ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನಲೆ ಅಭಯಾರಣ್ಯವು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಕೂಡ ಸ್ವಚ್ಛವಾಗಿ ವಿಹರಿಸುತ್ತಿವೆ.
ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರು ಸಫಾರಿಗೆ ತೆರಳುವ ಹಾಗೂ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಸಂಚಾರಿಸುವ ಮಾರ್ಗವು ಅಚ್ಚ ಹಸಿರಿನಿಂದ ಕೂಡಿರುವ ಹಿನ್ನಲೆ ಆನೆ, ಕಾಡೆಮ್ಮೆ, ಚಿರತೆ, ಹುಲಿಗಳು ಹೆಚ್ಚಿನ ರೀತಿಯಲ್ಲಿ ಸಫಾರಿ ಹಾಗೂ ರಸ್ತೆ ಬದಿಯಲ್ಲೆ ಸಿಗುತ್ತಿವೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಫೋಟೋ ತೆಗೆಯುವುದು, ಜಿಂಕೆ, ಕೋತಿಗಳಿಗೆ ತಿಂಡಿ ನೀಡುವುದು ಮಾಡುತ್ತಿದ್ದಾರೆ. ಇದು ನಿಯಮ ಬಾಹಿರವಾಗಿದ್ದರೂ ಸಹ ಘಟನೆ ಮರುಕಳಿಸುತ್ತಲೇ ಇದೆ. ಇದರ ಬಗ್ಗೆ ಅರಣ್ಯಾಧಿಕಾರಿ ಗಳು ಕೂಡ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಹೆದ್ದಾರಿ ಎರಡು ಬದಿಯು ಹಸಿರು: ಬಂಡೀಪುರ ಮಾರ್ಗದಿಂದ ಊಟಿಗೆ ತೆರಳುವ ಹಾಗೂ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಹೋಗುವ ಹೆದ್ದಾರಿ ಬದಿಯ ರಸ್ತೆಯ ಇಕ್ಕೆಲಗಳಲ್ಲಿ ಮಳೆ ಉತ್ತಮವಾಗಿರುವ ಹಿನ್ನೆಲೆ ಹುಲ್ಲು ಹಾಗೂ ಗಿಡ-ಗಂಟಿಗಳು ಹುಲುಸಾಸಿ ಬೆಳೆದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದನ್ನು ಕಂಡು ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಫುಳಕಿತರಾಗಿದ್ದಾರೆ. ಜೊತೆಗೆ ಹಲವು ಮಂದಿ ತಮ್ಮ ಮೊಬೈಲ್‌ನಲ್ಲಿ ಇಲ್ಲಿನ ಪ್ರಕೃತಿ ಸೊಬಗು ಸೆರೆಹಿಡಿಯುತ್ತಿದ್ದಾರೆ.
ಸ್ಥಳೀಯರ ಓಡಾಟ ಹೆಚ್ಚಳ: ಬಂಡೀಪುರ ವ್ಯಾಪ್ತಿಯ ರಸ್ತೆ ಬದಿಯಲ್ಲೆ ಹಸಿರು ಮಯವಾಗಿರುವ ಕಾರಣ ತಾಲೂಕಿನ ಅಧಿಕ ಮಂದಿ ಸ್ಥಳೀಯರು ತಮ್ಮ ಕಾರು, ಸ್ಕೂಟರ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಜೆ ವೇಳೆ ಬಂಡೀಪುರಕ್ಕೆ ತೆರಳಿ ತಮಿಳು ನಾಡಿನ ಚೆಕ್‌ಪೋಸ್ಟ್ ಕೆಕ್ಕನಹಳ್ಳಿ ಹತ್ತಿರ ಹೋಗಿ ಪರಿಸರ ಹಾಗೂ ಪ್ರಾಣಿಗಳನ್ನು ವೀಕ್ಷಣೆ ಮಾಡಿ ಕತ್ತಲಾಗುವು ದರೊಳಗೆ ವಾಪಸ್ ತೆರಳುತ್ತಿದ್ದಾರೆ. ಇಂತವರ ದಂಡು ಅಧಿಕವಾಗಿದೆ. ತುಂಬಿದ ಕೆರೆ-ಕಟ್ಟೆಗಳು: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಉತ್ತಮ ಮಳೆಯಾಗಿರುವ ಕಾರಣದಿಂದ ಬಹುತೇಕ ಕೆರೆ-ಕಟ್ಟೆಗಳು ಭರ್ತಿಯಾಗಿದೆ. ಇದರಿಂದ ಬೇಸಿಗೆಯಲ್ಲಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಿದೆ. ಜೊತೆಗೆ ಕಾಡ್ಗಿಚ್ಚಿನ ಭಯವೂ ಕೂಡ ದೂರವಾಗಿದೆ.
ಬೇಸಿಗೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಂಡೀಪುರಕ್ಕೆ ಜೀವಕಳೆ ಬಂದಿದೆ. ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಬಹುತೇಕ ಕರೆ-ಕಟ್ಟೆಗಳು ತುಂಬಿರುವ ಹಿನ್ನಲೆ ಕಾಡುಪ್ರಾಣಿಗಳಿಗೆ ನೀರಿನ ದಾಹ ನೀಗುವ ಜೊತೆಗೆ ಸ್ವಚ್ಛಂದ ವಿಹಾರಕ್ಕೆ ಪೂರಕವಾಗಿದೆ.
-ಆರ್.ಕೆ.ಮಧು, ವನ್ಯಜೀವಿ ಛಾಯಾಗ್ರಾಹಕ
ಬಂಡೀಪುರ ಅಭಯಾರಣ್ಯದ ವಾತಾವರಣವು ಅಚ್ಚ ಹಸಿರಾಗಿರುವ ಹಿನ್ನೆಲೆ ವಾರದಲ್ಲಿ ಎರಡು-ಮೂರು ಬಾರಿ ಸ್ನೇಹಿತರ ಜೊತೆ ಹೆದ್ದಾರಿ ಯಲ್ಲಿ ತೆರಳಿ ಪ್ರಕೃತಿ ಸೌಂದರ್ಯವನ್ನು ಸವಿಯು ತ್ತಿದ್ದೇವೆ. ಇದು ಮನಸ್ಸಿಗೆ ಮುದ ನೀಡುತ್ತದೆ.
-ವಿನೋದ್ ರಾಜ್ ಮಿಠಾಯಿ, ಗುಂಡ್ಲುಪೇಟೆ
-ಬಸವರಾಜು ಎಸ್.ಹಂಗಳ