Advertisement

ATMನೊಳಗೆ ಮಹಿಳೆ ಮೇಲೆ ಹಲ್ಲೆಗೈದ ರಕ್ಕಸ ಕೊನೆಗೂ ಅರೆಸ್ಟ್

03:21 PM Feb 04, 2017 | Sharanya Alva |

ಹೈದರಾಬಾದ್:ಕಾರ್ಪೋರೇಶನ್ ಬ್ಯಾಂಕ್ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುತ್ತಿದ್ದಾಗ ಏಕಾಏಕಿ ಎಟಿಎಂಗೆ ನುಗ್ಗಿ ಜ್ಯೋತಿ ಉದಯ್ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿ ಕೊನೆಗೂ ಮೂರು ವರ್ಷಗಳ ಬಳಿಕ ಸೆರೆ ಸಿಕ್ಕಿದ್ದಾನೆ ಎಂಬ ಮಾಹಿತಿಯನ್ನು ಟಿವಿ9 ವರದಿ ಮಾಡಿದೆ.

Advertisement

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆ 2013ರ ನವೆಂಬರ್ 19ರಂದು ನಡೆದಿತ್ತು. ಅಂದು ಬೆಳಗ್ಗೆ ಜ್ಯೋತಿ ಉದಯ್ ಅವರು ಎಟಿಎಂ ಪ್ರವೇಶಿಸಿದ್ದಾಗ ಆರೋಪಿ ದಿಡೀರ್ ಒಳನುಗ್ಗಿ ಮಚ್ಚಿನಿಂದ ಮಾರಣಾಂತಿಕವಾಗಿ ಹೊಡೆದು ಪರಾರಿಯಾಗಿದ್ದ. ಬಳಿಕ ಸಿಸಿಟಿವಿ ಆಧಾರದ ಮೇಲೆ ಆರೋಪಿ ಪತ್ತೆಗೆ ಪೊಲೀಸ್ ಇಲಾಖೆ ಸಾಕಷ್ಟು ಕಸರತ್ತು ನಡೆಸಿದ್ದರೂ ಕೂಡಾ ಆರೋಪಿ ಪತ್ತೆಯಾಗಿರಲಿಲ್ಲವಾಗಿತ್ತು.

ಇದೀಗ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಠಾಣೆಯ ಪೊಲೀಸರು ಮಧುಕರ ರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಎಟಿಎಂನೊಳಗೆ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿ ಈತನೇ ಎಂಬುದನ್ನು ಬೆಂಗಳೂರು ಪೊಲೀಸರು ಇದೀಗ ಖಚಿತಪಡಿಸಿದ್ದಾರೆ.

ಜನವರಿ 31ರಂದು ಮದನಪಲ್ಲಿ ಪೊಲೀಸರು ರೆಡ್ಡಿಯನ್ನು ಗುರುತಿಸಿ ಬಂಧಿಸಿದ್ದಾರೆಂದು ವರದಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆ ಮಾಡಲು ವಿಫಲರಾಗಿದ್ದ ಬೆಂಗಳೂರು  ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು.

ಎಟಿಎಂ ರಕ್ಕಸನನ್ನು ಗುರುತಿಸಿದ್ದು ಟ್ರಾಫಿಕ್ ಪೊಲೀಸ್!

Advertisement

ಮಧುಕರ್ ರೆಡ್ಡಿಯನ್ನು ಮೊದಲು ಗುರುತಿಸಿದ್ದು ಟ್ರಾಫಿಕ್ ಪೊಲೀಸರು, ಕೊನೆಗೆ ಆತನನ್ನು ಬಂಧಿಸಿ ಮದನಪಲ್ಲಿ ಠಾಣೆಗೆ ಕರೆತಂದು ಒಪ್ಪಿಸಿದ್ದರು ಎಂದು ವರದಿ ತಿಳಿಸಿದೆ. ಕಳೆದ ಮೂರು ದಿನಗಳಿಂದ ರೆಡ್ಡಿಯನ್ನು ಮದನಪಲ್ಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ಖಚಿತಪಡಿಸಿದ ಗೃಹಸಚಿವ ಪರಮೇಶ್ವರ್

ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಎಟಿಎಂನೊಳಗೆ ಹಲ್ಲೆಗೈದಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಅವರು ಬಿಡದಿಯಲ್ಲಿ ಖಚಿತಪಡಿಸಿದ್ದಾರೆ.

ಸಿ ರಿಪೋರ್ಟ್ ಎಂದರೆ?
ಸಿ ರಿಪೋರ್ಟ್ ಅಂದರೆ ತನಿಖೆಯನ್ನು ಮುಂದುವರೆಸಲು ಸದ್ಯಕ್ಕೆ ಯಾವುದೇ ದಾಖಲೆಗಳಿಲ್ಲ, ಮುಂದಿನ ದಿನಗಳಲ್ಲಿ  ಪೂರಕ  ದಾಖಲೆಗಳು ಲಭ್ಯವಾದಲ್ಲಿ ತನಿಖೆ ಮುಂದುವರಿಸಲಾಗುವುದೆಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ವರದಿ. ಸಿ ರಿಪೋರ್ಟ್ ಸಲ್ಲಿಸಿದಲ್ಲಿ ಪ್ರಕರಣ ಅಂತ್ಯಗೊಳ್ಳುವುದಿಲ್ಲ.

ಬಿ ರಿಪೋರ್ಟ್ ಎಂದರೆ, ಆರೋಪಿ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ವರದಿ. ಬಿ ರಿಪೋರ್ಟ್ ಸಲ್ಲಿಸುವುರಿಂದ ಪ್ರಕರಣ ಮುಕ್ತಾಯಗೊಂಡಿದೆ ಎಂದೇ ಅರ್ಥ

Advertisement

Udayavani is now on Telegram. Click here to join our channel and stay updated with the latest news.

Next