Advertisement

Bangalore Crime: ಕೊನೆ ಭೇಟಿಗೆ ಬಂದು ಪ್ರೇಯಸಿ ಕೊನೆಯಾಗಿಸಿದ 

02:21 PM Jul 05, 2023 | Team Udayavani |

ಬೆಂಗಳೂರು: ತನ್ನೊಂದಿಗೆ ಲವ್‌ ಬ್ರೇಕಪ್‌ ಮಾಡಿಕೊಂಡು ಮತ್ತೂಬ್ಬನ ಜತೆ ಡೇಟಿಂಗ್‌ ಮಾಡುತ್ತಿದ್ದ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದ ಪ್ರಿಯಕರನನ್ನು ಒಂದು ತಿಂಗಳ ಬಳಿಕ ಜೀವನ್‌ ಭೀಮಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೊನೆಯ ಬಾರಿಗೆ ಭೇಟಿಯಾಗುತ್ತೇನೆ ಎಂದು ಪುಸಲಾಯಿಸಿ ಯುವತಿಯ ಫ್ಲ್ಯಾಟ್‌ಗೆ ಬಂದು ಕೊಲೆಗೈದಿದ್ದನು. ಆಂಧ್ರಪ್ರದೇಶ ಮೂಲದ ಅರ್ಪಿತ್‌ ಗುರಿಜಾಲ (28) ಬಂಧಿತ ಆರೋಪಿ. ಈತ ಜೂನ್‌ 5ರಂದು ಹೈದರಾಬಾದ್‌ ಮೂಲದ ಆಕಾಂಕ್ಷಾ(23) ಎಂಬಾಕೆಯನ್ನು ಆಕೆಯ ಫ್ಲ್ಯಾಟ್‌ನಲ್ಲೇ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಆತ್ಮಹತ್ಯೆ ಕಥೆ ಕಟ್ಟಲು ಯತ್ನಿಸಿ ಪರಾರಿಯಾಗಿದ್ದ. ಕಳೆದ ಒಂದು ತಿಂಗಳಿಂದ ಆರೋಪಿ ವಿಜಯವಾಡ, ಅಸ್ಸಾಂ ಭಾಗದಲ್ಲಿ ಸುತ್ತಾಡಿ, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಾಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಅರ್ಪಿತ್‌ ಎಂಬಿಎ ವ್ಯಾಸಂಗ ಮಾಡಿದ್ದು, ಆಕಾಂಕ್ಷಾ ಬಿ.ಕಾಂ ಪದವೀಧರೆ. ಎರಡು ವರ್ಷಗಳ ಹಿಂದೆ ಇಬ್ಬರು ಬೆಂಗಳೂರಿಗೆ ಬಂದಿದ್ದು, ಮಾರ್ಕೆಟಿಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಪರಿಚಯವಾಗಿದ್ದು, ಕೆಲ ದಿನಗಳ ಬಳಿಕ ಪ್ರೇಮಾಂಕುರವಾಗಿತ್ತು. ಆ ಬಳಿಕ ಇಬ್ಬರು ಒಂದೇ ಮನೆಯಲ್ಲಿ ಸಹ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಅರ್ಪಿತ್‌ಗೆ ಹೈದರಾಬಾದ್‌ನಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿಯೇ ವಾಸವಾಗಿದ್ದಾನೆ. ಇನ್ನು ಆಕಾಂಕ್ಷಾ ಕೋಡಿಹಳ್ಳಿಯ 6ನೇ ಕ್ರಾಸ್‌ನಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ಮತ್ತೂಬ್ಬನ ಜತೆ ಡೇಟಿಂಗ್‌: ಈ ಮಧ್ಯೆ ಆಕಾಂಕ್ಷಾ ಮತ್ತೂಬ್ಬ ಯುವಕನ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಈ ವಿಚಾರ ತಿಳಿದ ಅರ್ಪಿತ್‌, ಪ್ರೇಯಸಿಯನ್ನು ಪ್ರಶ್ನಿಸಿದ್ದಾನೆ. ಅಲ್ಲದೆ, ಅದನ್ನು ಬ್ರೇಕಪ್‌ ಮಾಡಿಕೊಳ್ಳುವಂತೆ ಬುದ್ಧಿವಾದ ಹೇಳಿ ದ್ದಾನೆ. ಆದರೂ ಆಕೆ, ಹೊಸ ಪ್ರಿಯಕರನ ಜತೆ ಮಾಲ್‌ ಸೇರಿ ಎಲ್ಲೆಡೆ ಸುತ್ತಾಡುತ್ತಿದ್ದರು. ಡೇಟಿಂಗ್‌ ಮುಂದುವರಿಸಿದ್ದರು. ಅದರಿಂದ ಆಕ್ರೋಶಗೊಂಡಿದ್ದ ಅರ್ಪಿತ್‌, ಪ್ರೇಯಸಿಗೆ ಕರೆ ಮಾಡಿ ಜಗಳ ಮಾಡಿದ್ದ. ಈ ವೇಳೆಯೇ ಆಕಾಂಕ್ಷಾಗೆ ಕೊಲೆ ಬಗ್ಗೆ ಎಚ್ಚರಿಕೆ ನೀಡಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕೊನೆ ಬಾರಿ ಎಂದು ಬಂದ, ಕೊಂದ!: ಈ ಮಧ್ಯೆ ಜೂನ್‌ 3ರಂದು ಕರೆ ಮಾಡಿದ್ದ ಆರೋಪಿ, ನೀನು ಯಾರೊಂದಿಗಾದರೂ ಡೇಟಿಂಗ್‌ ಮಾಡಿಕೊ. ಕೊನೆಗೆ ಬಾರಿ ನಿನ್ನನ್ನು ಭೇಟಿ ಆಗುತ್ತೇನೆ ಎಂದು ಹೇಳಿ, ಜೂನ್‌ 4ರಂದೇ ಬೆಂಗಳೂರಿಗೆ ಬಂದಿದ್ದಾನೆ. ಜೂನ್‌ 5ರಂದು ಇಬ್ಬರು ಒಟ್ಟಿಗೆ ಹೊರಗಡೆ ಸುತ್ತಾಡಿ, ಮಧ್ಯಾಹ್ನ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಸ್ವಲ್ಪ ಮದ್ಯ ಸೇವಿಸಿದ್ದ ಅರ್ಪಿತ್‌, ಮತ್ತೂಮ್ಮೆ ಡೇಟಿಂಗ್‌ ವಿಚಾರವಾಗಿ ಪ್ರೇಯಸಿ ಜತೆ ಜಗಳ ತೆಗಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆಕಾಂಕ್ಷಳನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು, ಆಕೆಯ ವೇಲ್‌ ನಿಂದಲೇ ಕುತ್ತಿಗೆ ಬಿಗಿದು ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಬಿಂಬಿಸಲು ಯತ್ನಿಸಿದ್ದಾನೆ. ಸಾಧ್ಯವಾಗದೆ, ನೆಲದ ಮೇಲೆಯೇ ಮೃತದೇಹ ಇಟ್ಟು ಪರಾರಿಯಾಗಿದ್ದ. ಸಂಜೆ 7 ಗಂಟೆ ಸುಮಾರಿಗೆ ಆಕಾಂಕ್ಷಳ ಸ್ನೇಹಿತೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಹೇಳಿದರು.

ಬ್ಯಾಂಕ್‌ ಖಾತೆ ಜಪ್ತಿ ಮಾಡಿದ್ದಕ್ಕೆ ಸಿಕ್ಕಿಬಿದ್ದ : ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿ, ಕಚೇರಿಯ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಅಲ್ಲಿಯೇ ಬಿಟ್ಟು ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದ್ದ. ಮಾರ್ಗ ಮಧ್ಯೆಯೇ ಭೋಪಾಲ್‌ನಲ್ಲಿ ಇಳಿದುಕೊಂಡು ಅಸ್ಸಾಂಗೆ ಪರಾರಿಯಾಗಿದ್ದ. ಹೀಗಾಗಿ ಆರೋಪಿಯ ಬ್ಯಾಂಕ್‌ ಖಾತೆಗಳಲ್ಲಿರುವ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಅಸ್ಸಾಂನಲ್ಲಿ ಸೇಲ್ಸ್‌ಮ್ಯಾನ್‌, ಹೋಟೆಲ್‌ಗ‌ಳಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲಸದ ಹಣವನ್ನು ತನಗೆ ಸಿಗದಿದ್ದರಿಂದ ಬೇಸರಗೊಂಡಿದ್ದ ಆರೋಪಿ, ವಿಜಯವಾಡದ ಸಂಬಂಧಿಯೊಬ್ಬರ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು. ಹಣಕ್ಕಾಗಿ ಅವರಿಗೆ ಆರೋಪಿ ಸಂಪರ್ಕಿಸಿದ್ದ. ನಂತರ ಆ ವ್ಯಕ್ತಿಯ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ ಆರೋಪಿ ಹೊಸ ನಂಬರ್‌ನಿಂದ ಕರೆ ಮಾಡಿರುವುದು ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಆರೋಪಿ ವೈಟ್‌ಫೀಲ್ಡ್‌ ಭಾಗದ ಕಡೆ ಬಂದಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next