ಬೆಂಗಳೂರು: ಬೆಂಗಳೂರು ಬ್ರ್ಯಾಂಡ್ ಹಾಳಾಗುತ್ತಿರುವ ಬಗ್ಗೆ ಮೋಹನದಾಸ್ ಪೈ ಮಾಡಿರುವ ಟ್ವೀಟನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಬೆಂಗಳೂರು ಸಾಕಷ್ಟು ಬೆಳೆದಿದ್ದು ಹಲವು ರಾಜ್ಯದಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಯಾರೋ ಎನೋ ಹೇಳಿದರೆಂದು ಬೆಂಗಳೂರು ಬ್ಯ್ರಾಂಡ್ ಹಾಳಾಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಮಾತ್ರ ಮಳೆಯಾಗಿಲ್ಲ. ಅಮೆರಿಕ, ಪಾಕಿಸ್ತಾನ ಸೇರಿ ಎಲ್ಲಾ ಕಡೆ ಮಳೆಯಾಗಿದೆ. ಮಳೆಯನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ತಗೆದುಕೊಳ್ಳಬಹುದು. ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಬೆಂಗಳೂರಿನ ಕೆಲ ಭಾಗದಲ್ಲಿ ಮಳೆ ಹಾನಿಯಾಗಿದ್ದಾಗ ಸಿಎಮ ಬೊಮ್ಮಾಯಿ ಭೇಟಿ ನೀಡಿದ್ದರು. ಆ ಭಾಗದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಸಲ ಮಳೆಯಿಂದಾಗಿ ಬೊಮ್ಮನಹಳ್ಳಿ, ಮಹದೇವಪುರ ಭಾಗದಲ್ಲಿ ಹಾನಿಯಾಗಿದೆ. ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ:ಸಚಿವ ಜೈಶಂಕರ್ ಭೇಟಿ; ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ
ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳಲ್ಲಾದ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾನಿಯಾಗಿರುವ ಮನೆಗಳಿಗೆ ಪರಿಹಾರ ಕೊಡಲಾಗುತ್ತಿದೆ ನಿರಾಶ್ರಿತರಿಗೆ 15 ದಿನಗಳ ಆಹಾರ ಕಿಟ್ ಸರ್ಕಾರ ನೀಡುತ್ತಿದೆ ಎಂದು ಅಶೋಕ್ ಮಾಹಿತಿ ನೀಡಿದರು.