ರಬಕವಿ-ಬನಹಟ್ಟಿ; ರಬಕವಿ-ಬನಹಟ್ಟಿ ನಗರ ಪ್ರದೇಶಗಳಲ್ಲಿ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಸಂಪೂರ್ಣ ಹಾಳಾಗಿ ಮಕ್ಕಳು ಭಯದ ವಾತಾವರಣದಲ್ಲಿ ಅಕ್ಷರಭ್ಯಾಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ನಗರದ ಲಕ್ಷ್ಮೀ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳು ಇದ್ದು, ಅದರಲ್ಲಿ 4 ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಆಗ ಎಲ್ಲ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕುಳಿತುಕೊಂಡು ಅಕ್ಷರಭ್ಯಾಸ ಮಾಡುತ್ತಾರೆ. ಇಲ್ಲಿ ಒಟ್ಟು 152 ದ್ಯಾರ್ಥಿಗಳ ಹಾಜರಾತಿ ಇದ್ದು, ಪ್ರತಿ ದಿನ 125ಕ್ಕೂ ಅಧಿಕ ಸಂಖ್ಯೆಯ ಮಕ್ಕಳ ಹಾಜರಾತಿ ಇದೆ.
ಏಳು ಜನ ಶಿಕ್ಷಕರಿದ್ದಾರೆ. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವುದರಿಂದ ಅನೇಕ ಶ್ರೀಮಂತರ ಮಕ್ಕಳು ಸಹ ಈ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಉತ್ತಮ ಶಿಕ್ಷಕರ ತಂಡ ಇರುವುದರಿಂದ ಸರ್ಕಾರ ಮಾರ್ಗದರ್ಶನ ನೀಡಿರುವ ಎಲ್ಲ ಶೈಕ್ಷಣಿಕ ಅಭಿವೃದ್ಧಿಯ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ.
ಈ ಶಾಲೆಯಲ್ಲಿ ಏಳನೇ ತರಗತಿ ಪಾಸಾಗಿ ಹೊರಹೋಗುವ ಮಕ್ಕಳಿಗೆ ಖಾಸಗಿ ಪೌಢ ಶಾಲೆಯವರು ಕೈ ಹಿಡಿದು ಕರೆದುಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕಿ ಸುನಂದಾ ಕಂಠಿಮಠ.
Related Articles
ಆದರೆ, ಕಟ್ಟಡ ವ್ಯವಸ್ಥೆ ಇಲ್ಲ, ಶಾಲೆಯ ಗೋಡೆಗೆ ಅಂಟಿಕೊಂಡಂತೆ ಇರುವ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಂತಿಗಳು, ಈ ತಂತಿ ತಗುಲಿ ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದಾನೆ. ಹೆಸ್ಕಾಂನವರಿಗೆ ಲಿಖೀತ ರೂಪದಲ್ಲಿ ಮನವಿ ಸಲ್ಲಿಸಿದರು.
ಈ ತಂತಿ ಸರಿಪಡಿಸಿಲ್ಲ. ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಟಿಸಿ ಮತ್ತು ಬಾಗಿದ ಕಂಬಗಳಿಂದ ಜೋತುಬಿದ್ದ ತಂತಿ ಇದ್ದು, ಅವುಗಳನ್ನು ತೆರವುಗೊಳಿಸಬೇಕು. ಹಳೆ ಕಟ್ಟಡ ನೆಲಸಮ ಮಾಡಿ ಅಲ್ಲಿಯೂ ಒಂದೆರಡು ಕೊಠಡಿ ನಿರ್ಮಿಸಬೇಕು. ಕ್ಷೇತ್ರದ ಶಾಸಕರು ಶೈಕ್ಷಣಿಕ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನಿಸಬೇಕು ಎಂದು ಇಲ್ಲಿನ ಪಾಲಕರು ಮನವಿ ಮಾಡಿದ್ದಾರೆ.
ನಾನು ಸ್ವತಃ ಈ ಶಾಲೆಗೆ ಹೋಗಿ ಭೇಟಿ ನೀಡಿ ಬಂದಿದ್ದೇನೆ. ಕೂಡಲೆ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಡಿಸಿಯವರಿಗೆ ಕಳುಹಿಸಿ ಸರಿಪಡಿಸಿ ವಿಶೇಷ ಅನುದಾನದಡಿ ಹಣ ಬಿಡುಗಡೆಗೊಳಿಸಿ ಉತ್ತಮ ಗುಣಮಟ್ಟದ ಕೊಠಡಿಗಳ ನಿರ್ಮಿಸಲು ಆದೇಶ ಮಾಡುತ್ತೇನೆ. –ಸಿದ್ದು ಸವದಿ, ತೇರದಾಳ ಶಾಸಕರು
-ಕಿರಣ ಶ್ರೀಶೈಲ ಆಳಗಿ