ಗುಳೇದಗುಡ್ಡ (ಬಾದಾಮಿ): “ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಚಾಮುಂಡೇಶ್ವರಿ ಆಶೀರ್ವಾದ ಸಿಗುವುದಿಲ್ಲ ಅಂತ ಗೊತ್ತಾಗಿರಬೇಕು, ಅದಕ್ಕೆ ಬಾದಾಮಿಯ ಬನಶಂಕರಿ ದೇವಿ ಕಡೆ ಬರುತ್ತಿದ್ದಾರೆ. ಆದರೆ ಅವರಿಗೆ ಬನ ಶಂಕರಿ ದೇವಿ ಆಶೀ ರ್ವಾದವೂ ಸಿಗುವುದಿಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಾದಾಮಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಕಳೆದ 10 ದಿನಗಳಿಂದ ಪ್ರವಾಸ ಮಾಡುತ್ತಿದ್ದಾರೆ. ಸದ್ಯ ಅವರಿಗೆ ಅಲ್ಲಿನ ಜನರ ಬೆಂಬಲ ಅರ್ಥವಾಗಿರಬಹುದು, ಗೆಲ್ಲುವುದು ಸ್ಸಾಹಸ ಎಂಬುದು ಅರ್ಥವಾಗಿದೆ. ಅದಕ್ಕೆ ಬಾದಾಮಿ ಕಡೆ ಬರುತ್ತಿದ್ದಾರೆ. ಬಾದಾಮಿಗೆ ಸಿಎಂ ಸೇರಿ ಯಾರೇ ಬಂದರೂ ಜೆಡಿಎಸ್ ಅಭ್ಯರ್ಥಿ ಗೆಲುವು ನಿಶ್ಚಿತ’ ಎಂದರು.
ಬಿಎಸ್‌ವೈ ಹಾಗೂ ಸಿದ್ದರಾಮಯ್ಯನವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದಾರೆ. ನಾನೇ ಮುಖ್ಯಮಂತ್ರಿ ಅಂತ ದುರಂಹಕಾರದಿಂದ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಕುಮಾರಸ್ವಾಮಿ 25 ಸ್ಥಾನಗಳನ್ನು ಗೆಲ್ಲೋಕೆ ಆಗೊಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಾನು ಎಲ್ಲೂ ಮುಂದಿನ ಮುಖ್ಯಮಂತ್ರಿ ಅಂತಾಹೇಳಿಲ್ಲ. ಜನರಿಗೆ ಅರ್ಜಿ ಹಾಕಿದ್ದೇನೆ. ರಾಜ್ಯದ ರೈತರ, ನೇಕಾರರ ಆತ್ಮಹತ್ಯೆ ತಡೆಯಲು, ಜನರ ಸಮಸ್ಯೆಗಳ ಪರಿಹಾರಕ್ಕೆ ಈ ಬಾರಿ ಜೆಡಿಎಸ್‌ಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ಚುನಾವಣೆಗೆ ಎಲ್ಲ ತಯಾರಿ ಮಾಡಿದ್ದಾರೆ. 65 ಸಾವಿರ ಮನೆಗಳನ್ನು ತಲುಪಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಬಾದಾಮಿ ಜನತೆ ಅವರ ಕೈ ಹಿಡಿಯಲಿದ್ದಾರೆ ಎಂದರು.
ನಟಿ ಪೂಜಾ ಗಾಂಧಿ ಜೆಡಿಎಸ್ ಸೇರ್ಪಡೆ
ಬೆಂಗಳೂರು: ಮತ್ತೂಬ್ಬ ಸಿನಿಮಾ ತಾರೆ “ತೆನೆ’ ಹೊತ್ತಿದ್ದಾರೆ. “ಮುಂಗಾರು ಮಳೆ’ ಖ್ಯಾತಿಯ ನಟಿ ಪೂಜಾಗಾಂಧಿ ಜೆಡಿಎಸ್
ಸೇರಿದ್ದಾರೆ. ಶನಿವಾರ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ ಪಕ್ಷದ ಧ್ವಜ ನೀಡಿ ಪೂಜಾ ಗಾಂಧಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷ ಸೇರಿದ ಬಳಿಕ ಮಾತನಾಡಿದ ಪೂಜಾ ಗಾಂಧಿ, ನನಗೆ ಜೆಡಿಎಸ್‌ನಲ್ಲಿ ಸಿಕ್ಕಷ್ಟು ಸ್ಥಾನಮಾನ ಯಾವ ಪಕ್ಷದಲ್ಲೂ ಸಿಕ್ಕಿಲ್ಲ. ಪಕ್ಷ ಬಿಟ್ಟು ಮಾಡಿದ ತಪ್ಪಿಗೆ ಎಚ್.ಡಿ. ದೇವೇಗೌಡರು ಹಾಗೂ ಕಾರ್ಯಕರ್ತರಲ್ಲಿ ಕ್ಷಮೆ ಕೇಳುತ್ತೇನೆ ಎಂದರು.