ಬೆಂಗಳೂರು: ಶಾಂತಿಯುತ ಮತದಾನ ಮುಕ್ತಾಯಗೊಳಿಸಿ ಸಿಲಿಕಾನ್ ಸಿಟಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರು ಪೊಲೀಸರು ಮಂಗಳವಾರದ ಮತ ಎಣಿಕೆ ಕಾರ್ಯವನ್ನು ಸುಸೂತ್ರವಾಗಿ ಮುಗಿಸಲು ಭಾರಿ ಬಂದೋ ಬಸ್ತ್ ಮಾಡಿಕೊಂಡಿದ್ದಾರೆ.
ನಗರ ವ್ಯಾಪ್ತಿಯ ಐದು ಮತ ಎಣಿಕೆ ಕೇಂದ್ರಗಳಿದ್ದು, ಅವುಗಳಿಗೆ 18 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತ ಎಣಿಕೆ ದಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಲಿದ್ದಾರೆ. ಹೀಗಾಗಿ ಪ್ರತಿ ಕೇಂದ್ರಗಳಿಗೆ ಇಬ್ಬರು ಡಿಸಿಪಿಗಳಂತೆ ಒಟ್ಟು 10 ಮಂದಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಇವರೊಂದಿಗೆ ಪ್ರತಿ ಕೇಂದ್ರಗಳಿಗೆ ನಾಲ್ವರು ಎಸಿಪಿ, ನಾಲ್ವರು ಇನ್‌ಸ್ಪೆಕ್ಟರ್, ಐವರು ಸಬ್ ಇನ್‌ಸ್ಪೆಕ್ಟರ್ ಸೇರಿ ಒಟ್ಟು ಮೂರು ಸಾವಿರಕ್ಕೂ ಅಧಿಕ ಪೊಲೀಸರು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೇ 35 ಕೆಎಸ್‌ಆರ್‌ಪಿ ತುಕಡಿಗಳು, 40 ಪೆಟ್ರೋಲಿಂಗ್ ಗಸ್ತು ವಾಹನ, 70 ಸಿಎಆರ್ ಹಾಗೂ ಕೇಂದ್ರೀಯ ಮೀಸಲು ಪಡೆಗಳೂ ಕಾರ್ಯಾಚರಣೆಯಲ್ಲಿರುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಆಗಮಿಸುವ ಕಾರಣ ಆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ಈ ಮಾರ್ಗಗಳಲ್ಲಿ ಸಂಚಾರಿ ಮಾರ್ಗ ಬದಲಾವಣೆ ಮಾಡಿದ್ದು, ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ನಿಷೇಧಾಜ್ಞೆ ಜಾರಿ: ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರ ವರೆಗೆ ನಗರದೆಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಕೇಂದ್ರೀಯ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.