Advertisement

ಬಂದ್‌ಗೆ ಮಹಾತತ್ತರ: ಮಹಾರಾಷ್ಟ್ರದೆಲ್ಲೆಡೆ ಹಿಂಸಾಚಾರ

07:05 AM Jan 04, 2018 | Harsha Rao |

ಮುಂಬಯಿ: ಮರಾಠ ಮತ್ತು ದಲಿತ ಸಂಘಟನೆಗಳ ನಡುವಿನ ಘರ್ಷಣೆಯಿಂದಾಗಿ ಸೋಮವಾರದಿಂದಲೂ ವ್ಯಾಪಕ ಪ್ರತಿಭಟನೆ, ಹಿಂಸಾಚಾರ, ಬಂದ್‌ಗೆ ಕಾರಣವಾಗಿದ್ದ ಮಹಾರಾಷ್ಟ್ರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಅತ್ತ ಸಂಸತ್‌ನಲ್ಲೂ ಮಹಾ ಸಂಘರ್ಷದ ವಿಚಾರ ಪ್ರತಿಧ್ವನಿಸಿದ್ದು, ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್‌ ಆಗ್ರಹಿಸಿದೆ. 

Advertisement

ಸೋಮವಾರದ ಹಿಂಸಾಚಾರದಲ್ಲಿ ಮರಾಠ ಸಮುದಾಯಕ್ಕೆ ಸೇರಿದ ಯುವಕನೊರ್ವ ಸಾವನ್ನಪ್ಪಿದ್ದು, ಇದು ಕೂಡ ಮಂಗಳವಾರದ ಗಲಭೆಗೆ ಕಾರಣವಾಗಿತ್ತು. ಇದಾದ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ  ಪ್ರಕಾಶ್‌ ಅಂಬೇಡ್ಕರ್‌ ನೀಡಿದ್ದ ಬುಧವಾರದ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. 

ಬುಧವಾರ ಬೆಳಗ್ಗೆಯಿಂದಲೂಮುಂಬಯಿ, ನಾಗ್ಪುರ, ಪುಣೆ, ನಾಸಿಕ್‌ ಸೇರಿದಂತೆ ನಾನಾ ಕಡೆಗಳಲ್ಲಿ ಜನಜೀವನ ಸ್ತಬ್ಧವಾಗಿತ್ತು. ರೈಲು, ಬಸ್ಸು ಸೇರಿದಂತೆ ಯಾವುದೇ ವಾಹನಗಳು ರೋಡಿಗಿಳಿಯಲೇ ಇಲ್ಲ. ರಾಜ್ಯಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ರಸ್ತೆ ತಡೆಯನ್ನೂ ನಡೆಸಿವೆ. ಅಲ್ಲೊಂದು ಇಲ್ಲೊಂದು ಕಂಡ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. 

ಬುಧವಾರ ಸಂಜೆ ವೇಳೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು, ಸೋಮವಾರ ಶುರುವಾದ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ತನಿಖೆಗೆ ಆದೇಶ ನೀಡಿದರು. ಈ ಬಳಿಕ ಬಂದ್‌ಗೆ ಕರೆ ನೀಡಿದ್ದ ಪ್ರಕಾಶ್‌ ಅಂಬೇಡ್ಕರ್‌ ಅವರು, ವಾಪಸ್‌ ಪಡೆದರು. 5 ಗಂಟೆ ನಂತರಮುಂಬ ಯಿ ಸೇರಿದಂತೆ ಎಲ್ಲೆಡೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂತು. 

ಸಂಸತ್‌ನಲ್ಲೂ ಗದ್ದಲ: ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನಿಬಾಬಾ ರೀತಿ ವರ್ತಿಸುವುದು ಸರಿಯಲ್ಲ ಎಂದು ಟೀಕಿಸಿದರು.  ಇದಕ್ಕೆ ಪ್ರತ್ಯುತ್ತರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್‌, ಸಮಾಜವನ್ನು ಒಡೆಯುವುದು ಕಾಂಗ್ರೆಸ್‌ನ ಕೆಲಸ.

Advertisement

ಬಿಜೆಪಿ ಈ ರೀತಿ ಎಂದೂ ಸಮಾಜವನ್ನು ಇಬ್ಭಾಗ ಮಾಡಿಲ್ಲ ಎಂದು ಹೇಳಿದರು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಈ ಗದ್ದಲದಿಂದಾಗಿ ಮೂರ್ನಾಲ್ಕು ಬಾರಿ ಕಲಾಪವನ್ನು ಮುಂದೂಡ ಬೇಕಾಯಿತು. ಅತ್ತ ರಾಜ್ಯಸಭೆಯಲ್ಲೂ ಕಾಂಗ್ರೆಸ್‌, ಬಿಎಸ್‌ಪಿ, ಟಿಎಂಸಿ ಸದಸ್ಯರು ಕಿಡಿಕಾರಿದರು.

ಮೇವಾನಿ, ಖಾಲಿದ್‌ ವಿರುದ್ಧ ಕೇಸು: ಡಿ.31ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಮತ್ತು ಜೆಎನ್‌ಯು ವಿವಿ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ವಿರುದ್ಧ ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರ ಗಲಭೆ ಹಿಂದೆ ದೇಶ ವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಆರೆಸ್ಸೆಸ್‌ ಆರೋಪಿಸಿದೆ. 

ಹಿಂಸೆಗೆ ಪ್ರಚೋದಿಸಿರುವವರ ಬಂಧನ?
ಈ ಮಧ್ಯೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರಾದ ಮಿಲಿಂದ್‌ ಎಕೊºàಟೆ ಮತ್ತು ಸಂಭಾಜಿ ಭಿಡೆಯವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಸೋಮವಾರ ಮೆಹರ್‌ ಸಮುದಾಯದವರು ಭೀಮಾ-ಕೋರೋಗಾಂವ್‌ನಲ್ಲಿ ಯುದ್ಧದ 200ನೇ ವರ್ಷಾಚರಣೆಯಲ್ಲಿ ತೊಡಗಿದ್ದಾಗ, ಇದಕ್ಕೆ ಅಡ್ಡಿಪಡಿಸಲು ಇವರಿಬ್ಬರೇ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next