ಬೆಂಗಳೂರು: ಬಾಡಿಗೆ ಮನೆ ನೋಡುವ ನೆಪದಲ್ಲಿ ಮನೆಗೆ ನುಗ್ಗಿದ ಮಹಿಳೆಯೊಬ್ಬರು ಮನೆ ಒಡತಿ ಮೇಲೆ ಹಲ್ಲೆಗೈದು ಚಿನ್ನಾಭರಣ ದೋಚಿರುವ ಘಟನೆ ನಂದಿನಿ ಲೇಔಟ್‌ನಲ್ಲಿ ನಡೆದಿದೆ.
ಲಗ್ಗರೆಯ ಪಾರ್ವತಿ ನಗರ ದಲ್ಲಿ ಮನೆ ಬಾಡಿಗೆ ಕೇಳುವ ಸೋಗಿನಲ್ಲಿ ಬಂದಿದ್ದ ಮಹಿಳೆಯೊಬ್ಬಳು ಮನೆ ತೋರಿಸುವಂತೆ ಮನೆ ಮಾಲಕಿ ಶಾಂತಮ್ಮಗೆ ಸೂಚಿಸಿದ್ದರು. ಶಾಂತಮ್ಮ ಮನೆ ಒಳಗೆ ಹೋಗುತ್ತಿದ್ದಂತೆ ಮನೆ ನೋಡಲು ಬಂದಿರುವ ಮಹಿಳೆಯು ಕಟ್ಟಿಗೆ ಪೀಸ್‌ನಿಂದ ಮನೆ ಮಾಲಕಿ ಶಾಂತಮ್ಮ ತಲೆಗೆ ಹಲ್ಲೆ ನಡೆಸಿದ್ದಾಳೆ. ಶಾಂತಮ್ಮ ರಕ್ತಸ್ರಾವವಾಗಿ ನೆಲಕ್ಕುರುಳುತ್ತಿದ್ದಂತೆ ಶಾಂತಮ್ಮ ಕತ್ತಿನಲ್ಲಿದ್ದ ಚಿನ್ನಾಭರಣ ಕಸಿದು ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ.
ಶಾಂತಮ್ಮ ಚೀರಾಟ ಕೇಳಿ ಸ್ಥಳಕ್ಕೆ ದೌಡಾಯಿಸಿದ ನೆರೆ-ಹೊರೆಯವರು ಶಾಂತಮ್ಮಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿ ಚಿನ್ನದ ಸರ ದೋಚಿದ ಆರೋಪಿ ಮಹಿಳೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ಎಲ್ಲ ತಾಂತ್ರಿಕ ಆಯಾಮಗಳಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ.
ಮನೆ ಬಾಡಿಗೆ ಕೇಳುವ ನೆಪದಲ್ಲಿ ಹಲವು ದಿನಗಳಿಂದ ಒಂಟಿಯಾಗಿಯೇ ಮಹಿಳೆಯೊಬ್ಬರು ಓಡಾಡುತ್ತಿದ್ದರು. ಮನೆ ಬಾಡಿಗೆಗೆ ಇದೆಯಾ ಎಂದು ಕೇಳುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
4 ಮನೆಯೊಡತಿ ಶಾಂತಮ್ಮ: ಶಾಂತಮ್ಮ ಪತಿ ಕೋವಿಡ್‌ನಿಂದ ಮೃತಪಟ್ಟ ಬಳಿಕ ಶಾಂತಮ್ಮ ಒಬ್ಬರೇ ವಾಸವಾಗಿದ್ದರು. ಶಾಂತಮ್ಮ 4 ಮನೆ ಒಡತಿಯಾಗಿರುವ ಶಾಂತಮ್ಮ 2 ಮನೆ ಬಾಡಿಗೆ ಕೊಟ್ಟಿದ್ದರೆ. ಉಳಿದ 2 ಮನೆಗಳು ಖಾಲಿಯಾಗಿದ್ದವು. ಆರೋಪಿ ಮಹಿಳೆ ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ಕೇಳಿದ್ದರು. 15 ದಿನಗಳಿಂದ ಪದೇ ಪದೆ ಬಂದು ವಿಚಾರಿಸಿ ಪರಿಚಯ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.