ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಏರ್‌ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್(ಎಸಿಐ) ವರ್ಲ್ಡ್ ನಿಂದ ಸತತ 2ನೇ ವರ್ಷವೂ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದಿದೆ.
ವಿಶ್ವದ ಇತರೆ ವಿಮಾನ ನಿಲ್ದಾಣಗಳಿಗಿಂತ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿಗೆ ತಡೆರಹಿತ ಆಗಮನದ ಅನುಭವ, ಮೆಟ್ರೋ ಅಲ್ಲದ ನಗರಗಳಿಗೆ ಸಂಪರ್ಕ ಮತ್ತು ದಕ್ಷಿಣ ಭಾರತದಾದ್ಯಂತ ಸುಗಮ ಸಂಪರ್ಕವನ್ನು ಒದಗಿಸುವಲ್ಲಿ, ಅದರ ನಿರಂತರ ಪ್ರಯತ್ನಗಳು ಈ ಪ್ರತಿಷ್ಠಿತ ಸಾಧನೆಗೆ ಕಾರಣವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿ. ಎಂಡಿ, ಸಿಇಒ ಹರಿಮರಾರ್, ಎಸಿಐನಿಂದ ಈ ಗೌರವ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಎಸಿಐ ವರ್ಲ್ಡ್ ಮಹಾನಿರ್ದೇಶಕ ಲೂಯಿಸ್ ಫೆಲಿಪ್ ಡಿ ಒಲಿವೇರಾ, ಕೆಂಪೇಗೌಡ ವಿಮಾನ ನಿಲ್ದಾಣದ ಸಾಧನೆಯನ್ನು ಶ್ಲಾಘಿಸಿ, ಏರ್ರ್ಪೋಟ್ ಸರ್ವಿಸ್ ಕ್ವಾಲಿಟಿ ಪ್ರಶಸ್ತಿಗೆ ಪುರಸ್ಕೃತರಾಗಲು ನಿಮ್ಮ ಇಡೀ ತಂಡದ ಕಠಿಣ ಪರಿಶ್ರಮ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಂಎಸ್‌ಕ್ಯೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಡೆಸುವ ಸಮೀಕ್ಷೆ ಆಗಿದೆ. ಪ್ರಯಾಣಿಕರ ವಿಮಾನ ನಿಲ್ದಾಣದ ಅನುಭವದ ಪ್ರಮುಖ ಅಂಶಗಳು ಸೇರಿ 30ಕ್ಕೂ ಹೆಚ್ಚು ಕಾರ್ಯಕ್ಷಮತೆ ಸೂಚಕಗಳನ್ನು ಸಮೀಕ್ಷೆ ಒಳಗೊಂಡಿದೆ. ಇದು ಪ್ರಯಾಣಿಕರ ಅನುಭವದ ಪ್ರಯಾಣದ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ ಎಂದು ವಿವರಿಸಿದರು.