ಬೆಂಗಳೂರು: “ತನ್ನ ಪತ್ನಿ ಜತೆ ಹೆಚ್ಚು ಮಾತನಾಡಬೇಡ’ ಎಂದ ದೊಡ್ಡಪ್ಪನ ಪುತ್ರನನ್ನು ಸಹೋದರನೇ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸಂದೀಪ್ ಕುಮಾರ್ (32) ಕೊಲೆಯಾದವ. ಕೃತ್ಯ ಎಸಗಿದ ಶುಭೋದ್ ಮಂಡಲ್ (29) ಎಂಬಾತನನ್ನು ಬಂಧಿಸಲಾಗಿದೆ. ಜುಲೈ 28 ಆರೋಪಿ ಸಂದೀಪ್‌ನನ್ನು ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಬಿಹಾರ ಮೂಲದ ಇಬ್ಬರು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಸಂದೀಪ್ ಕುಮಾರ್ ಸಿಮೆಂಟ್ ಮಿಕ್ಸರ್ ಲಾರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಶುಭೋದ್ ಮಂಡಲ್ ಬನಶಂಕರಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ಊರಿನಲ್ಲಿರುವ ಸಂದೀಪ್ ಪತ್ನಿ ಜತೆ ಹೆಚ್ಚು ಫೋನ್‌ನಲ್ಲಿ ಮಾತನಾಡುತ್ತಿದ್ದ. ಈ ಮಧ್ಯೆ ಕೊರೊನಾ ಸಂದರ್ಭದಲ್ಲಿ ಊರಿಗೆ ಹೋದಾಗ, ಆಕೆ ಜತೆ ಆತ್ಮೀಯವಾಗಿದ್ದ. ಕಾಲೇಜು ದಿನಗಳಿಂದ ಇಬ್ಬರಿಗೂ ಪರಿಚಯವಿದ್ದರಿಂದ ಹಿರಿಯರು ಸುಮ್ಮನಾಗಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವಿನ ಒಡನಾಟ ಹೆಚ್ಚಾಗಿತ್ತು. ಹೀಗಾಗಿ ಸಂದೀಪ್ ಪೋಷಕರು, ಸೊಸೆ ಹಾಗೂ ಶುಭೋದ್ ಮಂಡಲ್‌ಗೆ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು.
ಮತ್ತೂಂದೆಡೆ ಸಂದೀಪ್ ಕೂಡ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತ್ತೂಮ್ಮೆ ಪತ್ನಿಗೆ ಕರೆ ಮಾಡದಂತೆ ಎಚ್ಚರಿಕೆ ನೀಡಿದ್ದ. ಈ ಎಲ್ಲ ಘಟನೆಗಳಿಂದ ಆಕ್ರೋಶಗೊಂಡಿದ್ದ ಆರೋಪಿ, ಸಂದೀಪ್‌ನನ್ನು ಹತ್ಯೆಗೈಯಲು ಸಂಚು ರೂಪಿಸಿ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದನು. ಜುಲೈ 27ರಂದು ರಾತ್ರಿ ಚಿಕ್ಕಜಾಲದಲ್ಲಿರುವ ಸಂದೀಪ್ ಮನೆಯಲ್ಲೇ ಮಲಗಿದ್ದ. ಮರುದಿನ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂದೀಪ್ ರಾತ್ರಿ ಪಾಳಿ ಮುಗಿಸಿಕೊಂಡು ಬಂದಿದ್ದು, ಈ ವೇಳೆ ಇಬ್ಬರು ಮದ್ಯ ಸೇವಿಸಿದ್ದಾರೆ. ಆಗಲೂ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಸಂದೀಪ್ ಮಲಗಿದ್ದ. ಆಗ ಆರೋಪಿ ಸಿಮೆಂಟ್ ಇಟ್ಟಿಗೆಯನ್ನು ಸಂದೀಪ್ ತಲೆ ಮೇಲೆ 2-3 ಬಾರಿ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಬಳಿಕ ಆರೋಪಿ ಮೊಬೈಲ್ ನೆಟ್‌ವರ್ಕ್ ಆಧರಿಸಿ ಆರೋಪಿಯನ್ನು ಬನಶಂಕರಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.