ಬೀದರ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು. ಕಾಂಗ್ರೆಸ್‌ನವರು ಅಧಿ ಕೃತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರದ ಒಂದೇ ಒಂದು ಹಗರಣ ಬಯಲಿಗೆಳೆದಿದ್ದಾರಾ? ಅವರೆಲ್ಲ ಕೇವಲ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ತಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ ಆರೋಪಿಸಿದರು.
ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಕ್ಷೇತ್ರದ ಹತ್ಯಾಳ, ಹಾರಕೂಡ, ಸಿರಗಾಪುರ, ಗದಲೇಗಾಂವ್, ಮೈಸಲಗಾ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ರಾಜ್ಯ ಅಭಿವೃದ್ಧಿ ಸಾ ಧಿಸಬೇಕಾದರೆ ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅ ಧಿಕಾರಕ್ಕೆ ಬರಬೇಕಿದೆ. ಹಾಗಾಗಿ ಬಸವಕಲ್ಯಾಣದಲ್ಲಿ ಜಾತ್ಯತೀತವಾಗಿ ಎಲ್ಲರೂ ಜೆಡಿಎಸ್‌ಗೆ ಬೆಂಬಲಿಸಿ ಮುನ್ನುಡಿ ಬರೆಯಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಿದ್ದಾರಾ? ಎಂದು ಪ್ರಶ್ನಿಸಿದ ಖಾಶೆಂಪುರ, ಬಸವಕಲ್ಯಾಣದಲ್ಲಿ ಸಾಹೇಬ್, ಬೀದರನಲ್ಲಿ ಬಂಡೆಪ್ಪ, ಬೆಂಗಳೂರಿನಲ್ಲಿ ಕುಮಾರಣ್ಣ ನಾವೆಲ್ಲರೂ ಯಾವತ್ತು ನಿಮ್ಮ ಕೆಲಸ ಮಾಡಲು ಸಿದ್ಧರಾಗಿರುತ್ತೇವೆ ಎಂದು ಭರವಸೆ ನೀಡಿದರು.
ನಮ್ಮದು ರೈತರ ಪರ ಪಕ್ಷ. ನಾನು ಸಹಕಾರಿ ಸಚಿವನಾಗಿದ್ದಾಗ ರಾಜ್ಯದ ಒಳಿತಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದೆ. ಕೃಷಿ ಸಚಿವನಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಪ್ರಧಾನಿ ಮೋದಿ ರೈತರಿಗೆ ಎರಡು ಸಾವಿರ ರೂ. ಕೊಡಲು ಹರಸಾಹಸ ಪಡುತ್ತಿದ್ದಾರೆ. ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆ ರೈತರ ಸಾಲಮನ್ನಾ ಮಾಡಲು ನಾವು ಮುಂದಾದಾಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆಗ ನಾವು ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರಬೇಕು ಅಂದ್ರೆ ರೈತರ ಸಾಲ ಮನ್ನಾಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದು ರೈತರ ಸಾಲ ಮನ್ನಾ ಮಾಡಿದ್ದೆವು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ್, ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಸೇರಿದಂತೆ ಇತರರಿದ್ದರು.