Advertisement
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ವತಿಯಿಂದ ಸ್ವತ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಂಡ ನಗರಗಳಿಗೆ 2015ರಿಂದ “ಸಚ್ಛ ಸರ್ವೇಕ್ಷಣ್ ರ್‍ಯಾಂಕಿಂಗ್’ ನೀಡಲಾಗುತ್ತಿದೆ. ಅದರಂತೆ ಕಳೆದ ಫೆಬ್ರವರಿಯಲ್ಲಿ ಆರಂಭವಾದ 2018ರ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಉತ್ತಮ ಅಂಕಗಳು ದೊರೆತಿವೆ ಎನ್ನಲಾದರೂ, ಬೆಂಗಳೂರಿಗೆ ಪ್ರಶಸ್ತಿ ಒಲಿದಿಲ್ಲ.
Related Articles
Advertisement
ಆದರೆ, ಕಳೆದ ಎರಡು ದಿನಗಳ ಹಿಂದೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೊದಲ ಹಂತದಲ್ಲಿ ವಿವಿಧ ವಿಭಾಗಗಳಲ್ಲಿ 52 ನಗರಗಳಿಗೆ ಪ್ರಶಸ್ತಿ ನೀಡಿದೆ. ಅದರಂತೆ ಪಟ್ಟಿಯಲ್ಲಿ 3ರಿಂದ 10 ಲಕ್ಷ ಜನಸಂಖ್ಯೆವರೆಗಿನ ವಿಭಾಗದಲ್ಲಿ ಮೈಸೂರು “ದೇಶದ ಅತ್ಯಂತ ಸ್ವಚ್ಛನಗರ’ ಪ್ರಶಸ್ತಿ ಪಡೆದರೆ, “ಘನತ್ಯಾಜ್ಯ ನಿರ್ವಹಣೆ’ಯಲ್ಲಿ ದೇಶದ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗಿದೆ. ಆದರೆ, ಬೆಂಗಳೂರು ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಪಡೆಯುವಲ್ಲಿ ಸಫಲವಾಗಿಲ್ಲ.
ಪಾಲಿಕೆಗೆ ಮಾರಕವಾದ ಅಂಶವೇನು?: ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಂತೆ ನಗರಗಳು ಸಂಪೂರ್ಣವಾಗಿ “ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಳ್ಳಬೇಕು. ರ್‍ಯಾಂಕಿಂಗ್ ನೀಡುವ ವೇಳೆಯಲ್ಲೂ ಇದೇ ಅಂಶವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ.
ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳ ಪೈಕಿ ಈವರೆಗೆ ಯಾವುದೇ ವಾರ್ಡ್ ಅಧಿಕೃತವಾಗಿ ಬಯಲು ಶೌಚ ಮುಕ್ತವಾಗಿಲ್ಲ. ಸಮೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಸುಮಾರು 100 ವಾರ್ಡ್‌ಗಳು ಬಯಲು ಶೌಚ ಮುಕ್ತವಾಗಿವೆ ಎಂಬ ಪ್ರಸ್ತಾವನೆಯನ್ನು ಪಾಲಿಕೆಯ ಕೌನ್ಸಿಲ್ ಮುಂದಿಟ್ಟರೂ, ಈವರೆಗೆ ಅನುಮೋದನೆ ಸಿಕ್ಕಿಲ್ಲ.
ಸಹಾಯಕ್ಕೆ ಬಾರದ “ಕ್ಲೀನ್ ಬೆಂಗಳೂರು’: ಉತ್ತಮ ರ್‍ಯಾಂಕಿಂಗ್ ಪಡೆಯಲು ಸ್ವತ್ಛತೆಗೆ ಆದ್ಯತೆ ನೀಡಿದ್ದ ಪಾಲಿಕೆ, ನಗರದಲ್ಲಿ ಒಂದು ವಾರ ಕ್ಲೀನ್ ಬೆಂಗಳೂರು ಅಭಿಯಾನ ನಡೆಸಿದ್ದರು. ಈ ವೇಳೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು, ಸ್ವಯಂ ಸೇವಾ ಸಂಘಗಳು, ಸ್ವಯಂ ಸೇವಕರು ಹಾಗೂ ನಾಗರಿಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪರಿಣಾಮ ನಗರದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳು, ಮೇಲ್ಸೇತುವೆಗಳು- ಕೆಳ ಸೇತುವೆಗಳು, ಮಳೆನೀರು ಕಾಲುವೆಗಳು, ಹೊರವರ್ತುಲ ರಸ್ತೆಗಳು, ಕೆರೆ, ಉದ್ಯಾನ, ಆಟದ ಮೈದಾನ ಸೇರಿ ಪ್ರಮುಖ ಭಾಗಗಳಲ್ಲಿ ಸುರಿಯಲಾಗಿದ್ದ ಘನತ್ಯಾಜ್ಯ, ಕಟ್ಟಡ ಅವಶೇಷ, ಭಿತ್ತಿಪತ್ರಗಳನ್ನು ತೆರವುಗೊಳಿಸಿ ಸುಂದರವಾಗಿಸುವ ಪ್ರಯತ್ನ ನಡೆದಿದ್ದರೂ ಯಶಸ್ಸು ಸಿಕ್ಕಿಲ್ಲ.
ರ್‍ಯಾಂಕ್ ನೀಡುವ ಉದ್ದೇಶವೇನು?: ದೇಶದ ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ ಮೂಲಕ ಸ್ವತ್ಛತೆ ಹಾಗೂ ನೈರ್ಮಲ್ಯ ವೃದ್ಧಿಸುವುದು ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮದ ಉದ್ದೇಶವಾಗಿದೆ. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ನಗರಗಳ ಪಾಲು ಶೇ.70ರಷ್ಟಿದೆ. ಆ ಹಿನ್ನೆಲೆಯಲ್ಲಿ ನಗರಗಳಲ್ಲಿ ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವಂತೆ ನಗರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರ್‍ಯಾಂಕಿಂಗ್ ನೀಡಲಾಗುತ್ತದೆ.
4000 ನಗರಗಳ ಜತೆ ಪೈಪೋಟಿ: ಪ್ರಸಕ್ತ ಸಾಲಿನ ಸಮೀಕ್ಷೆಯಲ್ಲಿ ದೇಶದ 4041 ನಗರಗಳ ಜತೆಗೆ ಬೆಂಗಳೂರು ಸ್ಪಂದಿಸಿದೆ. ಅದರಂತೆ ದೇಶದ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಲ್ಲಿ ಮಧ್ಯ ಪ್ರದೇಶದ ಇಂದೋರ್ ಹಾಗೂ ಭೋಪಾಲ್ ನಗರಗಳಿದ್ದು, ಮೂರನೇ ಸ್ಥಾನವನ್ನು ಚಂಡೀಘಡ ಪಡೆದಿದೆ. ಮೊದಲ ಹಂತವಾಗಿ 52 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದ ನಗರ ಪಟ್ಟಿ ಬಿಡುಗಡೆಯಾಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ ನಗರಗಳು ಯಾವ ಸ್ಥಾನದಲ್ಲಿವೆ ಎಂಬ ಪಟ್ಟಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರಿನಲ್ಲಿರುವ ತ್ಯಾಜ್ಯ ಸಂಸ್ಕರಣೆ ಮಾದರಿಯನ್ನು ದೇಶಾದ್ಯಂತ ಅನುಸರಿಸುವಂತೆ ಈ ಹಿಂದಿನ ನಗರಾಭಿವೃದ್ಧಿ ಸಚಿವರೇ ಪತ್ರದ ಮೂಲಕ ತಿಳಿಸಿದ್ದರು. ಜತೆಗೆ ದೇಶದಲ್ಲೇ ಅತಿ ಹೆಚ್ಚು ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಸ್ವತ್ಛತೆ ಹೊಂದಿರುವುದು ಬೆಂಗಳೂರು ನಗರ. ಆದರೂ, ಬೆಂಗಳೂರಿಗೇಕೆ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಪ್ರಶಸ್ತಿ ಸಿಕ್ಕಿಲ್ಲ ಎಂಬುದು ತಿಳಿಯುತ್ತಿಲ್ಲ. -ಸಫ್ರಾಜ್ ಖಾನ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ * ವೆಂ.ಸುನಿಲ್‌ಕುಮಾರ್