Advertisement

ಎಲ್ಲಿ ಜನ್ಮ ತಳೆದರು ಶಿರ್ಡಿ ಸಾಯಿಬಾಬಾ?

09:54 AM Jan 21, 2020 | Hari Prasad |

19ನೇ ಶತಮಾನದ ಸಂತ, ಶಿರ್ಡಿ ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಇದ್ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅವರ ಹುಟ್ಟೂರಿನ ಬಗ್ಗೆ ಅನೇಕರು ಅನೇಕ ದಾಖಲೆಗಳನ್ನು ಮುಂದಿಟ್ಟು ವಾದಿಸತೊಡಗಿದ್ದಾರೆ.

Advertisement

ಪರ್ಬಾನಿಯ ಪತ್ರಿ ಗ್ರಾಮಸ್ಥರು ಸಾಯಿ ನಮ್ಮೂರಲ್ಲೇ ಹುಟ್ಟಿರುವುದು ಎನ್ನುವುದಕ್ಕೆ 25 ದಾಖಲೆಗಳಿವೆ ಎನ್ನುತ್ತಿದ್ದಾರೆ. ಇನ್ನು ಬೇರೆ ಬೇರೆ ದಾಖಲೆಗಳು, ಪತ್ರಿಕೆಗಳ ವರದಿಗಳು, ಲೇಖನಗಳು ತಮ್ಮದೇ ಆದ ಪ್ರತ್ಯೇಕ ವಾದಗಳನ್ನು ಮುಂದಿಡುತ್ತಿವೆ.

ಒಟ್ಟಿನಲ್ಲಿ ಸಾಯಿಬಾಬಾರ ಜನ್ಮಸ್ಥಳ ಪತ್ರಿ ಎಂದು ಮೊದಲ ಬಾರಿಗೆ ಉಲ್ಲೇಖಗೊಂಡದ್ದು ರಾಷ್ಟ್ರಪತಿ ಕೋವಿಂದ್‌ 2017ರ ಅಕ್ಟೋಬರ್‌ನಲ್ಲಿ ಅಲ್ಲಿಗೆ ಭೇಟಿ ನೀಡಿ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾಗ. ಅನಂತರ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಪತ್ರಿಯ ಅಭಿವೃದ್ಧಿಗೆ 100 ಕೋಟಿ ರೂ. ಘೋಷಿಸುತ್ತಿದ್ದಂತೆ, ಮತ್ತೂಮ್ಮೆ ವಿವಾದ ಭುಗಿಲೆದ್ದಿದೆ.

1. ‘ಲೋಕಸತ್ತಾ’ ಪತ್ರಿಕೆಯ ವರದಿಯಲ್ಲಿ, ಸಾಯಿ ಜನ್ಮಸ್ಥಳದ ಬಗ್ಗೆ ಹಲವು ಉಲ್ಲೇಖಗಳಿವೆ. ಪರ್ಬನಿ ಜಿಲ್ಲೆಯ ಪತ್ರಿ ಗ್ರಾಮದ ನಿವಾಸಿಗಳು ಹೇಳುವ ಪ್ರಕಾರ, ಸಾಯಿಬಾಬಾ ಅಲ್ಲಿಯೇ ಜನಿಸಿದ್ದರು. ಅದಕ್ಕೆ ಅವರು ‘ಶ್ರೀ ಸಾಯಿ ಸಚ್ಚರಿತ್ರ’ ಪುಸ್ತಕದ ಎಂಟನೇ ಅಧ್ಯಾಯದಲ್ಲಿನ ಅಂಶಗಳನ್ನು ದಾಖಲೆಯಾಗಿ ನೀಡುತ್ತಾರೆ.

2. ಅವರು ತಮಿಳುನಾಡಿನಲ್ಲಿ ಹುಟ್ಟಿದ್ದರು ಎಂಬ ನಂಬಿಕೆಯೂ ಇದೆ. ಈ ವಾದದ ಪ್ರಕಾರ ಅವರ ತಾಯಿಯ ಹೆಸರು ವೈಷ್ಣವಿದೇವಿ ಮತ್ತು ತಂದೆಯ ಹೆಸರು ಅಬ್ಬುಲ್‌ ಸತ್ತಾರ್‌. ಅನಂತರದ ವರ್ಷಗಳಲ್ಲಿ ಅವರು ಶಿರ್ಡಿಗೆ ಬಂದಿದ್ದರು.

Advertisement

3. ‘ಶ್ರೀ ಸಾಯಿ ಲೀಲಾ ತ್ತೈಮಾಸಿಕ’ದ 1952ರ ಅಕ್ಟೋಬರ್‌-ನವೆಂಬರ್‌ ಅವಧಿಯ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಅಂಶದ ಪ್ರಕಾರ, ಸಾಯಿಬಾಬಾರ ತಂದೆ ಸತೇ ಶಾಸ್ತ್ರಿ ಮತ್ತು ತಾಯಿ ಲಕ್ಷ್ಮೀಬಾಯಿ. ತಮಿಳಿನ ಒಂದು ಅಂಶ ಈ ವಾದವನ್ನು ಪುಷ್ಟೀಕರಿಸುತ್ತದೆ.

4. ಗುಜರಾತಿ ಭಾಷೆಯಲ್ಲಿ ಪ್ರಕಟವಾಗುವ ‘ಸಾಯಿ ಸುಧಾ’ ನಿಯತಕಾಲಿಕೆಯಲ್ಲಿ, ಬಾಬಾ ಅವರು ಗುಜರಾತ್‌ ಬ್ರಾಹ್ಮಣ ಕುಟುಂಬದ ದಂಪತಿಗೆ ಜೆರುಸಲೇಮ್‌ನ ಜಾಫಾ ಗೇಟ್‌ ಎಂಬಲ್ಲಿ ಜನಿಸಿದ್ದರು ಎಂದು ಬರೆಯಲಾಗಿದೆ.

5. 1959ರಲ್ಲಿ ಸುಮನ್‌ ಸುಂದರ್‌ ಎಂಬವರು ಬರೆದ ‘ಸಾಯಿ ಲೀಲಾ’ ಪುಸ್ತಕದಲ್ಲಿನ ಮಾಹಿತಿ ಪ್ರಕಾರ, ಬಾಬಾ ಹುಟ್ಟಿದ್ದು ಪತ್ರಿಯಲ್ಲಿ. ಗಗಬಾಹು ಮತ್ತು ದೇವಗಿರಿ ಅಮ್ಮ ಎಂಬವರು ಅವರ ಹೆತ್ತವರು. ಪತ್ರಿ ಎಂಬ ಸ್ಥಳದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದ್ದರೂ, ಅದು ಹಿಂದಿನ ಹೈದರಾಬಾದ್‌ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು ಎಂದು ಬರೆಯಲಾಗಿದೆ.

ಶಿರ್ಡಿ ಬಂದ್‌ ಯಶಸ್ವಿ
ಸಾಯಿಬಾಬಾ ಹುಟ್ಟಿದ ಸ್ಥಳದ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೀಡಿದ ಹೇಳಿಕೆ ಖಂಡಿಸಿ ಮಹಾರಾಷ್ಟ್ರದ ಶಿರ್ಡಿಯಲ್ಲಿ ರವಿವಾರ ಬಂದ್‌ ನಡೆಸಲಾಯಿತು. ಸಾಯಿಬಾಬಾ ದೇಗುಲ ತೆರೆದೇ ಇದ್ದರೂ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಇರಲಿಲ್ಲ.

ಸ್ಥಳೀಯ ಸಂಘಟನೆಗಳು ರ್ಯಾಲಿ ನಡೆಸಿದವು. ಶಿರ್ಡಿಯ ಲೋಕಸಭಾ ಸದಸ್ಯ-ಶಿವಸೇನೆ ನಾಯಕ ಸದಾಶಿವ ಲೊಖಾಂಡೆ ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಸಿಎಂ ಉದ್ಧವ್‌ ಠಾಕ್ರೆ ಸೋಮವಾರ ಈ ಬಗ್ಗೆ ಮುಂಬಯಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಬಿಜೆಪಿಯ ಸ್ಥಳೀಯ ಮುಖಂಡರೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬಂದ್‌ ಯಶಸ್ವಿಯಾಗಿದೆ ಎಂದಿದ್ದಾರೆ. ಶಿರ್ಡಿಯ ಸುತ್ತುಮುತ್ತಲಿನ 25 ಗ್ರಾಮಗಳಲ್ಲಿ ಬಂದ್‌ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next