ಬನಹಟ್ಟಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಅಂಗನವಾಡಿ ಕೆಲಸ ಮಾತ್ರ ಮಾಡಿಸಿ. ಬೇರೆ ಕೆಲಸ ನೀಡಬಾರದು ಎಂದು ಅಂಗನವಾಡಿ ಕಾರ್ಯಕರ್ತೆಯರ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದರು. ಶನಿವಾರ ರಬಕವಿ ಕಾಳಮ್ಮದೇವಿ ದೇವಸ್ಥಾನದಲ್ಲಿ ರಬಕವಿ-ಬನಹಟ್ಟಿ ತಾಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಪಾಲನೆ-ಪೋಷಣೆ ಮಾಡುವುದು ಕಾರ್ಯಕರ್ತೆಯರ ಕೆಲಸ. ಮಕ್ಕಳಿಗೆ ಪಾಠ ಹೇಳಲು ಸಹ ಸಂಬಂಧಿಸಿದ ಅಧಿಕಾರಿಗಳು ನಮ್ಮನ್ನು ಬಿಡದೇ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹೇಗೆ ಸಾಧ್ಯ. ಇದು ಸರಿಯಾದ ಕ್ರಮವಲ್ಲ ಎಂದರು.
ಜಿಲ್ಲಾಡಳಿತದ ಅಧಿಕಾರಿಗಳು ನಮ್ಮ ಕಾರ್ಯಕರ್ತೆಯರಿಂದ ಸಣ್ಣ ತಪ್ಪುಗಳಾದರೆ ಅವರನ್ನು ಕೆಲಸದಿಂದ ತೆಗೆದುಹಾಕುವುದು ಯಾವ ನ್ಯಾಯ. ಭ್ರಷ್ಟಾಚಾರ ಎಲ್ಲಿದೆ ಎಂಬುದನ್ನು ಅಧಿಕಾರಿಗಳು ಅರಿತುಕೊಳ್ಳಲಿ. ವಿನಾಕಾರಣ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದಬ್ಟಾಳಿಕೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ತೇರದಾಳ ವಿಭಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್. ಎಸ್. ತೇರದಾಳ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಹಲವಾರು ಹೋರಾಟ ಮಾಡುತ್ತ ಅನೇಕ ಸೌಲಭ್ಯ ಪಡೆದುಕೊಂಡಿದ್ದೀರಿ, ನಿಮ್ಮ ಸಂಘಟನೆ ಮಹತ್ವ ಉತ್ತಮವಾಗಿದೆ ಎಂದರು.
ತಾಲೂಕು ಅಧ್ಯಕ್ಷೆ ಎಸ್.ಕೆ. ಹೂಗಾರ, ಆರ್.ಎಂ. ಪತ್ತಾರ, ಕೆ.ಎಸ್. ಡೊರವರ, ಜಿ.ಆರ್. ದಾತಾರ, ಎಲ್.ವಿ. ಪತ್ತಾರೆ, ಬಿ.ಕೆ. ಯಲ್ಲಟ್ಟಿ, ಬಿ.ಆರ್. ರೇಳಕರ, ಯು.ಆರ್. ನದಾಫ್, ಡಿ.ಎಸ್. ಹಿರೇಮಠ, ಆರ್.ಎಂ. ಪೂಜಾರಿ, ಕೆ.ಎಸ್. ಅಂಗಡಿ, ಜಿ.ಎಂ. ಬಿಳ್ಳೂರ, ವಿ.ಎಸ್. ಕಂಕನವಾಡಿ, ಬಿ.ಬಿ. ಡುಮರೆ, ಕೆ.ಪಿ. ನಡುವಿನಮನಿ, ಎ.ಎಂ. ಕಾಮರೆಡ್ಡಿ, ಎಂ.ಎಂ. ತೇಲಿ ಇದ್ದರು. ಈ ಮುನ್ನ ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಯಿತು. ಎನ್.ಎಸ್. ಚೆನ್ನಿ ನಿರೂಪಿಸಿದರು. ಎಂ. ಎಸ್. ಟಿರಕಿ ವಂದಿಸಿದರು.