Advertisement
ಈ ಸಂಬಂಧ ವೈಟ್‌ಫೀಲ್ಡ್ ನಿವಾಸಿ ಅನಿಲ್ ಕುಮಾರ್ (38) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಸುಬ್ಬರಾಯಪ್ಪ (58) ಎಂಬವರನ್ನು ಹತ್ಯೆಗೈದಿದ್ದ. ಜ.21ರಂದು ಗಂಜೂರು ನಿವಾಸಿ ಸುಬ್ಬರಾಯಪ್ಪ ಗಂಜೂರಿ ನರಿಗೆ ಗ್ರಾಮದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಅವರ ದ್ವಿಚಕ್ರವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಪರಿಣಾಮ ಸುಬ್ಬರಾಯಪ್ಪ ಬಲಗಾಲಿನ ಮೂಳೆ ಮುರಿದು, ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಸುಬ್ಬರಾಯಪ್ಪ ಪುತ್ರ ದೇವರಾಜ್ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Related Articles
Advertisement
ಸಿಸಿ ಕ್ಯಾಮೆರಾ ನೀಡಿದ ಸುಳಿವು: ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾ ಇರಲಿಲ್ಲ, ಅಪಘಾತ ನಡೆದ ಸ್ಥಳದ ಸಮೀಪದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ನಂಬರ್ ಇಲ್ಲದ ಸೆಲ್ಫ್ ಡ್ರೈವಿಂಗ್ ಕಂಪೆನಿಗೆ ಸೇರಿದ ಮಹೀಂದ್ರ ಸ್ಕಾರ್ಪಿಯೋ ವಾಹನ ಅತಿವೇಗವಾಗಿ ಹಾದು ಹೋಗಿತ್ತು.
ಮತ್ತೂಂದೆಡೆ ಪ್ರಕರಣದ ತನಿಖೆ ವೇಳೆ ಮೃತ ಸುಬ್ಬರಾಯಪ್ಪ ಅವರಿಗೆ ಅವರೇಕಾಳು ವ್ಯಾಪಾರದ ಸಂಬಂಧ ವ್ಯಕ್ತಿಯೊಬ್ಬರು ಮೊಬೈಲ್ ಗೆ ಕರೆ ಮಾಡಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಆಗ ಸುಬ್ಬರಾಯಪ್ಪ ಅವರ ಸಿಡಿಆರ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಕೊನೆಗೆ ಬಂದಿರುವ ಕರೆಯ ನಂಬರ್ ಸ್ವಿಚ್‌ಆಫ್ ಆಗಿತ್ತು.
ಅನಂತರ ಡ್ರೈವಿಂಗ್ ಕಂಪೆನಿಯವರನ್ನು ಸಂಪರ್ಕಿಸಿ ಪೊಲೀಸರು ವಿವರಗಳನ್ನು ಪಡೆದಾಗ ಅವರಲ್ಲಿ ಲಭ್ಯವಿದ್ದ ವಾಹನಗಳ ಜಿಪಿಎಸ್ ಚಲನವಲನಗಳ ಆಧಾರದ ಮೇಲೆ ಅವರ ಕಂಪೆನಿಯ ಮಹೀಂದ್ರ ಸ್ಕಾರ್ಪಿಯೋ ವಾಹನ ಅಪಘಾತ ನಡೆದ ಸ್ಥಳದಿಂದ ಹಾದು ಹೋಗಿರುವುದು ಪತ್ತೆಯಾಗಿತ್ತು. ಈ ಸ್ಕಾರ್ಪಿಯೋ ವಾಹನವನ್ನು ಬಾಡಿಗೆಗೆ ಪಡೆದಿದ್ದ ಹಾಗೂ ಮೃತರಿಗೆ ಕೊನೆಯ ಕರೆ ಮಾಡಿದ ಗ್ರಾಹಕ ಇಬ್ಬರು ಒಬ್ಬನೇ ಆಗಿದ್ದ ಅನಿಲ್ ಕುಮಾರ್‌ನನ್ನು ಪತ್ತೆ ಹಚ್ಚಿ ಮಾ.10ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಹಿರಂಗಗೊಂಡಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಇದನ್ನೂ ಓದಿ :ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗೆ ‘ಕೈ’ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪತ್ನಿ, ಮಕ್ಕಳಿಂದಲೇ ಹತ್ಯೆಗೆ ಸುಪಾರಿ: ಸುಬ್ಬರಾಯಪ್ಪ ಅವರನ್ನು ಕೊಲೆ ಮಾಡಲು ಅವರ ಪತ್ನಿ ಯಶೋಧಮ್ಮ ಹಾಗೂ ಮಗ ದೇವರಾಜ್‌ನಿಂದ 6 ಲಕ್ಷ ರೂ.ಗೆ ಅನಿಲ್ ಕುಮಾರ್‌ಗೆ ಸುಪಾರಿ ಕೊಟ್ಟಿದ್ದರು. ಅದುವರೆಗೆ ಅವರಿಂದ 4.40 ಲಕ್ಷ ರೂ. ಪಡೆದುಕೊಂಡಿದ್ದ ಆರೋಪಿ, ಯಶೋಧಮ್ಮ ಹಾಗೂ ಅವರ ಮಕ್ಕಳಾದ ಭರತ್, ದೇವರಾಜ್ ಸೂಚನೆ ಮೇರೆಗೆ ಸ್ನೇಹಿತರಾದ ಸುನೀಲ್ ಕುಮಾರ್, ನಾಗೇಶ್ ಹಾಗೂ ಧನುಶ್ ಎಂಬುವವರನ್ನು ಬಳಸಿಕೊಂಡು ಕೃತ್ಯ ಎಸಗಿದ್ದಾನೆ. ಅಲ್ಲದೆ, ಈ ಕೊಲೆಗೆ ಒಬ್ಬ ವಕೀಲರು ಕೊಲೆ ಯೋಜನೆ ರೂಪಿಸಿಕೊಟ್ಟಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿ ಅನಿಲ್ ಕುಮಾರ್ ಹೇಳಿಕೆ ನೀಡಿದ್ದಾನೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಮುಳಬಾಗಿಲು ತಾಲೂಕಿನ ತಂಬಳ್ಳಿ ಬಳಿ ಇರುವ ಇಂಪ್ತಿಯಾಜ್ ಗ್ಯಾರೇಜ್‌ನಲ್ಲಿ 57 ಸಾವಿರ ರೂ.ಗಳಿಗೆ ದುರಸ್ತಿ ಮಾಡಿಸಿದ್ದ. ಆರೋಪಿಯ ಸ್ವ-ಇಚ್ಚಾ ಹೇಳಿಕೆ ಹಾಗೂ ತನಿಖೆಯಲ್ಲಿ ಕಂಡುಬಂದ ಸಾಕ್ಷ್ಯಾಧಾರಗಳಿಂದ ಈ ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣೆಗೆ ಪ್ರಕರಣವನ್ನುಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಹತ್ಯೆಗೆ ಕಾರಣವೇನು ?
ಸುಬ್ಟಾರಾಯಪ್ಪ ಅವರು ವರ್ತೂರು ಬಳಿ ಒಂದು ಎಕರೆ ಜಮೀನು ಹೊಂದಿದ್ದು, ಈ ವಿಚಾರವಾಗಿ ಮಕ್ಕಳು ಜಗಳ ಮಾಡುತ್ತಿದ್ದರು. ತಂದೆ ಸುಬ್ಬರಾಯಪ್ಪ ಗಮನಕ್ಕೆ ಬಾರದಂತೆ ಮಕ್ಕಳು ಗಿಫ್ಟ್ ಡೀಡ್ ಮಾಡಿಕೊಂಡಿದ್ದರು. ಅದರಿಂದ ಆಕ್ರೋಶಗೊಂಡ ಸುಬ್ಬರಾಯಪ್ಪ ಪತ್ನಿ ಹಾಗೂ ಮಕ್ಕಳ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಲಾಗಿದೆ. ತಲೆಮರೆಸಿಕೊಂಡಿರುವ ಪತ್ನಿ ಯಶೋಧಮ್ಮ ಮತ್ತು ಮಕ್ಕಳಿಗಾಗಿ ವರ್ತೂರು ಠಾಣೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.