ಬೆಂಗಳೂರು: ಬನ್ನೇರುಘಟ್ಟ ಸಮೀಪದ ಎಎಮ್‌ಸಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ ಹಾಸ್ಟೆಲ್ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೇರಳ ಮೂಲದ ನಿತಿನ್ (19) ಆತ್ಮಹತ್ಯೆಗೆ ಶರಣಾದವನು.
ಸಿಎಸ್ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದ ನಿತಿನ್ ಡಿ.1ರಂದು ಕಾಲೇಜು ಸೇರಿದ್ದ. ಡಿ.14ರಂದು ಮಧ್ಯಾಹ್ನ ಹಾಸ್ಟೆಲ್ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ನಿತಿನ್ ಹಲವು ಹೊತ್ತಿನ ಬಳಿಕವೂ ಶೌಚಾಲಯದಿಂದ ರೂಂಗೆ ಬಾರದ ಹಿನ್ನೆಲೆಯಲ್ಲಿ ಸಹಪಾಠಿಗಳು ವಾರ್ಡನ್‌ಗೆ ಮಾಹಿತಿ ನೀಡಿದ್ದರು.
ವಾರ್ಡನ್ ಶೌಚಾಲಯದ ಬಾಗಿಲು ಒಡೆದಾಗ ನಿತಿನ್ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡು ಬಂದಿದೆ.
ಬನ್ನೆರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾಲಕರಿಂದ ದೂರವಿದ್ದ ಬಗ್ಗೆ ನಿತಿನ್ ಬೇಸರಿಸಿಕೊಂಡಿದ್ದ. ಡಿ.1ಕ್ಕೆ ಕಾಲೇಜು ಸೇರಿದ್ದ ನಿತಿನ್ ಆದಾದ ಬಳಿಕ ಪದೇ ಪದೆ ದುಬೈನಲ್ಲಿ ವಾಸವಿದ್ದ ತಂದೆ-ತಾಯಿಗೆ ಕರೆ ಮಾಡುತ್ತಿದ್ದ. ಪಾಲಕರ ಪ್ರೀತಿ ಸಿಗದೇ ಬೇಸರಗೊಂಡು ಚಾಕುವಿನಿಂದ ತಾನೇ ಚುಚ್ಚಿಕೊಂಡು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಡಿಸಿದ್ದಾರೆ.
ನಿತಿನ್ ಕುಟುಂಬದವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ವಿಲೇಜ್ ಮೂಲದವರು ಎಂದು ತಿಳಿದು ಬಂದಿದೆ.