Advertisement

ಬಾಣಂತಿ ನೀ ಏನ್‌ ತಿನ್ತಿ?

03:45 AM May 10, 2017 | |

ಈ ಕಾಲದಲ್ಲಿ ಬಾಣಂತನ ಮುಗಿಸಿದ ಹೆಣ್ಣಿಗೆ ಬೇಗನೆ ಸೊಂಟ ನೋವು ಬರುವುದು, ಅಪೌಷ್ಟಿಕತೆ ಕಾಡುವುದು ಮಾಮೂಲಿ. ಅದರಲ್ಲೂ ವರ್ಕಿಂಗ್‌ ವುಮನ್‌ ಆದವರಿಗೆ ಸಮಸ್ಯೆಗಳು ಇನ್ನೂ ಜಾಸ್ತಿ. ಮೊದಲೆಲ್ಲ ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ಅತಿ ವಿರಳವಾಗಿತ್ತು. ಹೆರಿಗೆಗೆ ತವರು ಮನೆಗೆ ಹೋಗಿ ಐದು ತಿಂಗಳು ಬಾಣಂತನ ಮಾಡಿಸಿಕೊಂಡು ಗಂಡನ ಮನೆಗೆ ತೆರಳುತ್ತಿದ್ದರು. ಈಗ ಅಂಥ ಅವಕಾಶವೂ ಕೆಲವು ಸ್ತ್ರೀಯರಿಗೆ ಸಿಗುತ್ತಿಲ್ಲ. 

Advertisement

ಹೆರಿಗೆಯ ನಂತರ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ನಡೆದಾಡಲೂ ಆಗದಂಥ ಪರಿಸ್ಥಿತಿಯಲ್ಲಿ ಅವಳಿರುತ್ತಾಳೆ. ಇಂಥ ಸಮಯದಲ್ಲಿ ಬಾಣಂತಿಗೆ ಎಷ್ಟು ಗುಣಮಟ್ಟದ ಆಹಾರ, ಆರೈಕೆ ಸಿಗುತ್ತದೆಯೋ ಅದರ ಮೇಲೆ ಅವಳ ಆರೋಗ್ಯ ನಿರ್ಧಾರವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಾಣಂತಿಯ ಆರೈಕೆ ಬಹಳ ವಿಶಿಷ್ಟವಾಗಿರುತ್ತಿತ್ತು. ಮೊದಲೆಲ್ಲ ಹೊರಸಿನ (ಸೆಣಬಿನ ಮಂಚ) ಮೇಲೆ ತಾಯಿ- ಮಗುವನ್ನು ಮಲಗಿಸುತ್ತಿದ್ದರು. ತಾಯಿಗೆ ಕೊಬ್ಬರಿ ಖಾರ ಕೊಡುತ್ತಿದ್ದರು. ಅದರಲ್ಲಿ ಒಣಕೊಬ್ಬರಿ, ಬೆಲ್ಲ, ಒಣಶುಂಠಿ, ಗೇರುಬೀಜ, ಏಲಕ್ಕಿ, ಲವಂಗ ಇತ್ಯಾದಿ ಪದಾರ್ಥಗಳನ್ನು ಬೆರೆಸುತ್ತಿದ್ದರು. ಇದರ ಸೇವನೆಯಿಂದ ಬಾಣಂತಿಯು ತಾನು ಕಳೆದುಕೊಂಡ ಶಕ್ತಿಯನ್ನೆಲ್ಲ ಮರಳಿ ಪಡೆಯುತ್ತಾಳೆ. ರಕ್ತದ ವೃದ್ಧಿಯಾಗುತ್ತದೆ. ಸೊಂಟ, ಮೊಣಕಾಲು ಗಟ್ಟಿಯಾಗುತ್ತವೆ.

ಬಾಣಂತಿಗೆ ಆಳ್ವಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಕುದಿಸಿ ಅದಕ್ಕೆ ಬೆಲ್ಲ, ಸ್ವಲ್ಪ ತುಪ್ಪ ಸೇರಿಸಿ ಕುಡಿಯಲು ಕೊಡುತ್ತಿದ್ದರು. ಆಳ್ವಿಯಿಂದ ಬಾಣಂತಿಯ ನಡು ಗಟ್ಟಿಯಾಗುತ್ತದೆ. ಹೆರಿಗೆಯ ನಂತರ ನಡುವಿನ ಬಲಹೀನತೆಯಿಂದ ಅವಳಿಗೆ ನಿಲ್ಲಲೂ ಆಗುವುದಿಲ್ಲ. ಆದ್ದರಿಂದ ಆಳ್ವಿಯ ಸೇವನೆ ಬಹಳ ಒಳ್ಳೆಯದು. ಕೇವಲ ಬಾಣಂತಿಯಷ್ಟೇ ಅಲ್ಲದೇ ಯಾವುದೇ ವಯಸ್ಸಿನ ಹೆಣ್ಣುಮಕ್ಕಳೂ ಇದನ್ನು ಸೇವಿಸಬಹುದು. ಪ್ರತಿ ತಿಂಗಳ ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವ ಆಗುವುದರಿಂದ ಇದರ ಸೇವನೆಯು ಮತ್ತೆ ಶಕ್ತಿಯನ್ನು ಒದಗಿಸುತ್ತದೆ. ಇದು ಹಳ್ಳಿಯಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪಟ್ಟಣದ ಅನೇಕರಿಗೆ ತಿಳಿದಿರುವುದಿಲ್ಲ. ಆಳ್ವಿಯ ಸೇವನೆಯಿಂದ ಕೇವಲ ಬಾಣಂತಿಗಷ್ಟೇ ಅಲ್ಲದೆ ಮಗುವಿಗೂ ತಾಯಿ ಹಾಲಿನ ಮೂಲಕ ಆಹಾರವಾಗಿ ದೊರೆತು, ಅದು ಆರೋಗ್ಯಯುತವಾಗುತ್ತದೆ.

ಆಳ್ವಿ ತಯಾರಿಸುವ ವಿಧಾನ
ರಾತ್ರಿ ಆಳ್ವಿಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ 15 ನಿಮಿಷ ಕುದಿಸಲು ಇಡಬೇಕು. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ಕುದಿಸಬೇಕು. ಇದಕ್ಕೆ ಸ್ವಲ್ಪ ತುಪ್ಪ ಅಥವಾ ಹಾಲು ಸೇರಿಸಬೇಕು. ಈಗ ರುಚಿಯಾದ ಆಳ್ವಿ ಸವಿಯಲು ಸಿದ್ಧ. ಬಿಸಿ ಇದ್ದಾಗಲೇ ಕುಡಿಯಬೇಕು.

ಬೆಲ್ಲದ ಅಡುಗೆಯೇ ಬೆಸ್ಟ್‌
ಉತ್ತರ ಕರ್ನಾಟಕದ ಕಡೆ ಬಾಣಂತಿಗೆ ಹೆಚ್ಚಾಗಿ ಬೆಲ್ಲದ ಅಡುಗೆಯನ್ನೇ ನೀಡುತ್ತಾರೆ. ಹುಗ್ಗಿ, ಆಳ್ವಿ, ಕೊಬ್ಬರಿ ಖಾರ ಸೇವನೆಯು ಬಾಣಂತಿಗೆ ಬಲ ನೀಡುತ್ತವೆ. ಆದರೆ ಈ ಆಧುನಿಕ ಕಾಲದಲ್ಲಿ ಫಾಸ್ಟ್‌ಫ‌ುಡ್‌- ಜಂಕ್‌ಫ‌ುಡ್‌ನ‌ಂಥ ಆಹಾರ ಸೇವನೆಯಿಂದ ಬಾಣಂತಿಗೆ ಸೂಕ್ತ ಆರೈಕೆ ಸಿಗುತ್ತಿಲ್ಲ. 30- 40ರ ವಯಸ್ಸಿನಲ್ಲಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವು ಕಾಯಿಲೆಗಳು ಆಕೆಯನ್ನು ಅಪ್ಪಿಕೊಳ್ಳುವ ಅಪಾಯವಿರುತ್ತದೆ. 

Advertisement

ಸುವರ್ಣ ಶಿ. ಕಂಬಿ, ಗದಗ

Advertisement

Udayavani is now on Telegram. Click here to join our channel and stay updated with the latest news.

Next