ಬೆಂಗಳೂರು: ನೃತ್ಯ ಮಾಡುವ ಸಂದರ್ಭದಲ್ಲಿ ಮೈ, ಕಾಲು ತಗುಲಿದ ವಿಚಾರಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿ ರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಿರಿನಗರ ನಿವಾಸಿ ಯೋಗೇಶ್(24) ಕೊಲೆಯಾದವ. ಕೃತ್ಯ ಎಸಗಿದ ಆರೋಪಿ ಗಳ ಬಗ್ಗೆ ಮಾಹಿತಿಯಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಬೈಕ್‌ಗಳ ಸ್ವಚ್ಚಗೊಳಿಸುವ ಕೆಲಸ ಮಾಡಿಕೊಂಡಿರುವ ಯೋಗೇಶ್, ಶುಕ್ರವಾರ ರಾತ್ರಿ ಗಿರಿನಗರ ಬಳಿಯ ದೇವಸ್ಥಾನದಲ್ಲಿ ನಡೆದ ಶಿವರಾತ್ರಿ ಜಾಗರಣೆ ಪೂಜೆಗೆ ಹೋಗಿದ್ದ. ಈ ವೇಳೆ ಸ್ಥಳೀಯ ಯುವಕರು ನೃತ್ಯ ಮಾಡುತ್ತಿದ್ದರು. ಅವರೊಂದಿಗೆ ಈತ ಕೂಡ ನೃತ್ಯ ಮಾಡಿದ್ದಾನೆ. ಆ ವೇಳೆ ಆರೋಪಿಯೊಬ್ಬನಿಗೆ ಯೋಗೇಶ್‌ನ ಮೈ ಮತ್ತು ಕಾಲು ತಗುಲಿದೆ.
ಇದೇ ಕಾರಣಕ್ಕೆ ಆರೋಪಿಗಳು ಮತ್ತು ಯೋಗೇಶ್ ನಡುವೆ ಜಗಳ ಶುರುವಾಗಿದ್ದು ಅದು ವಿಕೋಪಕ್ಕೆ ಹೋದಾಗ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಎಲ್ಲರನ್ನೂ ಸ್ಥಳದಿಂದ ಕಳುಹಿಸಿದ್ದರು. ಇತ್ತ ಯೋಗೇಶ್, ಬೈಕ್‌ನಲ್ಲಿ ಮನೆ ಕಡೆ ಹೋಗುವಾಗ ಬ್ಯಾಟರಾಯನಪುರ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು, ಏಕಾಏಕಿ ಮಾರಕಾಸ್ತ್ರ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪ್ರಾಣ ಉಳಿಸಿ ಕೊಳ್ಳಲು ಬೈಕ್ ಬಿಟ್ಟು ಯೋಗೇಶ್, ಮನೆಯೊಂದರ ಕಾಂಪೌಂಡ್ ಜಿಗಿದಿದ್ದಾನೆ. ಆದರೂ ಬಿಡದ ಆರೋಪಿಗಳು ಚಾಕುವಿನಿಂದ ಯೋಗೇಶ್‌ನನ್ನು ಇರಿದು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.