ಹಾವೇರಿ: ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಹೈವೋಲ್ಟೆಜ್ ಕಣ ಎನಿಸಿದ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವಿ ಮುಖಂಡ, ಮಾಜಿ ಶಾಸಕ ಯು.ಬಿ. ಬಣಕಾರ ನಡೆ ಕುತೂಹಲ ಕೆರಳಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲ ಎದುರು ಕೇವಲ 555 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಯು.ಬಿ. ಬಣಕಾರ, ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದವರು. ಅವರು ಈ ಉಪಚುನಾವಣೆಯಲ್ಲಿ ಯಾವ ನಿಲುವು ತೋರುತ್ತಾರೆ ಎಂಬುದು ನಿಗೂಢವಾಗಿದೆ.
ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಇಬ್ಬರೂ ಹಿರೇಕೆರೂರು ಕ್ಷೇತ್ರದಲ್ಲಿ ರಾಜಕೀಯ ಬದ್ಧವೈರಿಗಳಂತೆ ನಡೆದುಕೊಂಡು ಬಂದವರು. ಈಗ ಬಿ.ಸಿ. ಪಾಟೀಲ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಬೆಂಬಲಿಸಿ, ಈಗಷ್ಟೇ ತೆರೆಗೆ ಬರುತ್ತಿದ್ದಾರೆ. ಈವರೆಗೆ ರಾಜಕೀಯ ಕಡು ವಿರೋಧಿಗಳಾದ ಇವರಿಬ್ಬರೂ ಒಂದೇ ಪಕ್ಷದಲ್ಲಿ ಹೊಂದಾಣಿಕೆ ಮಾಡಿಕೊಂಡು ಇರಲು ಸಾಧ್ಯವೇ? ಉಪಚುನಾವಣೆಗಾಗಿ ತಾತ್ಕಾಲಿಕ ಹೊಂದಾಣಿಕೆ ಮಾಡಿಕೊಂಡರೂ ಇಬ್ಬರ ಮುಂದಿನ ರಾಜಕೀಯ ಭವಿಷ್ಯಕ್ಕೆ ಸಹಕಾರಿಯೋ, ಮಾರಕವೋ ಎಂಬ ವಿಮರ್ಶೆ ಶುರುವಾಗಿದೆ.
ಬಿಸಿಪಿ ಬೆಂಬಲಕ್ಕೆ ವಿರೋಧ: ಬಿಜೆಪಿಯನ್ನು ಬೆಂಬಲಿಸಲು ಪಾಟೀಲರ ಕೆಲ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಹಿರಂಗವಾಗಿಯೇ ಒಪ್ಪಿಗೆ ಸೂಚಿಸುತ್ತ ಬಂದಿದ್ದಾರೆ. ಇನ್ನು ಪಾಟೀಲ ಸಹ ತಮ್ಮ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಚರ್ಚಿಸಿಯೇ ಪಕ್ಷ ಬದಲಾಯಿಸುವ ನಿರ್ಧಾರ ಕೈಗೊಂಡಿರುವುದಾಗಿ ಅನೇಕ ಬಾರಿ ಹೇಳಿದ್ದಾರೆ. ಹೀಗಾಗಿ ಬಿ.ಸಿ.ಪಾಟೀಲ ಬಿಜೆಪಿ ಸೇರುವ ಬಗ್ಗೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಅಷ್ಟಾಗಿ ವಿರೋಧವಿಲ್ಲ. ಆದರೆ, ಬಿ.ಸಿ.ಪಾಟೀಲ ಬಿಜೆಪಿಗೆ ಬಂದರೆ ಅವರನ್ನು ಬೆಂಬಲಿಸಲು ಯು.ಬಿ.ಬಣಕಾರ ಅಭಿಮಾನಿಗಳು, ಕಾರ್ಯಕರ್ತರು ಸುತಾರಾಂ ಸಿದ್ಧರಿಲ್ಲ. ಇಷ್ಟು ದಿನ ವಿರೋಧ ಮಾಡಿ ಈಗ ಒಮ್ಮೆಲೇ ಒಪ್ಪಿಕೊಳ್ಳುವುದು ಕಷ್ಟ ಹಾಗೂ ಅದು ಸಾಧ್ಯವೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸ್ಪರ್ಧೆಗೆ ಒತ್ತಡ: ಬದಲಾದ ರಾಜಕೀಯ ಸ್ಥಿತ್ಯಂತರ ಏನೇ ಇದ್ದರೂ ಉಪಚುನಾವಣೆಯಲ್ಲಿ ಯು.ಬಿ.ಬಣಕಾರ ಸ್ಪರ್ಧೆಗೆ ಇಳಿಯಲೇಬೇಕು ಎಂದು ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಉಪಚುನಾವಣೆಯಲ್ಲಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಲೇಬೇಕು. ಒಂದು ವೇಳೆ ಕೊಡದಿದ್ದರೆ ಪಕ್ಷೇತರವಾಗಿ ಸ್ಪಧಿಸಿ ಗೆದ್ದು ಕ್ಷೇತ್ರದಲ್ಲಿ ಹಿಡಿತ ಸಾಧಿ ಸಬೇಕು ಹಾಗೂ ಕ್ಷೇತ್ರದಲ್ಲಿಯೇ ಮುಂದು ವರಿಯಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಆಮಿಷವೊಡ್ಡಿದರೆ ಅದಕ್ಕೂ ಜಗ್ಗಬಾರದು. ಜನಸಂಪರ್ಕದಲ್ಲಿಯೇ ಇದ್ದು ಭವಿಷ್ಯದಲ್ಲಿಯೂ ಕ್ಷೇತ್ರ ತಮ್ಮ ಹಿಡಿತದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಉಪಚುನಾವಣೆಯಲ್ಲಿ ಯು.ಬಿ.ಬಣಕಾರ ಸ್ಪರ್ಧೆ ಮಾಡಲೇಬೇಕು ಎಂದು ಕಾರ್ಯಕರ್ತರು ಪಟ್ಟುಹಿಡಿದ್ದಾರೆ. ಇದನ್ನು ಬಣಕಾರ ಹೇಗೆ ನಿಭಾಯಿಸುತ್ತಾರೆ ಎಂಬುದು ಕೌತುಕ ಸೃಷ್ಟಿಸಿದೆ.
ಲಾಭಕ್ಕಾಗಿ ಕೈ ಹೊಂಚು: ಇಬ್ಬರ ನಡುವಿನ ಭಿನ್ನಮತದ ಲಾಭ ಪಡೆಯಲು ಕಾಂಗ್ರೆಸ್ ಹೊಂಚು ಹಾಕಿದೆ. ಒಂದು ಕಡೆ ಬಣಕಾರ ಅವರನ್ನು ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿದೆ. ಆದರೆ, ಯು.ಬಿ.ಬಣಕಾರ ಮಾತ್ರ ಕಾಂಗ್ರೆಸ್ ಸೇರುವುದು ಶೇ.95ರಷ್ಟು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಪಕ್ಷಕ್ಕೆ ಮೋಸ ಮಾಡಿದ ಬಿ.ಸಿ.ಪಾಟೀಲ ಸೋಲಿಸುವುದೇ ಮುಖ್ಯ ಗುರಿಯಾಗಿದೆ. ಹೀಗಾಗಿ ಒಂದು ವೇಳೆ ಬಣಕಾರ ಪಕ್ಷೇತರವಾಗಿ ಸ್ಪ ರ್ಧಿಸಿದರೆ ಅವರಿಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ಸಿಕ್ಕರೂ ಸಿಗಬಹುದು ಎಂಬ ರಾಜಕೀಯ ಲೆಕ್ಕಾಚಾರವೂ ನಡೆದಿದೆ.
2013ರ ಚುನಾವಣೆ ಮಾದರಿ: 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಒಡೆದು ಮತಗಳು ಇಬ್ಭಾಗವಾದಾಗ ಯು.ಬಿ. ಬಣಕಾರ ಸ್ವಪ್ರಭಾವ ಬೀರಿ ಗೆದ್ದಿದ್ದರು. ಈ ಚುನಾವಣೆಯಲ್ಲಿ ಯು.ಬಿ.ಬಣಕಾರ 52,623 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ 50,017 ಮತ ಪಡೆದಿದ್ದರು. ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ 2013ರ ಚುನಾವಣೆಯ ಗೆಲುವನ್ನೇ ಮಾದರಿಯಾಗಿಟ್ಟುಕೊಂಡು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಣಕಾರ ಆಪ್ತವಲಯಗಳು ಸ್ಪಷ್ಟಪಡಿಸಿವೆ.
ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿದೆ. ತೀರ್ಪು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
-ಯು.ಬಿ. ಬಣಕಾರ, ಮಾಜಿ ಶಾಸಕ
* ಎಚ್.ಕೆ. ನಟರಾಜ