ನವದೆಹಲಿ: ಕೊನೆ 5 ನಿಮಿಷದ ಜಿದ್ದಾಜಿದ್ದಿಯ ಕದನದಲ್ಲಿ ಬೆಂಗಳೂರು ಬುಲ್ಸ್ 29-33 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ಗೆ ಶರಣಾಯಿತು. ಶನಿವಾರ ತ್ಯಾಗರಾಜ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಆರಂಭದಲ್ಲಿ ನೀರಸ ಆಟ ಪ್ರದರ್ಶಿಸಿತು. ಆದರೆ ಕೊನೆ 5 ನಿಮಿಷದ ಸೆಣಸಾಟದಲ್ಲಿ ಬುಲ್ಸ್ ಗೆಲುವಿನ ಸನಿಹಕ್ಕೆ ಬಂದು ರೋಚಕ ಸೋಲು ಅನುಭವಿಸಿತು. ಇದು ಬೆಂಗಳೂರಿಗೆ ಸತತ 2ನೇ ಸೋಲು.
ಬುಲ್ಸ್ ಪರ ಮಿಂಚಿದ್ದು ಕನ್ನಡಿಗ ಹರೀಶ್ ನಾಯ್ಕ (11 ರೈಡಿಂಗ್ ಅಂಕ). ತಾರಾ ರೈಡರ್ ರೋಹಿತ್ ಕುಮಾರ್ ವಿಫಲವಾಗಿದ್ದು ಬೆಂಗಳೂರು ಸೋಲಿಗೆ ಪ್ರಮುಖ ಕಾರಣ. ಬುಲ್ಸ್ ಕೈಯಿಂದ ಗೆಲುವು ಕಸಿದದ್ದು ಮಣಿಂದರ್ ಸಿಂಗ್ (9 ರೈಡಿಂಗ್ ಅಂಕ). ಸಿಂಗ್ ಕೊನೆಯ ಹಂತದಲ್ಲಿ ರೈಡಿಂಗ್ ನಡೆಸಿ ಒಟ್ಟು 4 ಅಂಕ ತಂದು ವಾರಿಯರ್ ಗೆಲುವು ಖಚಿತಪಡಿಸಿದರು.
ಗೆಲುವಿನಂಚಲ್ಲಿ ಸೋತ ಬುಲ್ಸ್: 2ನೇ ಅವಧಿ ಮುಗಿಯಲು 5 ನಿಮಿಷದ ಆಟ ಬಾಕಿ ಇದ್ದಾಗ ಬೆಂಗಾಲ್ ಒಂದು ಸಲ ಆಲೌಟ್‌ಗೂ ಒಳಗಾಯಿತು. ಹೀಗಾಗಿ ಪಂದ್ಯ ಮುಗಿಯಲು ಕೊನೆ 2 ನಿಮಿಷ ಇದ್ದಾಗ ಬೆಂಗಳೂರು 26-28 ಅಂಕ ಗಳಿಸಿ ಕೇವಲ 2 ಅಂಕಗಳ ಹಿನ್ನಡೆ ಅನುಭವಿಸಿತ್ತು. ಈ ಹಂತದಲ್ಲಿ ಮಣಿಂದರ್ ಸಿಂಗ್ ಒಂದು ಬೋನಸ್ ಸಹಿತ 4 ಅಂಕ ತಂದರು. ಹೀಗಾಗಿ ಬೆಂಗಾಲ್ 32-27ಕ್ಕೆ ಅಂಕಗಳಿಕೆ ಹೆಚ್ಚಿಸಿಕೊಂಡಿತ್ತು. ಈ ವೇಳೆ ರೈಡಿಂಗ್‌ನಿಂದ ಮತ್ತೆ ಹರೀಶ್ 2 ಅಂಕ ತಂದರು. ಮತ್ತೆ ಬುಲ್ಸ್ ಗೆಲುವಿನ ಕನಸು ಚಿಗುರಿಸಿದರು. ಆದರೆ ನಾಯಕ ರೋಹಿತ್ ಕೊನೆ 1 ನಿಮಿಷ ಇದ್ದಾಗ ರೈಡಿಂಗ್‌ನಲ್ಲಿ ವಿಫಲವಾಗಿದ್ದರಿಂದ ಬೆಂಗಾಲ್ ಜಯಭೇರಿ ಬಾರಿಸಿತು.
ಇದಕ್ಕೂ ಮೊದಲು ಎರಡನೇ ಅವಧಿಯ 15 ನಿಮಿಷದ ಆಟ ಮುಗಿದರೂ ಬೆಂಗಳೂರು ಚೇತರಿಸಿಕೊಂಡಿರಲಿಲ್ಲ. ಅಂಕ ಗಳಿಕೆಯಲ್ಲಿ ಬುಲ್ಸ್ 17-26 ಅಂತರದಿಂದ ಹಿನ್ನಡೆ ಕಂಡಿತ್ತು. ಈ ಅವಧಿಯ ಆಟದಲ್ಲಿ ಬುಲ್ಸ್ ಪರ ಮಿಂಚಿದ್ದು ಹರೀಶ್ ನಾಯ್ಕ (ದಾಳಿಯಲ್ಲಿ 5 ಅಂಕ), ರವೀಂದರ್ ಪಾಹಲ್ (ರಕ್ಷಣೆಯಲ್ಲಿ 4 ಅಂಕ) ಹಾಗೂ ಮಹೇಂದರ್ ಸಿಂಗ್ (ದಾಳಿಯಲ್ಲಿ 4 ಅಂಕ). ಆದರೆ ರೋಹಿತ್ ಜೊತೆ ಅಜಯ್ ಕೂಡ ವಿಫಲವಾಗಿದ್ದು ಬುಲ್ಸ್‌ಗೆ ದುಬಾರಿಯಾಯಿತು.
ಹಿಂಡಿದ ಬೆಂಗಾಲ್: ಮೊದಲ ಅವಧಿಯ ಆಟ ಆರಂಭವಾದ ಎಂಟು ನಿಮಿಷದಲ್ಲಿ ಬೆಂಗಳೂರು ಆಲೌಟಾಯಿತು. ಆಗ ಬುಲ್ಸ್ 4-11 ಅಂತರದಿಂದ ಹಿನ್ನಡೆ ಅನುಭವಿಸಿತ್ತು. ಈ ಅವಧಿಯಲ್ಲಿ ಬೆಂಗಳೂರು ತಂಡದ ತಾರಾ ರೈಡರ್ ರೋಹಿತ್ ಕುಮಾರ್ 2 ಬಾರಿ ರೈಡಿಂಗ್‌ನಲ್ಲಿ ವಿಫಲರಾದರು. ಇದೇ ವೇಳೆ ಸೂಪರ್ ಟ್ಯಾಕಲ್‌ನಲ್ಲಿ ಬೆಂಗಾಲ್‌ನ ಖ್ಯಾತ ಆಟಗಾರ ಜಾಂಗ್ ಕುನ್ ಲೀ ಅವರನ್ನು ಬೀಳಿಸುವ ಮೂಲಕ ಬೆಂಗಳೂರು ತಿರುಗಿ ಬೀಳುವ ಸೂಚನೆ ನೀಡಿತು. ಆದರೆ ದಾಳಿಯಲ್ಲಿ ನಾಯಕ ರೋಹಿತ್ ಮತ್ತೆ ವಿಫಲವಾಗಿ ಬೆಂಗಳೂರು ಆಲೌಟಾಯಿತು. ಒಟ್ಟಾರೆ ಮೊದಲ ಅವಧಿ ಮುಕ್ತಾಯಕ್ಕೆ ಬುಲ್ಸ್ ವಿರುದ್ಧ ಬೆಂಗಾಲ್ 18-10 ಅಂತರದ ಮುನ್ನಡೆ ಪಡೆದಿತ್ತು.
ರೋಹಿತ್‌ರನ್ನು ಸಮಾಧಾನಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಾಲಿವುಡ್ ನಟ ಹಾಗೂ ಬೆಂಗಾಲ್ ಫ್ರಾಂಚೈಸಿ ಮಾಲಿಕ ಅಕ್ಷಯ್ ಕುಮಾರ್ ಬೆಂಗಳೂರು ತಂಡ ಸೋಲು ಕಂಡ ಬಳಿಕ ಬುಲ್ಸ್ ನಾಯಕ ರೋಹಿತ್ ಕುಮಾರ್ ಬಳಿ ತೆರಳಿದರು. ಅವರನ್ನು ಬಿಗಿದಪ್ಪಿ ಸಮಾಧಾನ ಮಾಡಿದರು. ಈ ಹಿಂದೆ ರೋಹಿತ್ ಕುಮಾರ್ ಜತೆಗೆ ಅಕ್ಷಯ್ ಕುಮಾರ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
– ಹೇಮಂತ್ ಸಂಪಾಜೆ