ಆಮ್‌ಸ್ಟೆಲ್ವಿನ್: ನೆದರ್ಲೆಂಡ್ಸ್ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ಪ್ರವಾಸಿ ವೆಸ್ಟ್ ಇಂಡೀಸ್ ಸರಣಿಯನ್ನು ತನ್ನದಾಗಿಸಿಕೊಂಡಿದೆ. 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಇಲ್ಲಿನ “ವಿಆರ್‌ಎ ಕ್ರಿಕೆಟ್ ಗ್ರೌಂಡ್’ ನಲ್ಲಿ ನಡೆದ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡಚ್ಚರ ಪಡೆ 48.3 ಓವರ್‌ಗಳಲ್ಲಿ 214ಕ್ಕೆ ಕುಸಿಯಿತು. ಕೆರಿಬಿಯನ್ ಬಳಗ 45.3 ಓವರ್‌ಗಳಲ್ಲಿ 5 ವಿಕೆಟಿಗೆ 215 ರನ್ ಬಾರಿಸಿತು.
ನೆದರ್ಲೆಂಡ್ಸ್‌ನ ಅಗ್ರ ಕ್ರಮಾಂಕದ ಬ್ಯಾಟರ್ ವಿಂಡೀಸ್ ದಾಳಿಯನ್ನು ದಿಟ್ಟ ರೀತಿಯಲ್ಲೇ ನಿಭಾಯಿಸಿದ್ದರು.
ಆರಂಭಿಕರಾದ ಮ್ಯಾಕ್ಸ್ ಓಡೌಡ್ 51, ವಿಕ್ರಮ್‌ಜೀತ್ ಸಿಂಗ್ 46, ವನ್‌ಡೌನ್ ಬ್ಯಾಟರ್ ಸ್ಕಾಟ್ ಎಡ್ವರ್ಡ್ಸ್ ಸರ್ವಾಧಿಕ 68 ರನ್ ಹೊಡೆದರು. ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ. ಅಖೀಲ್ ಹೊಸೇನ್ 39ಕ್ಕೆ 4 ವಿಕೆಟ್ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರು.
ವೆಸ್ಟ್ ಇಂಡೀಸ್ ಚೇಸಿಂಗ್ ಆಘಾತ ಕಾರಿಯಾಗಿತ್ತು. 60ಕ್ಕೆ 4 ವಿಕೆಟ್, 99ಕ್ಕೆ 5 ವಿಕೆಟ್ ಉರುಳಿದಾಗ ಸೋಲಿನ ಆತಂಕ ಎದುರಾಗಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಬ್ರ್ಯಾಂಡನ್ ಕಿಂಗ್ “ಬ್ಯಾಟಿಂಗ್ ಕಿಂಗ್’ ಆಗಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಅಜೇಯ 91 ರನ್ (90 ಎಸೆತ, 9 ಬೌಂಡರಿ, 3 ಸಿಕ್ಸರ್) ಬಾರಿಸಿ ತಂಡವನ್ನು ದಡ ಮುಟ್ಟಿಸಿದರು.