ಮೈಸೂರು: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸುವುದು, ಕಳಸಾ-ಬಂಡೂರಿ ನೀರಾವರಿ ಯೋಜನೆ ಅನುಷ್ಠಾನ ಹಾಗೂ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಬಂದ್ ಜಿಲ್ಲೆಯಲ್ಲಿ ವಿಫಲವಾಗಿದೆ. ನಗರ ಸೇರಿದಂತೆ ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲೂ ಬಂದ್-ಪ್ರತಿಭಟನೆ ಯಾವುದೂ ಇಲ್ಲದೆ ಜನ ಜೀವನ ಎಂದಿನಂತಿತ್ತು.
ಕನ್ನಡ ಒಕ್ಕೂಟದ ಹೆಸರಿನಲ್ಲಿ ವಾಟಾಳ್ ನಾಗರಾಜ್ ಬಂದ್‌ಗೆ ಕರೆ ನೀಡುವಾಗ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ಕೈಗೊಂ ಡಿದ್ದಾರೆ. ಬಂದ್ ಕರೆಗೆ ಮುಂದಿಟ್ಟಿರುವ ಬೇಡಿಕೆಗಳು ಸರಿಯಿದ್ದರೂ ಅವರ ಏಕಪಕ್ಷೀಯ ಧೋರಣೆ ಸರಿಯಲ್ಲ. ಹೀಗಾಗಿ ಬಂದ್ ಬೆಂಬಲಿಸಲಿಲ್ಲ ಎಂದು ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಉದಯವಾಣಿಗೆ ತಿಳಿಸಿದ್ದಾರೆ.
ಬಂದ್ ಕರೆಗೆ ಬೆಂಬಲ ದೊರೆಯದ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳು, ದೇವರಾಜ ಮಾರುಕಟ್ಟೆ, ಬಂಡೀಪಾಳ್ಯದ ಎಪಿಎಂಸಿ ಯಾರ್ಡ್ ಹಾಗೂ ನಗರದ ಬೀದಿ ಬದಿಗಳಲ್ಲಿನ ವ್ಯಾಪಾರ ಎಂದಿನಂತಿತ್ತು. ಸರ್ಕಾರಿ ಕಚೇರಿಗಳಲ್ಲೂ ನೌಕರರು ಎಂದಿನಂತೆ ಕಾರ್ಯನಿರ್ವಹಿಸಿದರು. ನಗರದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿರುವ ಯಾವುದೇ ಕೈಗಾರಿಕೆಗಳು ರಜೆ ಘೋಷಿಸಿರಲಿಲ್ಲ.
ನಗರ ಮತ್ತು ಗ್ರಾಮಾಂತರ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದವು. ರೈಲು ಸಂಚಾರ ಎಂದಿನಂತಿತ್ತು. ಆಟೋಗಳು, ಟಾಂಗಾ ಗಾಡಿಗಳು, ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು. ಚಿತ್ರಮಂದಿರಗಳಲ್ಲಿ ಎಂದಿನಂತೆ ಚಿತ್ರಪ್ರದರ್ಶನ ನಡೆದರೆ, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಜಿಟಿ ಜಿಟಿ ಮಳೆ: ಮುಖ್ಯವಾಗಿ ಯಾವುದೇ ಸಂಘಟನೆಗಳೂ ಬಂದ್ ಕರೆಯನ್ನು ಬೆಂಬಲಿಸದಿದ್ದರಿಂದ ಬಲವಂತವಾಗಿ ಅಂಗಡಿ-ಮುಂಗಟ್ಟುಗಳ ಬಾಗಿಲು ಮುಚ್ಚಿಸುವ ದೃಶ್ಯ ಎಲ್ಲೂ ಕಂಡು ಬರಲಿಲ್ಲ. ಆದರೆ, ಮುಂಗಾರು ಹಂಗಾಮು ಆರಂಭವಾಗಿ ಮೋಡ ಮುಸುಕಿದ ವಾತಾವರಣದ ನಡುವೆ ಆಗಾಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ಜನರು ರಸ್ತೆಗಳಿಯುವ ಸಾಹಸ ಮಾಡದಿರುವುದರಿಂದ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು.
ಇನ್ನು ಉತ್ತಮ ಮಳೆಯಾಗುತ್ತಿರುವುದರಿಂದ ಸತತ ಎರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಜಮೀನಿನಲ್ಲಿರುವುದರಿಂದ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಜನರ ಓಡಾಟ ಕಡಿಮೆ ಇತ್ತು. ಮದುವೆ ಮುಂತಾದ ಶುಭಕಾರ್ಯಗಳು, ಸಾರ್ವಜನಿಕ ಸಮಾರಂಭಗಳಲ್ಲೂ ಜನರ ಸಂಖ್ಯೆ ಕಡಿಮೆ ಇದ್ದದ್ದು ಕಂಡು ಬಂತು.