Advertisement
ಬೆಂಗಳೂರಿನ “ಉದಯವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ “ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜಧಾನಿಯ ಪೊಲೀಸ್ ವ್ಯವಸ್ಥೆಯ ಬಲವರ್ಧನೆ, ಆಧುನೀಕರಣವನ್ನು ಬಲವಾಗಿ ಸಮರ್ಥಿಸಿಕೊಂಡರು.
Related Articles
Advertisement
ಸಂಚಾರ ವಿಭಾಗದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಇದೆ. ಸದ್ಯ ಅತ್ಯಾಧುನಿಕ ತಂತ್ರಜ್ಞಾನದಿಂದಲೇ ಶೇ.70-80ರಷ್ಟು ಸಂಚಾರ ನಿರ್ವಹಿಸಲಾಗುತ್ತಿದೆ. ಹೀಗಾಗಿ ಅಧಿಕ ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಸ್ಥಿತಿವಂತರು ಖಾಸಗಿ ವಾಹನ ಬಿಟ್ಟು ಯಾವಾಗ ಸಾರ್ವಜನಿಕ ಸಾರಿಗೆ ಬಳಸುತ್ತಾರೋ? ಆಗ ಸ್ವಲ್ಪ ಮಟ್ಟಿಗೆ ಪಾರ್ಕಿಂಗ್ ಸಮಸ್ಯೆ ಜತೆಗೆ ಸಂಚಾರ ದಟ್ಟಣೆ ನಿಯಂತ್ರಿಸಬಹುದು. ಈ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಮನವೊಲಿಕೆ ಸಹ ಅಗತ್ಯವಿದೆ ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ಪೊಲೀಸ್ ಕಾರ್ಯವೈಖರಿ ಬಗ್ಗೆ ರೇಟಿಂಗ್ ಕೊಡಿ:
ಪೊಲೀಸ್ ಇಲಾಖೆ ಸ್ಥಿತಿವಂತರು, ಪ್ರತಿಷ್ಠಿತ ವ್ಯಕ್ತಿಗಳಿಗೆ ಮಾತ್ರ ಇರುವುದಲ್ಲ. ಸಾಮಾನ್ಯ ವ್ಯಕ್ತಿಗೂ ನ್ಯಾಯಸಿಗಬೇಕು ಎಂಬುದು ನನ್ನ ಆಶಯ. ಪ್ರಭಾವ ಬಳಸಿ ಪೊಲೀಸರ ಬಳಿಗೆ ಬರುವವರಿಗಿಂತ ನೇರವಾಗಿ ಪೊಲೀಸರ ನೆರವು ಕೋರಿ ಬರುವ ವ್ಯಕ್ತಿಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಅದುವೇ ನಿಜವಾದ ಜನಸ್ನೇಹಿ ಪೊಲೀಸ್.
ಈ ನಿಟ್ಟಿನಲ್ಲಿ “ಲೋಕಾಸ್ಪಂದನ’ ಎಂಬ ಆ್ಯಪ್ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯ(ಫೀಡ್‌ಬ್ಯಾಕ್) ಪಡೆಯಲಾಗುತ್ತದೆ. ಪ್ರತಿ ಠಾಣೆಯಲ್ಲಿ ಅಳವಡಿಸಿರುವ ಸ್ಕ್ಯಾನರ್ ಮೂಲಕ ಠಾಣೆ ಮತ್ತು ಸಿಬ್ಬಂದಿ ಕುರಿತು ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯ ದಾಖಲಿಸಬಹುದು. ಅಲ್ಲದೆ, ಸ್ಟಾರ್ ಮಾದರಿಯಲ್ಲೂ ರೇಟಿಂಗ್ ಕೊಡಬಹುದು. ಕಡಿಮೆ ರೇಟಿಂಗ್ ಬಂದ ಠಾಣೆಯ ಅಧಿಕಾರಿ-ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗುತ್ತದೆ. ಕೆಲವೊಮ್ಮೆ ಶಿಸ್ತು ಕ್ರಮಕೂಡ ತೆಗೆದುಕೊಳ್ಳುತ್ತೇವೆ. ಈ ಬಾರಿ ಹನುಮಂತನಗರ ಠಾಣೆಗೆ ಸಾರ್ವಜನಿಕರು ಉತ್ತಮ ರೇಟಿಂಗ್ ನೀಡಿದ್ದಾರೆ. ಈ ಮಧ್ಯೆ ಠಾಣೆ ಮತ್ತು ಠಾಣಾಧಿಕಾರಿ-ಸಿಬ್ಬಂದಿ ಕಾರ್ಯವೈಖರಿ ತಿಳಿಯಲು ಪ್ರತಿ ಶುಕ್ರವಾರ ಆಯ್ದ ಠಾಣೆಗೆ ತಾವೇ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದು ಆಯುಕ್ತ ದಯಾನಂದ ತಿಳಿಸಿದರು.
ಸ್ಮಾರ್ಟ್ ಇ- ಬೀಟ್ ವ್ಯವಸ್ಥೆ:
ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಕಠಿಣ ಮಾಡಲಾಗಿದೆ. ಹೀಗಾಗಿ ರಾತ್ರಿ ವೇಳೆ ಅಪರಾಧ ಪ್ರಕರಣಗಳು ಕ್ಷೀಣಿಸಿವೆ. ಈಗ ತಂತ್ರಜ್ಞಾನದ ಮೂಲಕ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ ಇದೆ. ಪ್ರತಿ ಸಿಬ್ಬಂದಿ ಬೀಟ್ ಪಾಯಿಂಟ್‌ಗೆ ಹೋಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಈ ಮಾಹಿತಿ ನೇರವಾಗಿ ಠಾಣಾಧಿಕಾರಿ ಸೇರಿ ಹಿರಿಯ ಅಧಿಕಾರಿಯ ಮೊಬೈಲ್ ಮತ್ತು ಕಂಟ್ರೋಲ್ ರೂಮ್‌ಗೆ ರವಾನೆಯಾಗುತ್ತದೆ. ಹೀಗೆ ಬೀಟ್ ವ್ಯವಸ್ಥೆ ಬಿಗಿಗೊಳಿಸಲಾಗಿದೆ.
ಎಟಿಎಸ್ ಚುರುಕು:
ಭಯೋತ್ಪಾದನೆ ಹತ್ತಿಕ್ಕಲು ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಇತ್ತೀಚೆಗೆ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಪ್ರತ್ಯೇಕವಾಗಿ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್) ಕಾರ್ಯ ನಿರ್ವಹಿಸುತ್ತಿದೆ. ಈ ತಂಡ ಸ್ಲೀಪರ್ ಸೆಲ್‌ಗಳ ಬಗ್ಗೆ ನಿಗಾವಹಿಸಿದೆ ಎಂದರು.
ಬಾಡಿ ವೋರ್ನ್ ಕ್ಯಾಮೆರಾ:
ನಗರದ ಕೆಲ ಹಂತದ ಅಧಿಕಾರಿ-ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಸಂಚಾರ ಸಿಬ್ಬಂದಿ ಕಡ್ಡಾಯವಾಗಿ ಧರಿಸಬೇಕು. ಇನ್ನು ಲಾ ಆ್ಯಂಡ್ ಆರ್ಡರ್‌ನ ಹೊಯ್ಸಳ ಸಿಬ್ಬಂದಿ, ಎಎಸ್‌ಐ, ಕೆಲ ಎಸ್‌ಐಗಳು ಕೂಡ ಬಾಡಿ ವೋರ್ನ್ ಕ್ಯಾಮೆರಾ ಅಳವಡಿಸಿ ಕೊಳ್ಳಲು ಸೂಚಿಸಲಾಗಿದೆ. ಹೀಗಾಗಿ ಬೇರೆ ಸಿಬ್ಬಂದಿಗೆ ಪ್ರೇರಣೆ ಆಗಬೇಕೆಂಬ ಉದ್ದೇಶದಿಂದ ನಾನು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ್ದೇನೆ ಎಂದು ತೋರಿಸಿದರು.
ವಾರದ ರಜೆ ಕಡ್ಡಾಯ:
ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಕಡ್ಡಾಯಗೊಳಿಸಲಾಗಿದೆ. ಜತೆಗೆ ಸಾಧ್ಯವಾದರೆ ಹೆಚ್ಚುವರಿ ರಜೆ ಕೂಡ ಕೊಡಲಾಗಿದ್ದು, ರಜೆ ಭತ್ಯೆ ಕೂಡ ಸಿಗುತ್ತಿದೆ. ಇದರೊಂದಿಗೆ ಸಿಬ್ಬಂದಿ ಹುಟ್ಟುಹಬ್ಬದ ದಿನ ತಮ್ಮ ಕಚೇರಿಯಿಂದ ಶುಭಾಶಯ ಪತ್ರಗಳು ರವಾನೆಯಾಗುತ್ತಿವೆ. ಇದು ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಆಯುಕ್ತ ದಯಾನಂದ ಹೇಳಿದರು.
ನೈಟ್‌ಲೈಫ್ ಬಗ್ಗೆ ಸರ್ಕಾರಕ್ಕೆ ಅಭಿಪ್ರಾಯ ಕೊಡಲು ಸಿದ್ಧ:
ಬೆಂಗಳೂರು ನೈಟ್‌ಲೈಫ್ ಬಗ್ಗೆಯೂ ಪ್ರಸ್ತಾಪಿಸಿದ ದಯಾನಂದ ಅವರು, ದಿನದ 24 ಗಂಟೆಗಳ ಕಾಲವೂ ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್‌ಗಳನ್ನು ತೆರೆಯುವುದಕ್ಕೆ ಅವಕಾಶ ನೀಡುವಂತೆ ಸಂಬಂಧಪಟ್ಟ ಉದ್ಯಮಗಳ ನಿಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯ ಬಗ್ಗೆ ಸ್ಪಷ್ಟ ಉತ್ತರ ನೀಡದ ಅವರು, ಇದು ಸರ್ಕಾರ ತೆಗೆದುಕೊಳ್ಳಬೇಕಾದ ಆಡಳಿತಾತ್ಮಕ ನಿರ್ಧಾರ. ಒಂದೊಮ್ಮೆ ಸರ್ಕಾರ ಈ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ನಮ್ಮ ಅಭಿಪ್ರಾಯ ಕೇಳಿದರೆ ಬೆಂಗಳೂರು ಪೊಲೀಸರು ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಅಭಿಪ್ರಾಯ ನೀಡುತ್ತೇವೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವುದಿಲ್ಲ ಎಂದರು. ನೈಟ್‌ಲೆçಫ್ ಬಗ್ಗೆಯೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿರುವುದರಿಂದ ಕೆಲವರು ಬೇಕು ಎನ್ನುತ್ತಾರೆ. ಇನ್ನು ಕೆಲವರು ಬೇಡ ಎನ್ನುತ್ತಾರೆ. ಇದೆಲ್ಲವೂ ಸರ್ಕಾರದ ಹಂತದಲ್ಲಿ ತೀರ್ಮಾನವಾಗುವ ವಿಚಾರ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಹಂತದಲ್ಲಿ ಯಾವುದೇ ನಿರ್ಣಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಮಾನ್ಯ ಜ್ಞಾನ ಬಳಸಿ ಸೈಬರ್ ಅಪರಾಧ ತಪ್ಪಿಸಿ:
ಬೆಂಗಳೂರು: ಜನರು ಸಾಮಾನ್ಯ ಜ್ಞಾನ ಉಪ ಯೋಗಿಸಿ ಯಾವುದನ್ನು ನಂಬಬೇಕು ಹಾಗೂ ನಂಬಬಾರದು ಎಂಬ ಬಗ್ಗೆ ಅರಿತುಕೊಂಡರೆ ಬಹುತೇಕ ಸೈಬರ್ ಕ್ರೈಂ ಗಾಳಕ್ಕೆ ಸಿಲುಕುವುದನ್ನು ತಪ್ಪಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಲಹೆ ನೀಡಿದರು.
“ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಆನ್‌ಲೈನ್ ವ್ಯವಹಾರದಲ್ಲಿ ಸೂಕ್ತ ನಿಗಾ ವಹಿಸಬೇಕು. ಸಂತ್ರಸ್ತರು ಈ ಬಗ್ಗೆ ಜಾಗೃತಿ ವಹಿಸಬೇಕು. ಸೈಬರ್ ವಂಚನೆಗೊಳಗಾಗಿ ದೂರು ನೀಡುವವರು ದುಡ್ಡು ಬಂದರೆ ಸಾಕು ಎಂಬ ಭಾವನೆಯಲ್ಲಿರುತ್ತಾರೆ. ಸೈಬರ್ ಕ್ರೈಂ ಹತ್ತಿಕ್ಕಲು 1930 ಸಹಾಯವಾಣಿಯಂತಹ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸೈಬರ್ ಕ್ರೈಂ ನಡೆದ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯುತ್ತೇವೆ. ಕೃತ್ಯ ನಡೆದ ಒಂದು ಗಂಟೆಯೊಳಗೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಟ್ಟರೆ ಸಂತ್ರಸ್ತರು ಸೈಬರ್ ಕಳ್ಳರಿಗೆ ಕಳುಹಿಸಿದ ದುಡ್ಡನ್ನು ಜಪ್ತಿ ಮಾಡುವ ವ್ಯವಸ್ಥೆ ಇದೆ. ಬೇರೆ ಬೇರೆ ಖಾತೆಗಳಿಗೆ ಸೈಬರ್ ಕಳ್ಳರು ದುಡ್ಡು ವರ್ಗಾವಣೆ ಮಾಡಿದರೆ ಅದನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ದಿನಕ್ಕೊಂದು ಹೊಸ ಮಾರ್ಗದಲ್ಲಿ ಸೈಬರ್ ಕ್ರೈಂ ಕೃತ್ಯ ಎಸಗುವುದರಿಂದ ಜನ ಮಾರು ಹೋಗುತ್ತಾರೆ. ಸೈಬರ್ ಕಳ್ಳರು ತಾಂತ್ರಿಕವಾಗಿ ಹೆಚ್ಚು ಜ್ಞಾನ ಹೊಂದಿರುವುದಿಲ್ಲ. ಆದರೆ, ಜನರನ್ನು ತಮ್ಮ ಬಲೆಗೆ ಬೀಳಿಸುವ ತಂತ್ರಗಳು ಗೊತ್ತಿರುತ್ತವೆ ಎಂದರು.
ದೇಶಾದ್ಯಂತ ಬೆಂಗಳೂರು ಪೊಲೀಸರು ವಿವಿಧ ಪ್ರಕರಣಗಳಲ್ಲಿ ಸೈಬರ್ ಕಳ್ಳರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಸೈಬರ್ ಕಳ್ಳರ ಪತ್ತೆಗಾಗಿಯೇ ವಿವಿಧ ರಾಜ್ಯಗಳ ಪೊಲೀಸರ ತಂಡ ಪೋರ್ಟಲ್, ವಾಟ್ಸಾಆ್ಯಪ್ ಗ್ರೂಪ್ ರಚಿಸಿದ್ದಾರೆ. ಆಯಾ ರಾಜ್ಯಗಳ ಪೊಲೀಸರ ಸಹಕಾರದೊಂದಿಗೆ ಸೈಬರ್ ಕಳ್ಳರ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸುಳ್ಳು ಸುದ್ದಿ ವಿರುದ್ಧ ಕ್ರಮ: ಇತ್ತೀಚೆಗೆ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಗಾ ಇರಿಸಬೇಕು. ಯಾರೋ ಹಾಕುವ ಪೋಸ್ಟ್ ಮೇಲೆ ಪ್ರತಿಕ್ರಿಯೆಗಳು ಶುರುವಾಗಿ ಪೊಲೀಸ್ ಠಾಣೆಗೆ ಅನಗತ್ಯವಾಗಿ ಜನ ಬಂದು ಪ್ರತಿಭಟನೆ ನಡೆಸುವಂತಹ ಘಟನೆಗಳು ಸಂಭವಿಸುತ್ತವೆ. ಆ ಎಲ್ಲ ದೃಷ್ಟಿಯಿಂದ ನಾವು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪ್ರತಿ ಠಾಣೆಗಳಲ್ಲಿ ತಾಂತ್ರಿಕವಾಗಿ ನಿಪುಣರಾಗಿರುವ ಇಬ್ಬರು ಸಿಬ್ಬಂದಿ ನಿಯೋಜಿಸಿದ್ದೇವೆ. ಜೊತೆಗೆ ಡಿಸಿಪಿ ವ್ಯಾಪ್ತಿಗಳಲ್ಲಿ, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇದನ್ನು ಮಾನಿಟರಿಂಗ್ ಮಾಡುವ ವ್ಯವಸ್ಥೆಗಳೂ ಇವೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಿಐಡಿಯಲ್ಲಿ ಸೂಕ್ತ ತರಬೇತಿ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಇವರು ಪತ್ತೆ ಹಚ್ಚುತ್ತಾರೆ. ಆಯಾ ಹಂತದಲ್ಲೇ ಪತ್ತೆಹಚ್ಚಿ ಕ್ರಮ ಕೈಗೊಂಡರೆ ಸಮಸ್ಯೆ ಇರುವುದಿಲ್ಲ. ಉದ್ರೇಕ, ಉತ್ಪ್ರೇಕ್ಷೆ, ತಪ್ಪು ಮಾಹಿತಿ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್‌ಲೋಡ್ ಮಾಡಿ ಅಮಾಯಕರಿಗೆ ಕಿರುಕುಳ ಕೊಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ವಿವರಿಸಿದರು.
ಅಪರಾಧಗಳ ಸಂಪೂರ್ಣ ನಿಯಂತ್ರಣ ಅಸಾಧ್ಯ:
“ಎಲ್ಲಿಯವರೆಗೂ ಸಮಾಜ ಇರುತ್ತದೋ ಅಲ್ಲಿ ಯವರೆಗೂ ಅಪರಾಧ ಕೃತ್ಯಗಳು ಇದ್ದೇ ಇರು ತ್ತವೆ. ಯಾರು ಸಹ ಸಂಪೂರ್ಣವಾಗಿ ಸಮಾಜದ ಅಪರಾಧಗಳನ್ನು ತೆಗೆದುಹಾಕಿದೆ, ಕಿತ್ತುಹಾಕಿದೆ, ಮಟ್ಟ ಹಾಕಿದೆ ಎನ್ನಲು ಆಗುವುದಿಲ್ಲ’ ಎಂದು ಬಿ.ದಯಾನಂದ ತಿಳಿಸಿದರು. ಅಪರಾಧ ನಿಯಂತ್ರಣ ಎಂಬುದು ಶೇವಿಂಗ್ ಮಾಡಿದ ರೀತಿ ಇರುತ್ತದೆ. ನಿತ್ಯ ಶೇವಿಂಗ್ ಮಾಡಿದ ರೀತಿ ಅಪರಾಧ ನಿಯಂತ್ರಣ ಮಾಡುತ್ತಲೇ ಇರಬೇಕಾಗುತ್ತದೆ. ನಾವು ಅಪರಾಧ ನಿಯಂತ್ರಿಸದಿದ್ದರೆ ಗಡ್ಡ ಬೆಳೆದಂತೆ ಅಪರಾಧ ಬೆಳೆಯುತ್ತವೆ. ಇದನ್ನು ನಿಯಂತ್ರಿಸಲು ಇಲಾಖೆ ಇದೆ. ಅನ್ಯಾಯ ಕ್ಕೊಳಗಾದವರಿಗೆ ನ್ಯಾಯ ಒದಗಿಸಲಿದೆ ಎಂದರು.
ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು ವಿದ್ಯಾರ್ಥಿಗಳಿಗೆ ತರಬೇತಿ:
ಕಾಲೇಜುಗಳ ಆಸು-ಪಾಸಿನಲ್ಲಿ ಡ್ರಗ್ಸ್ ಪೆಡ್ಲಿಂಗ್‌ಗಳು ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸೇವನೆ ಅಪಾಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಪೊಲೀಸ್ ಸಿಬ್ಬಂದಿಗಳು ಶಾಲಾ-ಕಾಲೇಜುಗಳಿಗೆ ತೆರಳಿ ಆಗಾಗ ಡ್ರಗ್ಸ್ ಸೇವನೆ ಕುರಿತು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಡ್ರಗ್ಸ್ ಪೂರೈಕೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಬಸ್, ರೈಲು ನಿಲ್ದಾಣಗಳು, ಜನ ನಿಬಿಡ ಪ್ರದೇಶದಲ್ಲಿ ಓಡಾಡುವ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಡ್ರಗ್ಸ್ ಸಾಗಾಟ ಪತ್ತೆಗೆ ಶ್ವಾನ ದಳ ಬಳಸಲಾಗುತ್ತಿದೆ ಎಂದು ವಿವರಿಸಿದರು.