ರಾಮನಗರ: ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಮೋಟೋ ಪ್ರಕರಣ ದಾಖಲಾಗಿದ್ದು, ಅದನ್ನು ಮಾಗಡಿ ಠಾಣೆಗೆ ವರ್ಗಾವಣೆ ಯಾಗಿದೆ. ಶ್ರೀಗಳ ಜತೆ ಒಡನಾಟ ಹೊಂದಿದ್ದವರನ್ನು ವಿಚಾರಣೆ ನಡೆಸಿದ್ದೇವೆ. ಟೆಕ್ನಿಕಲ್ ದಾಖಲೆಗಳನ್ನು ಕೂಡ ಸಂಗ್ರಹಿಸ ಲಾಗುತ್ತಿದೆ. ಇದುವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಹೇಳಿದ್ದಾರೆ.
ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶ್ರೀಗಳು ಒಟ್ಟು 6 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಪೊಲೀಸರಿಗೆ ಎಂದು ಉಲ್ಲೇಖೀಸಿ 3 ಪುಟಗಳ ಡೆತ್ ನೋಟ್ ಇದೆ. ಭಕ್ತರು ಮತ್ತು ಇತರ ಶ್ರೀಗಳನ್ನು ಉಲ್ಲೇಖೀಸಿ ಬರೆದಿದ್ದ 3 ಪುಟಗಳ ಡೆತ್ ನೋಟ್ ಕೂಡ ಸಿಕ್ಕಿದೆ. ಮೊದಲು ಒಂದು ಪುಟ ಬರೆದು ಅದನ್ನು ಹರಿದು ಕಿಟಕಿಯಲ್ಲಿ ಬಿಸಾಡಿದ್ದರು ಎನ್ನಲಾಗಿದೆ. ಒಂದೇ ವಿಷಯವನ್ನು ಎರಡೂ ಪತ್ರಗಳಲ್ಲಿ ಉಲ್ಲೇಖೀಸಲಾಗಿದೆ. ಸದ್ಯ ಎಲ್ಲವನ್ನೂ ವಶಕ್ಕೆ ಪಡೆದಿದ್ದೇವೆ ಎಂದರು.
ಮೊದಲು ಮಠದ ಸಿಬಂದಿಗೆ ಈ ಪತ್ರ ಸಿಕ್ಕಿದ್ದು, ಬಳಿಕ ಅದನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಈಗ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.
20ಕ್ಕೂ ಹೆಚ್ಚು ಮಂದಿ ವಿಚಾರಣೆ :
ಈ ವರೆಗೆ 20ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶ್ರೀಗಳ ವೀಡಿಯೋ ವೈರಲ್ ಬಗ್ಗೆಯೂ ತನಿಖೆ ಮಾಡಲಾಗುವುದು. ವೀಡಿಯೋ ಮಾಡಿಕೊಂಡಿರುವುದು ಉದ್ದೇಶವನ್ನೂ ಬಯಲಿಗೆ ಎಳೆಯಲಾಗುವುದು. ವೀಡಿಯೋದಲ್ಲಿರುವ ಮಹಿಳೆ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಶ್ರೀಗಳ ಪೋನ್‌ನಲ್ಲಿದ್ದ ಕಾಲ್ ಡಿಟೇಲ್ ಅನ್ನೂ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.