ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಅಹಮದ್ ನಾಯಕನಾಗಿ ಅಭಿನಯಿಸಿರುವ “ಬನಾರಸ್’ ಸಿನಿಮಾ ಇದೇ ನವೆಂಬರ್ 4ಕ್ಕೆಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಸದ್ಯ “ಬನಾರಸ್’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಸಿನಿಮಾವನ್ನು ಪ್ರೇಕ್ಷಕರಿಗೆತಲುಪಿಸುವ ಅಂತಿಮ ಕಸರತ್ತು ನಡೆಸುತ್ತಿದೆ.
ಇದರ ನಡುವೆಯೇ “ಬನಾರಸ್’ ಚಿತ್ರತಂಡದ ಕಡೆಯಿಂದ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಬನಾರಸ್’ ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದ್ದು, ಇದೀಗ ಸಿನಿಮಾದ ಬಹುತೇಕ ಎಲ್ಲ ಭಾಷೆಗಳ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.
ಇತ್ತೀಚೆಗಷ್ಟೇ “ಬನಾರಸ್’ ಸಿನಿಮಾದ ಮಲೆಯಾಳಂ ಅವರತರಣಿಕೆಯ ಹಕ್ಕುಗಳನ್ನು ಕೇರಳದ ಪ್ರತಿಷ್ಟಿತ ಸಿನಿಮಾ ವಿತರಣಾ ಸಂಸ್ಥೆ “ಮಲಕುಪಡಮ್ ರಿಲೀಸ್’ ಸಂಸ್ಥೆ ಪಡೆದುಕೊಂಡಿತ್ತು. ಅದರ ಬೆನ್ನಲ್ಲೇ, “ಬನಾರಸ್’ ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ್ ಸಾರಥ್ಯದ ವಿತರಣಾ ಸಂಸ್ಥೆ “ಡಿ ಬೀಟ್ಸ್’ ಪಡೆದುಕೊಂಡಿದೆ.
ಇದಲ್ಲದೆ “ಬನಾರಸ್’ ಸಿನಿಮಾದ ಹಿಂದಿ ಅವತರಣಿಕೆಯ ಹಕ್ಕುಗಳು ಕೂಡ ಮಾರಾಟವಾಗಿದ್ದು, ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಒಡೆತನದ “ಪನೋರಮಾ ಸ್ಟುಡಿಯೋಸ್’ ಸಂಸ್ಥೆ “ಬನಾರಸ್’ ಸಿನಿಮಾದ ಹಿಂದಿ ರೈಟ್ಸ್ ಕೊಂಡುಕೊಂಡಿದೆ ಎಂದಿವೆ ಚಿತ್ರತಂಡದ ಮೂಲಗಳು.
ಮೊದಲ ಬಾರಿಗೆ ಝೈದ್ ಖಾನ್ ನಾಯಕನಾಗಿ ಕಾಣಿಸಿಕೊಂಡಿರುವ “ಬನಾರಸ್’ ಸಿನಿಮಾದಲ್ಲಿ ಕಾಲಿಗೆ ಚಕ್ರ ಸೋನಲ್ ಮೊಂತೇರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ತಿಲಕರಾಜ್ ಬಲ್ಲಾಳ್ ನಿರ್ಮಾಣದಲ್ಲಿ ಮೂಡಿಬಂದಿರುವ “ಬನಾರಸ್’ ಸಿನಿಮಾಕ್ಕೆ ಜಯತೀರ್ಥ ನಿರ್ದೇಶನವಿದೆ.