ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಂಚರಿಸುವ ಸವಾರರು ಹೆದ್ದಾರಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ವನ್ಯ ಪ್ರಾಣಿಗಳ ಸಹ ಜೀವನ ಶೈಲಿಗೆ ಕಿರಿಕಿರಿ ಉಂಟಾಗುತ್ತಿದೆ. ಹೀಗಿದ್ದರೂ ಕೂಡ ಅರಣ್ಯಾಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವ ಗೋಜಿಗೆ ಹೋಗಿಲ್ಲ.
ಬಂಡೀಪುರ ರಾಷ್ಟ್ರೀಯ ಹೆದ್ದಾರಿ-67 ಹಾಗೂ ಕೇರಳ ರಾಷ್ಟ್ರೀಯ ಹೆದ್ದಾರಿ-766 ರಸ್ತೆಯ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಈ ವೇಳೆ ಆನೆ, ಜಿಂಕೆ, ನವಿಲು, ಕಾಡೆಮ್ಮೆ ಸೇರಿದಂತೆ ಇನ್ನಿತರ ಹಲವು ಕಾಡು ಪ್ರಾಣಿಗಳು ರಸ್ತೆ ಬದಿಯಲ್ಲಿ ಕಂಡರೆ ವಾಹನ ಸವಾರರು ಕೂಡಲೇ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡು ವಿಡಿಯೋ ಮಾಡಲು ಮುಂದಾಗುತ್ತಾರೆ. ಇದರಿಂದ ಕಾಡು ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಮಧ್ಯೆ ಬೈಕ್ ನಲ್ಲಿ ತೆರಳುವ ಅನೇಕ ಮಂದಿ ಆನೆ ಕಂಡರೆ ಹತ್ತಿರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಈ ಸಂದರ್ಭದಲ್ಲಿ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿಗೆ ಮುಂದಾಗಿರುವ ಸಾಕಷ್ಟು ನಿದರ್ಶನಗಳಿವೆ.
ವಾಹನ ನಿಲ್ಲದಂತೆ ಕ್ರಮಕ್ಕೆ ಒತ್ತಾಯ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಂಚರಿಸುವ ವೇಳೆ ಯಾವೊಂದು ವಾಹನಗಳು ಕಾಡು ಪ್ರಾಣಿಗಳನ್ನು ಕಂಡರೆ ನಿಲ್ಲಿಸದಂತೆ ಇಲಾಖೆ ಅಧಿಕಾರಿಗಳು ಕಟ್ಟುನಿ ಟ್ಟಿನ ಕ್ರಮ ವಹಿಸಿ, ನಿಲುಗಡೆ ಮಾಡುವ ವಾಹನ ಸವಾರರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕೆಂದು ಪರಿಸರ ವಾದಿ ಶಿವಕುಮಾರ್ ಒತ್ತಾಯಿಸಿದ್ದಾರೆ.
ರಸ್ತೆ ಬದಿ ಕಾಣಿಸಿಕೊಳ್ಳುವ ಆನೆ, ನವಿಲು: ಬಂಡೀಪುರದಿಂದ ತಮಿಳುನಾಡಿಗೆ ಸಂಚರಿಸುವ ಮಾರ್ಗ ಮಧ್ಯೆ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹಿನ್ನೆಲೆ ರಸ್ತೆ ಬದಿಯಲ್ಲಿಯೇ ಕಾಡಾನೆ, ನವಿಲುಗಳು ಅಧಿಕ ಸಂಖ್ಯೆಯಲ್ಲೇ ಕಾಣ ಸಿಗುತ್ತಿವೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸಂಖ್ಯೆಗಳು ಕೂಡ ಅಧಿಕವಾಗಿದೆ.
ಬಂಡೀಪುರ ಮಾರ್ಗವಾಗಿ ಸಂಚರಿ ಸುವ ಸವಾರರಿಗೆ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು. ವಾಹನ ನಿಲ್ಲಿಸಿದರೆ ದಂಡ ವಿಧಿಸಲಾಗುವುದು.
-ರಮೇಶ್ ಕುಮಾರ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ
– ಬಸವರಾಜು ಎಸ್.ಹಂಗಳ