ಬೆಂಗಳೂರು: ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಕಾರ್ತಿಕ್, ಅಭಿಷೇಕ್, ನೆಲ್ಸನ್, ಯೊಹಾನ್, ಡ್ಯಾನಿಯಲ್ ಆ್ಯಂಟನಿ ಹಾಗೂ ಶ್ರೀಕಾಂತ್ ಬಂಧಿತರು.
ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಮಾರ್ವೇಶ್ (19) ಕೊಲೆಯಾದವ. ಮಾರ್ವೇಶ್‌ನ ಸ್ನೇಹಿತನೊಬ್ಬ ಯುವತಿಯೊಬ್ಬಳನ್ನ ಪ್ರೀತಿಸುವುದಾಗಿ ಆಕೆಯ ಹಿಂದೆ ಬಿದ್ದಿದ್ದ. ಈ ವಿಚಾರವನ್ನು ಯುವತಿ ತನ್ನ ಸ್ನೇಹಿತ ಶ್ರೀಕಾಂತ್‌ಗೆ ತಿಳಿಸಿದ್ದಳು. ಶ್ರೀಕಾಂತ್ ತನ್ನ ಸ್ನೇಹಿತರ ಬಳಿ ಚರ್ಚಿಸಿದಾಗ ಮಾರ್ವೇಶ್ ಮೂಲಕ ಆತನನ್ನ ಕರೆಸಿ ವಿಚಾರಿಸಲು ಮುಂದಾಗಿದ್ದರು. ಅದರಂತೆ ಶ್ರೀಕಾಂತ್‌ನ ಸ್ನೇಹಿತರಾದ ಯೊಹಾನ್ ಹಾಗೂ ಡೇನಿಯಲ್ ಬುಧವಾರ ಬೆಳಗ್ಗೆ ಕಾಲೇಜು ಬಳಿ ಮಾರ್ವೇಶ್‌ನನ್ನು ಮಾತನಾಡುವ ನೆಪದಲ್ಲಿ ಕರೆಸಿದ್ದರು. ನಂತರ ಮಾರ್ವೇಶ್‌ನನ್ನು ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ವಶಕ್ಕೆ ಒಪ್ಪಿಸಿದ್ದರು. ಇತ್ತ ಆರೋಪಿಗಳು “ನಿನ್ನ ಸ್ನೇಹಿತನಿಗೆ ಕರೆ ಮಾಡಿ ಕರೆಸು’ ಎಂದು ಮಾರ್ವೇಶ್ ಗೆ ಬೆದರಿಸಿ ಪೈಪ್‌ಗ್ಳಿಂದ ಹಲ್ಲೆ ಮಾಡಿದ್ದರು. ಆತ ಕರೆ ಸ್ವೀಕರಿಸದಿದ್ದಾಗ ಮಾರ್ವೇಶ್‌ನನ್ನು ಕಾಲೇಜಿನ ಬಳಿ ಬಿಟ್ಟು ಹೋಗಿದ್ದರು. ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಮಾರ್ವೇಶ್ ಸ್ಥಳದಲ್ಲಿ ಕುಸಿದು ಬಿದ್ದಿದ್ದ. ಇದನ್ನು ಗಮನಿಸಿದ ಮಾರ್ವೇಶ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಾರ್ವೇಶ್ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಮಾರ್ವೇಶ್ ಮರಣ ಹೊಂದಿರುವ ಬಗ್ಗೆ ಖಾಸಗಿ ಆಸ್ಪತ್ರೆಯಿಂದ ಬಾಣಸವಾಡಿ ಠಾಣೆಗೆ ಮಾಹಿತಿ ಬಂದಿತ್ತು. ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ಧಾವಿಸಿ ತನಿಖೆ ಆರಂಭಿಸಿದ್ದರು. ಮೃತ ಮಾರ್ವೇಶ್ ಪಾಲಕರನ್ನು ವಿಚಾರಿಸಿದಾಗ, ಗುರುವಾರ ಸಂಜೆ ಮನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಮ್ಮ ಮಗ ಮನೆಗೆ ಬಂದಿದ್ದಾನಾ ಎಂದು ಪ್ರಶ್ನಿಸಿದ್ದ. ಇಲ್ಲ ಎಂದು ಪಾಲಕರು ಉತ್ತರಿಸಿದಾಗ, ಇಷ್ಟು ಹೊತ್ತಿಗೆ ಬಂದಿರಬೇಕಿತ್ತಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ, ಈ ಕುರಿತು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಾಲಕರು ಪೊಲೀಸರು ಮಾಹಿತಿ ನೀಡಿದರು.
ಇಬ್ಬರು ಆರೋಪಿಗಳ ವಿರುದ್ಧ ರೌಡಿ ಪಟ್ಟಿ : ಕೊಲೆ ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಠಾಣಾ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದರೆ. ಆರೋಪಿಗಳ ಪೈಕಿ ಕಾರ್ತಿಕ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ರೌಡಿ ಪಟ್ಟಿ ಇದೆ. ಚುನಾವಣೆ ಸಂದರ್ಭದಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅಭಿಷೇಕ್ ಹಾಗೂ ನೆಲ್ಸನ್ ವಿರುದ್ಧವೂ ಕೊಲೆಯತ್ನ ಪ್ರಕರಣಗಳಿದ್ದು, ಅವರಿಬ್ಬರ ವಿರುದ್ಧವೂ ಮುಂದಿನ ದಿನಗಳಲ್ಲಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾ ಶಂಕರ್ ಗುಳೇದ್ ಹೇಳಿದ್ದಾರೆ.