Advertisement

Bang Movie Review: ಜಾಲಿ ರೈಡ್‌ನಲ್ಲಿ ಥ್ರಿಲರ್‌ ಆಟ

01:58 PM Aug 19, 2023 | Team Udayavani |

ಜಾಲಿಯಾಗಿ ಕಾರೊಂದರಲ್ಲಿ ನೈಟ್‌ ಔಟಿಂಗ್‌ ಹೊರಡುವ ಮೂವರು ಸ್ನೇಹಿತರು ತಮಗೆ ಗೊತ್ತಿಲ್ಲದಂತೆ ಡ್ರಗ್ಸ್‌ ಪೆಡ್ಲರ್‌ಗಳ ಜಾಲದೊಳಗೆ ಸಿಲುಕಿಕೊಳ್ಳುತ್ತಾರೆ. ಇಂಥ ಡ್ರಗ್ಸ್‌ ಜಾಲದೊಳಗೆ ಸಿಲುಕಿಕೊಂಡಿರುವ ಮೂವರು ಯುವಕರು ಒಂದೇ ದಿನದೊಳಗೆ ಆ ಡ್ರಗ್ಸ್‌ ಜಾಲದಿಂದ ಹೊರ ಬರಲು ಏನೆಲ್ಲಾ ಕಸರತ್ತು ನಡೆಸುತ್ತಾರೆ ಎಂಬುದೇ “ಬ್ಯಾಂಗ್‌’ ಸಿನಿಮಾದ ಕಥೆಯ ಒಂದು ಎಳೆ.

Advertisement

ಇಷ್ಟು ಹೇಳಿದ ಮೇಲೆ “ಬ್ಯಾಂಗ್‌’ ಒಂದು ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಕ್ರೈಂ ಥ್ರಿಲ್ಲರ್‌ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಡ್ರಗ್ಸ್‌ ಮಾಫಿಯಾ, ಅದರ ಮೇಲೆ ಹಿಡಿತ ಸಾಧಿಸಲು ಎರಡು ಬಣಗಳ ನಡುವಿನ ಕಾದಾಟ, ಈ ಕಾದಾಟದಲ್ಲಿ ಅಮಾಯಕರಾಗಿ ಸಿಲುಕಿಕೊಳ್ಳುವ ಮೂವರು ಹುಡುಗರು ಕೊನೆಗೆ ಇದೆಲ್ಲದಕ್ಕೂ ಇತಿಶ್ರೀ. ಇವಿಷ್ಟು ವಿಷಯ ಗಳನ್ನು ಇಟ್ಟುಕೊಂಡು ತೆರೆಮೇಲೆ ಒಂದಾದ ಮೇಲೊಂದು ಅಧ್ಯಾಯದಂತೆ ಹೇಳಿದ್ದಾರೆ ನಿರ್ದೇಶಕರು. ಆದರೆ ಈ ಅಧ್ಯಾಯ ಗಳ ಸಾರವನ್ನು ಎಷ್ಟರ ಮಟ್ಟಿಗೆ ನೋಡುಗರು ಅರಗಿಸಿಕೊಳ್ಳುತ್ತಾರೆ ಎಂಬುದೇ ಅಧ್ಯಾಯಗಳ ಕೊನೆಯಲ್ಲಿರುವ ಯಕ್ಷ ಪ್ರಶ್ನೆ.

ಇದನ್ನೂ ಓದಿ: Kshetrapathi: ಹೋರಾಟದ ಹಾದಿಯಲ್ಲಿ ಕ್ಷೇತ್ರ

ಸರಳವಾಗಿ ಹೇಳಬಹುದಾದ ಒಂದು ಕಥೆಯನ್ನು ಒಂದಷ್ಟು ತಿರುವು-ಮುರುವುಗಳನ್ನು ಸೇರಿಸಿ ಹೇಳಲಾಗಿದೆ. ಇದು ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಕ್ಕೆ ಕಾರಣವಾಗುತ್ತದೆ. ಕಥೆ ಬೆಂಗಳೂರು- ಮಂಗಳೂರು ಸುತ್ತುತ್ತದೆ. ಅದಕ್ಕೊಂದು ಕಾರಣವಿದೆ. ಅದೇನೆಂಬ ಕುತೂಹಲವಿದ್ದರೆ ನೀವು “ಬ್ಯಾಂಗ್‌’ ನೋಡಬಹುದು. ಕಲಾವಿದರ ಬಗ್ಗೆ ಹೇಳುವುದಾದರೆ, ಗ್ಲಾಮರಸ್‌ ಮತ್ತು ಹೋಮ್ಲಿ ಲುಕ್‌ ಇರುವಂಥ ಪಾತ್ರಗಳಲ್ಲಿ ಮಿಂಚಿದ್ದ ನಟಿ ಶಾನ್ವಿ ಶ್ರೀವಾಸ್ತವ್‌, ಇದೇ ಮೊದಲ ಬಾರಿಗೆ ಆ್ಯಕ್ಷನ್‌ ಲೇಡಿಯಾಗಿ ಮಾಫಿಯಾ ಡಾನ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಡೀ ಸಿನಿಮಾದಲ್ಲಿ ರಿವಾಲ್ವರ್‌, ಗನ್‌ಗಳು ಮತ್ತು ಬುಲೆಟ್‌ಗಳ ಅಬ್ಬರವೇ ಹೆಚ್ಚಾಗಿರುವುದರಿಂದ ಶಾನ್ವಿ ಮಾತುಕಥೆಗೆ ಹೆಚ್ಚು ಅವಕಾಶವಿಲ್ಲ. ಮೊದಲ ಬಾರಿಗೆ ವಿಲನ್‌ಗಳಿಗೆಲ್ಲ “ಡ್ಯಾಡಿ’ಯಾಗಿ ತೆರೆಮೇಲೆ ಕಾಣಿಸಿಕೊಂಡಿರುವ ರಘು ದೀಕ್ಷಿತ್‌ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

Advertisement

ಉಳಿದಂತೆ ರಿತ್ವಿಕ್‌ ಮುರಳಿಧರ್‌, ಸುನೀಲ್‌, ನಾಟ್ಯ ರಂಗ, ಸಾತ್ವಿಕಾ, ಜಹಾಂಗೀರ್‌ ಸೇರಿದಂತೆ ಬಹುತೇಕ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ.

ಇಡೀ ಸಿನಿಮಾದಲ್ಲಿ ಗಮನ ಸೆಳೆಯುವ ಅಂಶಗಳೆಂದರೆ, ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ. ತಾಂತ್ರಿಕವಾಗಿ ಸಿನಿಮಾ ಗುಣಮಟ್ಟದಲ್ಲಿದ್ದು, ಚಿತ್ರತಂಡ ತಾಂತ್ರಿಕ ಕಾರ್ಯಗಳ ಕಡೆಗೆ ಕೊಟ್ಟಿರುವ ಮಹತ್ವವನ್ನು ಚಿತ್ರಕಥೆ, ನಿರೂಪಣೆಯ ಕಡೆಗೂ ಕೊಟ್ಟಿದ್ದರೆ, “ಬ್ಯಾಂಗ್‌’ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುವ ಸಾಧ್ಯತೆಗಳಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next