ಬೆಂಗಳೂರು: ಇತ್ತೀಚೆಗೆ ಡ್ಯಾನ್ಸ್ ಕೋರಿಯೋ ಗ್ರಾಫರ್‌ನಿಂದ ಅತ್ಯಾಚಾರ ಯತ್ನಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 21 ವರ್ಷದ ಸಂತ್ರಸ್ತೆ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆಯ ದಿನ 3 ಆಟೋಗಳಿಗೆ ಸರಣಿ ಅಪಘಾತವೆಸಗಿದ್ದ ಆರೋಪದಡಿ ಆಟೋ ಚಾಲಕ ಅಜಾಜ್ ಎಂಬುವರು ನೀಡಿದ ದೂರಿನ ಮೇರೆಗೆ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಯು ವುದಕ್ಕೂ ಮೊದಲು ಕೋರಮಂಗರದಲ್ಲಿರುವ ಪಬ್‌ಗೆ ತನ್ನ ಸ್ನೇಹಿತನ ಜತೆ ಕಾರಿನಲ್ಲಿ ಹೋಗಿ, ತಡರಾತ್ರಿ 12.30ರ ಸುಮಾರಿಗೆ ವಾಪಸ್ ಬರುವಾಗ ಈಕೆಯೇ ಕಾರು ಚಾಲನೆ ಮಾಡಿದ್ದಾಳೆ. ಮಾರ್ಗ ಮಧ್ಯೆ ಮಂಗಳ ಜಂಕ್ಷನ್‌ನಲ್ಲಿ ಯು ಟರ್ನ್ ಮಾಡಿಕೊಳ್ಳುವಾಗ ಆಟೋಗೆ ಡಿಕ್ಕಿ ಹೊಡೆದಿದ್ದು, ಬಳಿಕ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಮತ್ತೆರಡು ಆಟೋಗೆ ಡಿಕ್ಕಿ ಹೊಡೆದಿದ್ದಾಳೆ. ಬಳಿಕ ಕಾರನ್ನು ನಿಲ್ಲಿಸದೆ ಹಾಗೇ ಹೋಗಿದ್ದಳು. ನಂತರ ಫೋರಂ ಮಾಲ್‌ವರೆಗೆ ಕಾರನ್ನು ಹಿಂಬಾಲಿಸಿದ ಆಟೋ ಚಾಲಕರು ಅಡ್ಡಗಟ್ಟಿ ಆಟೋಗಳನ್ನು ರಿಪೇರಿ ಮಾಡಿಸಿಕೊಡುವಂತೆ ಕೋರಿದ್ದಾರೆ. ಆದರೆ, ಸರಿಯಾಗಿ ಪ್ರತಿಕ್ರಿಯೆ ನೀಡದ ಯುವತಿ ಮತ್ತು ಆಕೆಯ ಸ್ನೇಹಿತ ರಸ್ತೆ ಬದಿ ಕಾರು ನಿಲುಗಡೆ ಮಾಡಿ ಸ್ಥಳದಿಂದ ಪಾರಾರಿಯಾಗಿದ್ದರು. ನಂತರ ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ,ವಿಚಾರಿಸಿದಾಗ ರಸ್ತೆ ಅಪಘಾತ ವಿಚಾರವನ್ನು ಆಟೋ ಚಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: National Award; ಗೆದ್ದ ಬೆನ್ನಲ್ಲೇ ಬಾಲಿವುಡ್ ಭಾರತವನ್ನು ಕೆಟ್ಟದಾಗಿ ತೋರಿಸಿದೆ ಎಂದ ರಿಷಬ್
ಈ ಸಂಬಂಧ ಸಂತ್ರಸ್ತೆ ವಿರುದ್ಧ ಪ್ರಕರಣ ದಾಖ ಲಾಗಿದೆ. ಆ ಬಳಿಕ ಸಂತ್ರಸ್ತೆ ಒಂಟಿಯಾಗಿ ಹೋಗಿ,ಅಪರಿಚಿತ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಪಡೆದು ಕೊಂಡಿದ್ದಾಳೆ. ಆತ ಸ್ವಲ್ಪ ದೂರ ಹೋಗುತ್ತಿದ್ದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ದಾಖಲು
ಘಟನೆ ವೇಳೆ ಸಂತ್ರಸ್ತೆಯ ಸ್ನೇಹಿತ ಕೂಡ ಸ್ಥಳದಲ್ಲಿದ್ದ ಕಾರಣ ಆತನ ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಆತನಿಗೆ ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾನೆ. ಕಾಲೇಜಿನ ಸಹಪಾಠಿಯೊಬ್ಬನ ಹುಟ್ಟುಹಬ್ಬ ಹಾಗೂ ಗೇಟ್ ಟು ಗೆದರ್ ಪಾರ್ಟಿಗೆ ಹೋಗಿದ್ದು, ಊಟ ಮಾಡಿಕೊಂಡು ಹೊರಬಂದಿದ್ದೇವೆ. ನಾನು ಮತ್ತು ನನ್ನ ಸ್ನೇಹಿತೆ ಮದ್ಯ ಸೇವಿಸಿಲ್ಲ. ಆಕೆ ಕಾರು ಚಾಲನೆ
ಮಾಡುವಾಗ ಆಯ ತಪ್ಪಿ ಆಟೋಗಳಿಗೆ ಡಿಕ್ಕಿಹೊಡೆದಿದ್ದಾಳೆ ಎಂದು ಹೇಳಿಕೆ ದಾಖಲಿಸಿದ್ದಾನೆ.
ಇನ್ನು ಈತನ ಚಾಲನನಾ ಪರವಾನಗಿ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಜತೆಗೆ ಸಂತ್ರಸ್ತೆ ಚೇತರಿಸಿಕೊಂಡ ಬಳಿಕ ಆಕೆಯಿಂದಲೂ ಹೇಳಿಕೆ ಪಡೆದು, ಚಾಲನಾ ಪರವಾನಗಿ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.