Advertisement

ಬೆಂ.ಗ್ರಾ.ಜಿಲ್ಲೆಯಲ್ಲಿ ಬಾಳೆಹಣ್ಣು ದುಬಾರಿ

04:07 PM Jul 12, 2022 | Team Udayavani |

ದೇವನಹಳ್ಳಿ: ಯಥೇಚ್ಚವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿನ ಹವಾಮಾನ ವೈಪರಿತ್ಯ ಹಾಗೂ ಪೂರ್ವ ಮುಂಗಾರಿನ ಮಳೆಗೆ ಬಾಳೆ ಇಳುವರಿ ಕುಸಿತವಾಗಿದೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಳೆ ಬೆಳೆಯುವ ರೈತರಿದ್ದು, ಮಳೆ ಯಥೇಚ್ಚವಾಗಿ ಬರುತ್ತಿರುವುದರಿಂದ ಬಾಳೆ ಹಣ್ಣಿನ ಬೆಳೆಗೆ ಹೆಚ್ಚಿನ ಹಾನಿ ಉಂಟಾ ಗುತ್ತಿದೆ. ಮಾರುಕಟ್ಟೆಗಳಲ್ಲಿ ಪಚ್ಚ ಬಾಳೆಹಣ್ಣು 20ರಿಂದ 30 ರೂ.ಗೆ ಸಿಗುತ್ತಿತ್ತು. ಆದರೆ, ಈಗ ಬರೋಬ್ಬರಿ 50 ರೂ., ಕೆ.ಜಿ.ಗೆ ಆಗಿದೆ.

ಕೆ.ಜಿ. ಸುಗಂಧ ಬಾಳೆಹಣ್ಣು 60 ರೂ.ಗೆ ಸಿಗುತ್ತಿದ್ದಿದ್ದು, ಈಗ 90 ರೂ.ಗೆ ದಾಟಿದೆ. ಜಿಲ್ಲೆಯಲ್ಲಿ ಪ್ರಮುಖ ಹಣ್ಣಿನ ಬೆಳೆಯಾದ ಮಾವು ಸುಮಾರು 8 ಸಾವಿರ ಹೆಕ್ಟೇರ್‌, ಹಲಸು 2 ಸಾವಿರ ಹೆಕ್ಟೇರ್‌, ಏಲಕ್ಕಿ, ಪಚ್ಚಬಾಳೆ ಸೇರಿ 1159 ಹೆಕ್ಟೇರ್‌ ಬಾಳೆ ಬೆಳೆಯಲಾಗುತ್ತಿದೆ. ಎರಡು ವಾರದಿಂದ 30 ರಿಂದ 40 ರೂ. ಇದ್ದ ಬಾಳೆ ಹಣ್ಣಿನ ಬೆಲೆ ಈಗ 70 ರಿಂದ 80 ರೂ.ಗೆ ತಲುಪಿದೆ.

ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ರೈತರು ತೋಟಗಾರಿಕೆ ಮತ್ತು ಕೃಷಿ ಮತ್ತು ರೇಷ್ಮೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಜ್ಯದಲ್ಲಿ ಕೃಷಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಇದೀಗ ಬಾಳೆಯ ಸರದಿ ಬಂದಿದ್ದು, ಹೆಚ್ಚಾಗಿ ಬಾಳೆ ಬೆಳೆಯುವ ಬಯಲುಸೀಮೆಯಾದ ರಾಮನಗರ, ಬೆಂಗಳೂರು ಸೇರಿದಂತೆ ವಿವಿಧೆಡೆ ರೈತರು ಹವಾಮಾನ ವೈಪರಿತ್ಯ, ಮಳೆಯಿಂದ ಉಂಟಾಗುವ ಬೆಳೆಹಾನಿ, ಕಾಯಿಲೆಗಳಿಂದ ಫ‌ಸಲಿನ ಹಾನಿಯನ್ನು ತಪ್ಪಿಸಲು ಬಾಳೆ ಬೆಳೆಯುವ ಪ್ರದೇಶ ಇಳಿಮುಖವಾಗುತ್ತಿದೆ ಎಂದು ರೈತರು ಹೇಳುತ್ತಾರೆ.

Advertisement

ಸರಬರಾಜು ಕುಸಿತದಿಂದ ಬೇಡಿಕೆ ಹೆಚ್ಚಳ: ಪ್ರತಿ ವರ್ಷವೂ ಜೂನ್‌ನಿಂದ ಅಕ್ಟೋಬರ್‌ ತನಕ ಬಾಳೆ ಹಣ್ಣಿನ ಬೆಲೆಯು ಮಾರುಕಟ್ಟೆಯಲ್ಲಿ ಏರಿಕೆ ಕಂಡರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಇಷ್ಟರಮಟ್ಟಿಗೆ ಏರಿಕೆ ಕಂಡಿ ರಲಿಲ್ಲ. ಹಲವೆಡೆ ಮಳೆಗೆ ಬಾರಿ ಹಾನಿಯಾಗಿ ಸರಬ ರಾಜು ಕುಸಿತವಾಗಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಜೂನ್‌ ತಿಂಗಳಿನಲ್ಲಿ ಬಾಳೆ ಹಣ್ಣಿನ ಬೆಲೆ ಏರಿಕೆ ಕಂಡಿತ್ತು. ಮುಂಬರುವ ಹಬ್ಬಗಳ ಸಾಲು ದೂರ ಇರುವಂತೆಯೇ ಜಿಲ್ಲೆಯಲ್ಲಿ ಬಾಳೆಹಣ್ಣಿನ ಚಿಲ್ಲರೆ ಮಾರುಕಟ್ಟೆ ಬೆಲೆ ಏರಿಕೆ ಆಗುತ್ತಿದೆ. ಶ್ರಾವಣ ಮಾಸದಲ್ಲಿ ವರಲಕ್ಷ್ಮೀ ಹಬ್ಬ ಬರಲಿದ್ದು, ಆ ವೇಳೆಗೆ ಮತ್ತಷ್ಟು ಏರುವ ಸಾಧ್ಯತೆ ಕಂಡುಬರುತ್ತಿದೆ.

ಮಾರುಕಟ್ಟೆ ದರಕ್ಕಿಂತ ಚಿಲ್ಲರೆ ಅಂಗಡಿಗಳಲ್ಲಿ ಬಾಳೆಹಣ್ಣು ದರ ಮತ್ತಷ್ಟು ಹೆಚ್ಚಾಗಲಿದ್ದು, ಗ್ರಾಹಕರಿಗೆ ಬೆಲೆಯಲ್ಲಿ ಮತ್ತಷ್ಟು ಬಿಸಿ ನೀಡಲಿದೆ.

ಮಾವು, ಹಲಸಿನ ಫ‌ಸಲು ಇಳಿಕೆ: ಪ್ರತಿ ವರ್ಷ ಮೇ ತಿಂಗಳಿನಿಂದ ಸುಮಾರು ಜುಲೈವರೆಗೆ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ ಮಾರಾಟ ಹೆಚ್ಚಾಗಿರುತ್ತದೆ. ಈ ಬಾರಿ ತೇವಾಂಶ, ಅಕಾಲಿಕ ಮಳೆ ಸೇರಿದಂತೆ ಅನೇಕ ಕಾರಣಗಳಿಂದ ಮಾವು ಮತ್ತು ಹಲಸಿನ ಫ‌ಸಲು ಇಳಿಕೆ ಯಾಗಿದೆ. ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳಿಗೆ ಬೇಡಿಕೆ ಬಂದಿರುತ್ತಿದೆ.

ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವಗಳು ನಡೆಯುತ್ತಿರುವುದರಿಂದ ಊಟಕ್ಕೆ ಬಾಳೆಹಣ್ಣು ಇಡುತ್ತಾರೆ. ಪ್ರತಿ ಶುಭಕಾರ್ಯಗಳಿಗೆ ಬಾಳೆಹಣ್ಣನ್ನು ಹೆಚ್ಚು ಬಳಸುತ್ತಾರೆ. ಗೊನೆಗಟ್ಟಲೆ ಕೊಳ್ಳುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ.

ಬಾಳೆಹಣ್ಣಿನ ಬೆಲೆ ಏರಿಕೆಯಾಗಿದೆ. ಆಂಧ್ರ, ತಮಿಳುನಾಡುಗಳಿಂದ ಬಾಳೆಹಣ್ಣು ತರಿಸಿ ಮಾರಾಟ ಮಾಡಲಾಗುತ್ತಿದೆ. ಮಳೆ ಹೆಚ್ಚು ಬರುತ್ತಿರುವುದರಿಂದ ಸರಿ ಸಮಯಕ್ಕೆ ಬಾಳೆಹಣ್ಣು ಮಾರುಕಟ್ಟೆಗೆ ಬರದೇ ಇರುವುದರಿಂದ ಹಣ್ಣಿನ ಬೆಲೆ ಏರಿಕೆಯಾಗಿದೆ. – ಶ್ರೀನಿವಾಸಮೂರ್ತಿ, ಬಾಳೆಹಣ್ಣು ವ್ಯಾಪಾರಿ

ಮಳೆ ಬರುತ್ತಿರುವುದರಿಂದ ಬಾಳೆ ಬೆಳೆಗೆ ರೋಗಗಳು ಬರುತ್ತವೆ. ಬಾಳೆಹಣ್ಣು ಬೆಲೆ ಏರಿಕೆಯಾಗಿದ್ದರೂ ರೈತರಿಗೆ ಮಾರುಕಟ್ಟೆಯಲ್ಲಿ ಸರಿ ಬೆಂಬಲ ಬೆಲೆ ಸಿಗುತ್ತಿಲ್ಲ. ಬಾಳೆಹಣ್ಣಿನ ಬೆಳೆಗೆ ಔಷಧಿ ಸಿಂಪರಣೆ ಹಾಗೂ ಕೂಲಿಗಾರರಿಗೆ ಖರ್ಚು ಬರುವುದಿಲ್ಲ. ಮಳೆ ಯಥೇಚ್ಚವಾಗಿ ಬರುತ್ತಿದ್ದು, ಇದರಿಂದ ಕಾಂಡರೋಗ ಬರುವುದರಿಂದ ಬಾಳೆ ಬೆಳೆ ನಾಶವಾಗುತ್ತಿವೆ. – ಪುರುಷೋತ್ತಮ್‌, ಬಾಳೆ ಬೆಳೆಗಾರ

ಈ ವರ್ಷ ಮಾವು, ಹಲಸು ಫ‌ಸಲು ಕಡಿಮೆಯಾದ ಹಿನ್ನೆಲೆಯಲ್ಲಿ ಬಾಳೆಗೆ ಬೇಡಿಕೆ ಹೆಚ್ಚಾಗಿದೆ. ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ನಮ್ಮ ಜಿಲ್ಲೆಯಲ್ಲಿ ಬಾಳೆ ಬೆಳೆಯುವವರ ಸಂಖ್ಯೆ ಕಡಿಮೆಯಿದೆ. ಜಿಲ್ಲೆಯಲ್ಲಿ 1159 ಹೆಕ್ಟೇರ್‌ ಬಾಳೆ ಬೆಳೆಯಲಾಗುತ್ತಿದೆ. ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಬಾಳೆ ಬೆಳೆಗೆ ಕಾಂಡರೋಗ ಬರಲಿದ್ದು, ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.- ಗುಣವಂತ, ಉಪನಿರ್ದೇಶಕ, ಜಿಲ್ಲಾ ತೋಟಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next