Advertisement

ಬೆಂಗಳೂರಲ್ಲಿ ಬೊಂಬಾಟ್‌ ಗೆಲುವು

09:45 AM Mar 08, 2017 | |

ಬೆಂಗಳೂರು: ಉದ್ಯಾನ ನಗರಿಯಲ್ಲಿ ಟೀಮ್‌ ಇಂಡಿಯಾ ಗೆಲುವಿನ ನಗಾರಿ ಬಾರಿಸಿದೆ. 188ರಷ್ಟು ಸಣ್ಣ ಮೊತ್ತವನ್ನೂ ಉಳಿಸಿಕೊಂಡು ಆಸ್ಟ್ರೇಲಿಯವನ್ನು ಸೋಲಿನ ಖೆಡ್ಡಕ್ಕೆ ತಳ್ಳಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್‌ ಸರಣಿ 1-1 ಸಮಬಲಕ್ಕೆ ಬಂದಿದ್ದು, ಮುಂದಿನೆರಡು ಪಂದ್ಯಗಳನ್ನು ತೀವ್ರ ಕುತೂಹಲದಿಂದ ಕಾಯುವಂತೆ ಮಾಡಿದೆ.

Advertisement

ಪುಣೆಯಲ್ಲಿ 333 ರನ್‌ ಅಂತರದ ಆಘಾತಕಾರಿ ಸೋಲುಂಡು ಎಲ್ಲ ದಿಕ್ಕುಗಳಿಂದಲೂ ಟೀಕೆಗೆ ಗುರಿಯಾಗಿದ್ದ ಟೀಮ್‌ ಇಂಡಿಯಾ ಬೆಂಗಳೂರಿನಲ್ಲೂ ಆತಂಕದಿಂದಲೇ ಪಂದ್ಯವಾರಂಭಿಸಿತ್ತು. ಆದರೆ ಕೊನೆಯಲ್ಲಿ ಆಸ್ಟ್ರೇಲಿಯದ ಸವಾಲನ್ನು ಮೆಟ್ಟಿನಿಂತು 75 ರನ್ನುಗಳ ಜಯವನ್ನು ಸಾಧಿಸಿ ತನ್ನ ಪರಾಕ್ರಮ ಮೆರೆಯಿತು. 188 ರನ್ನುಗಳ ಗೆಲುವಿನ ಗುರಿ ಪಡೆದ ಸ್ಮಿತ್‌ ಪಡೆಯನ್ನು 112ಕ್ಕೆ ಚಿತ್‌ ಮಾಡಿದ ಹೆಗ್ಗಳಿಕೆಯೊಂದಿಗೆ ಬೆಂಗಳೂರು ಪಂದ್ಯವನ್ನು ಸ್ಮರಣೀಯಗೊಳಿಸಿತು. 41 ರನ್ನಿಗೆ 6 ವಿಕೆಟ್‌ ಹಾರಿಸಿದ ಆರ್‌. ಅಶ್ವಿ‌ನ್‌ ಆಸೀಸ್‌ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಶ್ವಿ‌ನ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಹಾರಿಸಿದ 25ನೇ ಸಂದರ್ಭ ಇದಾಗಿದೆ.

ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕ ಬಾರಿಸಿ ಮೆರೆದ ಲೋಕಲ್‌ ಬಾಯ್‌ ಕೆ.ಎಲ್‌. ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಪ್ರಶಸ್ತಿಗೆ ಪೂಜಾರ ಮತ್ತು ಅಶ್ವಿ‌ನ್‌ ಕೂಡ ಸ್ಪರ್ಧೆಯಲ್ಲಿದ್ದರೆಂಬುದನ್ನು ಮರೆಯುವಂತಿಲ್ಲ.

ಆಸೀಸ್‌ಗೆ ಅಡಿಗಡಿಗೂ ಅಪಾಯ
ಲಂಚ್‌ ಬಳಿಕ ಚೇಸಿಂಗ್‌ ಆರಂಭಿಸಿದ ಆಸ್ಟ್ರೇಲಿಯ ಬೆಂಗಳೂರಿನ ಸ್ಪಿನ್‌ ಸುಳಿಯಲ್ಲಿ ಅಡಿಗಡಿಗೂ ಅಪಾಯಕ್ಕೆ ಸಿಲುಕುತ್ತ ಹೋಯಿತು. ಭಾರತದ ಬೌಲಿಂಗ್‌ ದಾಳಿಯನ್ನು ನಿಭಾಯಿಸುವಲ್ಲಿ ಕಾಂಗರೂ ಪಡೆ ಮೊದಲ ಸಲ ಸಂಪೂರ್ಣ ವೈಫ‌ಲ್ಯ ಅನುಭವಿಸಿತು. ಯಾರಿಂದಲೂ ಬ್ಯಾಟಿಂಗ್‌ ಹೋರಾಟವಾಗಲೀ, ದೊಡ್ಡ ಜತೆಯಾಟವಾಗಲೀ ಕಂಡುಬರಲಿಲ್ಲ. ಸ್ಕೋರ್‌ 22 ರನ್‌ ಆಗಿದ್ದಾಗ ರೆನ್‌ಶಾ ವಿಕೆಟ್‌ ಹಾರಿಸಿದ ಇಶಾಂತ್‌ ಶರ್ಮ ಆಸೀಸ್‌ ಕುಸಿತಕ್ಕೆ ಮುಹೂರ್ತವಿರಿಸಿದರೆ, ಅಂತಿಮವಾಗಿ ನಥನ್‌ ಲಿಯೋನ್‌ ಅವರನ್ನು ಕಾಟ್‌ ಆ್ಯಂಡ್‌ ಬೌಲ್ಡ್‌ ಮಾಡಿದ ಅಶ್ವಿ‌ನ್‌ ಭಾರತದ ಗೆಲುವನ್ನು ಸಾರಿದರು.

28 ರನ್‌ ಮಾಡಿದ ನಾಯಕ ಸ್ಟೀವನ್‌ ಸ್ಮಿತ್‌ ಅವರದೇ ಆಸೀಸ್‌ ಸರದಿಯ ಗರಿಷ್ಠ ಗಳಿಕೆ. ಹ್ಯಾಂಡ್ಸ್‌ಕಾಂಬ್‌ 24, ವಾರ್ನರ್‌ 17 ಹಾಗೂ ಮಿಚೆಲ್‌ ಮಾರ್ಷ್‌ 13 ರನ್‌ ಮಾಡಿದರು. ಈ ನಾಲ್ವರನ್ನು ಹೊರತುಪಡಿಸಿದರೆ ಉಳಿ ದವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಉಡಾಯಿಸಿದ ರವೀಂದ್ರ ಜಡೇಜ ಈ ಬಾರಿ ಒಂದು ವಿಕೆಟ್‌ ಕಿತ್ತರು. ಉಮೇಶ್‌ ಯಾದವ್‌ 2, ಇಶಾಂತ್‌ ಶರ್ಮ ಒಂದು ವಿಕೆಟ್‌ ಉರುಳಿಸಿದರು.

Advertisement

4ನೇ ದಿನ 16 ವಿಕೆಟ್‌ ಪತನ
ಮಂಗಳವಾರದ 4ನೇ ದಿನದಾಟದಲ್ಲಿ ಬೌಲರ್‌ಗಳೇ ದರ್ಬಾರು ನಡೆಸಿದರು. ಒಟ್ಟು 16 ವಿಕೆಟ್‌ ಉರುಳಿದ್ದೇ ಇದಕ್ಕೆ ಸಾಕ್ಷಿ. 4 ವಿಕೆಟಿಗೆ 213 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ 274ಕ್ಕೆ ತಲುಪುವಷ್ಟರಲ್ಲಿ ಆಲೌಟ್‌ ಆಯಿತು. ಬಳಿಕ 188 ರನ್ನುಗಳ ಚೇಸಿಂಗಿಗೆ ಇಳಿದ ಆಸ್ಟ್ರೇಲಿಯ ಕೇವಲ 35.4 ಓವರ್‌ಗಳಲ್ಲಿ 112 ರನ್ನಿಗೆ ಉದುರಿತು. ಸ್ಮಿತ್‌ ಪಡೆಯ ಅಂತಿಮ 6 ವಿಕೆಟ್‌ಗಳು ಬರೀ 11 ರನ್‌ ಅಂತರದಲ್ಲಿ ಉದುರಿದ್ದು ಭಾರತದ ಬೌಲಿಂಗ್‌ ತಾಕತ್ತಿಗೆ ಉತ್ತಮ ನಿದರ್ಶನವಾಯಿತು. ಈ 6 ವಿಕೆಟ್‌ಗಳು 26ನೇ ಹಾಗೂ 36ನೇ ಓವರಿನ ನಡುವಲ್ಲಿ ಹಾರಿಹೋದವು.

ಬೆಳಗಿನ ಅವಧಿಯಲ್ಲಿ ಆಸ್ಟ್ರೇಲಿಯದ ವೇಗಿಗಳಾದ ಜೋಶ್‌ ಹ್ಯಾಝಲ್‌ವುಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಘಾತಕ ದಾಳಿ ನಡೆಸಿ ಭಾರತದ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಹೊಸ ಚೆಂಡನ್ನು ಕೈಗೆತ್ತಿಕೊಂಡೊಡನೆ ವಿಕೆಟ್‌ ಬೇಟೆಯಲ್ಲಿ ತೊಡಗಿದ ಇವರು ಭಾರತದ ದೊಡ್ಡ ಮೊತ್ತದ ಯೋಜನೆಯನ್ನು ವಿಫ‌ಲಗೊಳಿಸಿದರು. ಹ್ಯಾಝಲ್‌ವುಡ್‌ 67ಕ್ಕೆ 6 ವಿಕೆಟ್‌ ಹಾರಿಸಿ ಜೀವನಶ್ರೇಷ್ಠ ಸಾಧನೆಗೈದರು. ಸ್ಟಾರ್ಕ್‌ ಸತತ ಎಸೆತಗಳಲ್ಲಿ ಅಜಿಂಕ್ಯ ರಹಾನೆ ಮತ್ತು ಕರುಣ್‌ ನಾಯರ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. 

ಸರಣಿಯ ಮುಂದಿನ ಟೆಸ್ಟ್‌ ಪಂದ್ಯ ಧೋನಿ ಊರಾದ ರಾಂಚಿಯಲ್ಲಿ ಮಾ. 16ರಿಂದ ಆರಂಭವಾಗಲಿದೆ. ಇದು ರಾಂಚಿಯಲ್ಲಿ ನಡೆಯುವ ಮೊದಲ ಟೆಸ್ಟ್‌ ಪಂದ್ಯ. ಧೋನಿ ಟೆಸ್ಟ್‌ ವಿದಾಯದ ಬಳಿಕ ರಾಂಚಿಗೆ ಈ ಅವಕಾಶ ಸಿಕ್ಕಿರುವುದು ಅಭಿಮಾನಿಗಳ ಪಾಲಿಗೆ ತುಸು ನಿರಾಸೆಯ ಸಂಗತಿ. 4ನೇ ಟೆಸ್ಟ್‌ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಇದು ಕೂಡ ಭಾರತದ ನೂತನ ಟೆಸ್ಟ್‌ ಕೇಂದ್ರವಾಗಿದೆ.

36 ರನ್ನಿಗೆ ಬಿತ್ತು 6 ವಿಕೆಟ್‌!
ಪೂಜಾರ-ರಹಾನೆ ಕ್ರೀಸಿನಲ್ಲಿದ್ದಷ್ಟು ಹೊತ್ತು ಭಾರತಕ್ಕೆ ದೊಡ್ಡ ಮೊತ್ತದ ಮುನ್ನಡೆಯ ನಿರೀಕ್ಷೆ ಇತ್ತು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಆತಿಥೇಯರ ಪತನ ತೀವ್ರಗೊಂಡಿತು. 36 ರನ್‌ ಅಂತರದಲ್ಲಿ ಟೀಮ್‌ ಇಂಡಿಯಾದ ಉಳಿದ ಆರೂ ವಿಕೆಟ್‌ಗಳು ಬಿದ್ದವು.  79 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಪೂಜಾರ 92 ರನ್ನಿಗೆ ವಿಕೆಟ್‌ ಒಪ್ಪಿಸಿ ಶತಕವೊಂದನ್ನು ತಪ್ಪಿಸಿಕೊಳ್ಳಬೇಕಾಯಿತು. ಅವರ 221 ಎಸೆತಗಳ ಬಹುಮೂಲ್ಯ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ಇವರೊಂದಿಗೆ 40 ರನ್‌ ಗಳಿಸಿ ಆಡುತ್ತಿದ್ದ ಅಜಿಂಕ್ಯ ರಹಾನೆ ಕೊಡುಗೆ 52 ರನ್‌. 134 ಎಸೆತ ಎದುರಿಸಿದ ಅವರು 4 ಬೌಂಡರಿ ಹೊಡೆದರು. 

ಆದರೆ ಅತ್ಯಂತ ನಿರಾಸೆ ಮೂಡಿಸಿದವರು ಸ್ಥಳೀಯ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌. ಅವರು ಮೊದಲ ಎಸೆತದಲ್ಲೇ ಕ್ಲೀನ್‌ಬೌಲ್ಡ್‌ ಆಗಿ ಬೆಂಗಳೂರು ವೀಕ್ಷಕರಿಗೆ ಗರಬಡಿಯುವಂತೆ ಮಾಡಿದರು. ಹೆಚ್ಚುವರಿ ಬ್ಯಾಟ್ಸ್‌ ಮನ್‌ ಆಗಿ ತಂಡಕ್ಕೆ ಬಂದಿದ್ದ ನಾಯರ್‌ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ವಿಫ‌ಲರಾದುದೊಂದು ದುರಂತವೇ ಸರಿ. ಭಾರತದ ಗೆಲುವಿನಲ್ಲಿ ನಾಯರ್‌ ವೈಫ‌ಲ್ಯ ಮುಚ್ಚಿಹೋಗಬಹುದಾದರೂ ಮುಂಬರುವ ಪಂದ್ಯಗಳಲ್ಲಿ ಅವಕಾಶ ಲಭಿಸುವ ನಿಟ್ಟಿನಲ್ಲಿ ಇದು ಗಣನೆಗೆ ಬಾರದೇ ಇರದು.

ಕೊನೆಯ ಹಂತದಲ್ಲಿ ಸಣ್ಣದೊಂದು ಬ್ಯಾಟಿಂಗ್‌ ಹೋರಾಟ ಪ್ರದರ್ಶಿಸಿದ ವೃದ್ಧಿಮಾನ್‌ ಸಾಹಾ 37 ಎಸೆತಗಳಿಂದ 20 ರನ್‌ ಮಾಡಿ ಔಟಾಗದೆ ಉಳಿದರು (2 ಬೌಂಡರಿ, 1 ಸಿಕ್ಸರ್‌).

ಶ್ರೇಷ್ಠ ಗೆಲುವು: ವಿರಾಟ್‌ ಕೊಹ್ಲಿ
ಇದು ನನ್ನ ನಾಯಕತ್ವದಲ್ಲಿ ಒಲಿದ ಶ್ರೇಷ್ಠ ಗೆಲುವು ಎಂಬುದಾಗಿ ವಿರಾಟ್‌ ಕೊಹ್ಲಿ ಹೇಳಿದ್ದಾರೆ. “ಹೌದು, ಇದು ನನ್ನ ನಾಯಕತ್ವದ ಶ್ರೇಷ್ಠ ಟೆಸ್ಟ್‌ ವಿಜಯ. ತಾನಾಗಿಯೇ ತಿರುವು ಪಡೆದುಕೊಂಡ ಈ ಪಂದ್ಯದ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ. ಇದು ನಮ್ಮ ಪಾಲಿನ ಭಾವನಾತ್ಮಕ ಪಂದ್ಯವಾಗಿತ್ತು. ಎಲ್ಲರೂ ಉತ್ತಮ ನಿರ್ವಹಣೆ ತೋರಿದರು…’ ಎಂದು ಕೊಹ್ಲಿ ಹೇಳಿದರು. “ಇಲ್ಲಿ 120 ರನ್‌ ಗುರಿ ಲಭಿಸಿದರೂ ಬೆನ್ನಟ್ಟುವುದು ಕಷ್ಟವಾಗಿತ್ತು. 150 ರನ್‌ ಗುರಿ ಇದ್ದರೂ ಉಳಿಸಿಕೊಳ್ಳಬಹುದಿತ್ತು. ನಾವು 75 ರನ್ನುಗಳ ದೊಡ್ಡ ಅಂತರದಿಂದಲೇ ಗೆದ್ದೆವು…’ ಎಂಬುದು ಭಾರತೀಯ ಕಪ್ತಾನನ ಅಭಿಪ್ರಾಯವಾಗಿತ್ತು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    189
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌    276
ಭಾರತ ದ್ವಿತೀಯ ಇನ್ನಿಂಗ್ಸ್‌
(ನಿನ್ನೆ 4 ವಿಕೆಟಿಗೆ 213)
ಚೇತೇಶ್ವರ್‌ ಪೂಜಾರ    ಸಿ. ಮಾರ್ಷ್‌ ಬಿ ಹ್ಯಾಝಲ್‌ವುಡ್‌    92
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಸ್ಟಾರ್ಕ್‌    52
ಕರುಣ್‌ ನಾಯರ್‌    ಬಿ ಸ್ಟಾರ್ಕ್‌    0
ವೃದ್ಧಿಮಾನ್‌ ಸಾಹಾ    ಔಟಾಗದೆ    20
ಆರ್‌. ಅಶ್ವಿ‌ನ್‌    ಬಿ ಹ್ಯಾಝಲ್‌ವುಡ್‌    4
ಉಮೇಶ್‌ ಯಾದವ್‌    ಸಿ ವಾರ್ನರ್‌ ಬಿ ಹ್ಯಾಝಲ್‌ವುಡ್‌    1
ಇಶಾಂತ್‌ ಶರ್ಮ    ಸಿ ಎಸ್‌.ಮಾರ್ಷ್‌ ಬಿ ಓ’ಕೀಫ್    6
ಇತರ        15

ಒಟ್ಟು  (ಆಲೌಟ್‌)        274
ವಿಕೆಟ್‌ ಪತನ: 5-238, 6-238, 7-242, 8-246, 9-258.

ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        16-1-74-2
ಜೋಶ್‌ ಹ್ಯಾಝಲ್‌ವುಡ್‌    24-5-67-6
ನಥನ್‌ ಲಿಯೋನ್‌        33-4-82-0
ಸ್ಟೀವ್‌ ಓ’ಕೀಫ್        21.1-3-36-2
ಮಿಚೆಲ್‌ ಮಾರ್ಷ್‌        3-0-4-0

ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 188 ರನ್‌)

ಡೇವಿಡ್‌ ವಾರ್ನರ್‌    ಎಲ್‌ಬಿಡಬ್ಲ್ಯು ಅಶ್ವಿ‌ನ್‌    17
ಮ್ಯಾಟ್‌ ರೆನ್‌ಶಾ    ಸಿ ಸಾಹಾ ಬಿ ಇಶಾಂತ್‌    5
ಸ್ಟೀವನ್‌ ಸ್ಮಿತ್‌    ಎಲ್‌ಬಿಡಬ್ಲ್ಯು ಯಾದವ್‌    28
ಶಾನ್‌ ಮಾರ್ಷ್‌    ಎಲ್‌ಬಿಡಬ್ಲ್ಯು ಯಾದವ್‌    9
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಸಾಹಾ ಬಿ ಅಶ್ವಿ‌ನ್‌    24
ಮಿಚೆಲ್‌ ಮಾರ್ಷ್‌    ಸಿ ನಾಯರ್‌ ಬಿ ಅಶ್ವಿ‌ನ್‌    13
ಮ್ಯಾಥ್ಯೂ ವೇಡ್‌    ಸಿ ಸಾಹಾ ಬಿ ಅಶ್ವಿ‌ನ್‌    0
ಮಿಚೆಲ್‌ ಸ್ಟಾರ್ಕ್‌    ಬಿ ಅಶ್ವಿ‌ನ್‌    1
ಸ್ಟೀವ್‌ ಓ’ಕೀಫ್    ಬಿ ಜಡೇಜ    2
ನಥನ್‌ ಲಿಯೋನ್‌    ಸಿ ಮತ್ತು ಬಿ ಅಶ್ವಿ‌ನ್‌    2
ಹ್ಯಾಝಲ್‌ವುಡ್‌    ಔಟಾಗದೆ    0

ಇತರ        11
ಒಟ್ಟು  (ಆಲೌಟ್‌)        112
ವಿಕೆಟ್‌ ಪತನ:
1-22, 2-42, 3-67, 4-74, 5-101, 6-101, 7-103, 8-110, 9-110.

ಬೌಲಿಂಗ್‌:
ಇಶಾಂತ್‌ ಶರ್ಮ        6-1-28-1
ಆರ್‌. ಅಶ್ವಿ‌ನ್‌        12.4-4-41-6
ಉಮೇಶ್‌ ಯಾದವ್‌        9-2-30-2
ರವೀಂದ್ರ ಜಡೇಜ        8-5-3-1

ಪಂದ್ಯಶ್ರೇಷ್ಠ: ಕೆ.ಎಲ್‌. ರಾಹುಲ್‌
3ನೇ ಟೆಸ್ಟ್‌: ರಾಂಚಿ (ಮಾ. 16-20)

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಆಸ್ಟ್ರೇಲಿಯ ವಿರುದ್ಧ ಭಾರತ ಬೆಂಗಳೂರಿನಲ್ಲಿ 2ನೇ ಗೆಲುವು ಸಾಧಿಸಿತು. ಇದು ಸತತ 2ನೇ ಗೆಲುವು. ಇದಕ್ಕೂ ಹಿಂದಿನ 2 ಟೆಸ್ಟ್‌ಗಳನ್ನು ಆಸೀಸ್‌ ಗೆದ್ದಿತ್ತು. ಉಳಿದೆರಡು ಟೆಸ್ಟ್‌ ಡ್ರಾಗೊಂಡಿದ್ದವು.

* ಭಾರತ 200ಕ್ಕಿಂತ ಕಡಿಮೆ ಮೊತ್ತದ ಗುರಿ ನೀಡಿದ ವೇಳೆ ದೊಡ್ಡ ಅಂತರದ ಗೆಲುವು ಸಾಧಿಸಿತು (75 ರನ್‌). ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ 1996-97ರ ಅಹ್ಮದಾಬಾದ್‌ ಟೆಸ್ಟ್‌ ಪಂದ್ಯವನ್ನು 64 ರನ್ನುಗಳಿಂದ ಗೆದ್ದದ್ದು ಉತ್ತಮ ಸಾಧನೆಯಾಗಿತ್ತು. ಅಲ್ಲಿ ಪ್ರವಾಸಿಗರಿಗೆ ಲಭಿಸಿದ ಗುರಿ 170 ರನ್‌.

* ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 4ನೇ ಅತೀ ದೊಡ್ಡ ಮೊತ್ತದ ಹಿನ್ನಡೆಗೆ ಸಿಲುಕಿ (87 ರನ್‌) ಪಂದ್ಯವನ್ನು ಜಯಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯ ವಿರುದ್ಧವೇ 2 ಸಲ ಗೆಲುವಿನ ಸಾಧನೆ ಮಾಡಿತ್ತು. ಮೊದಲನೆಯದು 2011ರ ಕೋಲ್ಕತಾದ ಫಾಲೋಆನ್‌ ಟೆಸ್ಟ್‌ (274 ರನ್‌), ಮತ್ತೂಂದು 2001ರ ಮುಂಬಯಿ ಟೆಸ್ಟ್‌ (99 ರನ್‌).

* ಆಸ್ಟ್ರೇಲಿಯ ತನ್ನ ಕೊನೆಯ 6 ವಿಕೆಟ್‌ಗಳನ್ನು 11 ರನ್‌ ಅಂತರದಲ್ಲಿ ಉದುರಿಸಿಕೊಂಡಿತು. 101ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ 112ಕ್ಕೆ ಆಲೌಟ್‌ ಆಯಿತು. ಇದು ಆಸ್ಟ್ರೇಲಿಯದ ಕ್ಷಿಪ್ರಗತಿಯ 6 ವಿಕೆಟ್‌ ಪತನದ 3ನೇ ಜಂಟಿ ದೃಷ್ಟಾಂತ. ಭಾರತದ ವಿರುದ್ಧ 2ನೇ ಕ್ಷಿಪ್ರಗತಿಯ ಕುಸಿತ.

* ಆರ್‌. ಅಶ್ವಿ‌ನ್‌ 25ನೇ ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ ಸಾಧನೆಗೈದರು. ಇದು ಅವರ 47ನೇ ಟೆಸ್ಟ್‌ ಆಗಿದ್ದು, ಅತ್ಯಂತ ಕಡಿಮೆ ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಹಿಂದಿನ ದಾಖಲೆ ರಿಚರ್ಡ್‌ ಹ್ಯಾಡ್ಲಿ ಹೆಸರಲ್ಲಿತ್ತು (62 ಟೆಸ್ಟ್‌). ಭಾರತದ ಉಳಿದ ಸಾಧಕರಾದ ಅನಿಲ್‌ ಕುಂಬ್ಳೆ 86 ಟೆಸ್ಟ್‌ಗಳಲ್ಲಿ, ಹರ್ಭಜನ್‌ ಸಿಂಗ್‌ 93 ಪಂದ್ಯಗಳಲ್ಲಿ ಈ ಮೈಲುಗಲ್ಲು ನೆಟ್ಟಿದ್ದರು.

* ಅಶ್ವಿ‌ನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 269 ವಿಕೆಟ್‌ ಉರುಳಿಸಿ ಭಾರತದ ಬೌಲಿಂಗ್‌ ಸಾಧಕರ ಯಾದಿಯ 5ನೇ ಸ್ಥಾನ ಅಲಂಕರಿಸಿದರು. ಈ ಸಂದರ್ಭದಲ್ಲಿ ಬಿಷನ್‌ ಸಿಂಗ್‌ ಬೇಡಿ ಅವರ 266 ವಿಕೆಟ್‌ಗಳ ಸಾಧನೆಯನ್ನು ಅಶ್ವಿ‌ನ್‌ ಮೀರಿನಿಂತರು.

* ಟೆಸ್ಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ 4 ಮಂದಿ ಬೌಲರ್‌ಗಳು 6 ಪ್ಲಸ್‌ ವಿಕೆಟ್‌ ಉರುಳಿಸಿದ ಸಾಧನೆಗೈದರು (ಲಿಯೋನ್‌, ಜಡೇಜ, ಹ್ಯಾಝಲ್‌ವುಡ್‌ ಮತ್ತು ಅಶ್ವಿ‌ನ್‌). 

* ಜೋಶ್‌ ಹ್ಯಾಝಲ್‌ವುಡ್‌ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದರು (65ಕ್ಕೆ 6). ಇದು 1979ರ ಬಳಿಕ ಆಸೀಸ್‌ ವೇಗಿಯೋರ್ವ ಭಾರತದಲ್ಲಿ ತೋರ್ಪಡಿಸಿದ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ. ಅಂದಿನ ಕಾನ್ಪುರ ಟೆಸ್ಟ್‌ನಲ್ಲಿ ಜೆಫ್ ಡಿಮಾಕ್‌ 67ಕ್ಕೆ 7 ವಿಕೆಟ್‌ ಉರುಳಿಸಿದ್ದರು.

* ಚೇತೇಶ್ವರ್‌ ಪೂಜಾರ ಮೊದಲ ಸಲ ನರ್ವಸ್‌ ನೈಂಟಿ ಸಂಕಟಕ್ಕೆ ಸಿಲುಕಿದರು. ಇದಕ್ಕೂ ಮುನ್ನ ಅವರು 90ರ ಗಡಿ ದಾಟಿದ ಹತ್ತೂ ಸಂದರ್ಭಗಳಲ್ಲಿ ಶತಕ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next