಜೂನ್ 1 ರಂದು ಗಲಾಟೆ ಆಗಿದ್ದ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲು : ಜೂನ್ 1ರಂದು ಪ್ರಿಯಾಳನ್ನು ಕೊಂದ ಬಳಿಕ ಆರೋಪಿ ಶರತ್ ಗಾಬರಿಗೊಂಡು, ಕೂಡಲೇ ಮನೆ ಮಾಲೀಕರು ಮತ್ತು ಮೊದಲ ಪತ್ನಿಗೆ ಪ್ರಿಯಾ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ಅವರು, ಪ್ರಿಯಾ ತಾಯಿ ಉಷಾಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಷಾ, ಶರತ್‌ನನ್ನು ಪ್ರಶ್ನಿಸಿದಾಗ, “ರಾತ್ರಿ ಪ್ರಿಯಾ ಅಡುಗೆ ಮಾಡುತ್ತಿದ್ದಳು. ತಾನೂ ಅಂಗಡಿಗೆ ಹೋಗಿ ವಾಪಸ್ ಮನೆಗೆ ಬಂದಾಗ ಪ್ರಿಯಾ ಮಲಗಿದ್ದಳು. ಆಕೆಗೆ ಸುಸ್ತಾಗಿರಬಹುದು ಎಂದು ಸುಮ್ಮನಾಗಿದ್ದೆ. ಕೆಲ ಹೊತ್ತಿನ ಬಳಿಕ ಎಚ್ಚರಿಸಲು ಹೋದಾಗ ಎಚ್ಚರಗೊಳ್ಳಲಿಲ್ಲ. ಗಾಬರಿಗೊಂಡು ಬಿ.ಕೆ. ನಗರದಲ್ಲಿರುವ ತನ್ನ ಮೊದಲ ಪತ್ನಿಯನ್ನು ಕರೆದುಕೊಂಡು ಬಂದಿರುವುದಾಗಿ ಹೇಳಿದ್ದ. ಅಲ್ಲದೆ, ಸಮೀಪದ ಆಸ್ಪತ್ರೆಗೆ ಕೊಂಡೊಯ್ದಾಗ ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಂತೆ ಗೋಳಾಡಿದ್ದ.
ಈತನ ವರ್ತನೆಯಿಂದ ಪೊಲೀಸರು ಅನುಮಾನಗೊಂಡಿದ್ದರು. ಇದೇ ವೇಳೆ ಪ್ರಿಯಾ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆ ಬಳಿಯ ಪಕ್ಕೆಲುಬನ್ನು ಹಿಸುಕಿ ಮುರಿದಿದ್ದರಿಂದ ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ಕೂಡಲೇ ಶರತ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.