ರಬಕವಿ-ಬನಹಟ್ಟಿ : ಕಳೆದೊಂದು ಹದಿನೈದು ದಿನಗಳಿಂದ ಅಡುಗೆ ಮನೆಗೆ ನುಗ್ಗಿ ಅಡುಗೆ ಹಾಗು ಮನೆಯ ಹೊರಗಡೆಯ ಉಡುಪು ಕದಿಯುತ್ತಿರುವ ವಿಚಿತ್ರ ಘಟನೆ ನಡೆಯುತ್ತಿದ್ದು, ಬನಹಟ್ಟಿಯ ಲಕ್ಷ್ಮೀ ನಗರ, ಸಾಯಿ ಹಾಗು ಕಾಡಸಿದ್ಧೇಶ್ವರ ನಗರದ ಜನತೆ ಬೆಚ್ಚಿ ಬೀಳುವಂತಾಗಿದೆ.
ವಿಚಿತ್ರವಾದರೂ ಸತ್ಯ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಜಗದಾಳ ರಸ್ತೆಯಲ್ಲಿರುವ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿರುವ ವ್ಯಕ್ತಿಯಿಂದ ಈ ಕೃತ್ಯ ನಡೆಯುತ್ತಿದೆ ಎಂಬುದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.
ರಾತ್ರಿಯಾಗುತ್ತಿದ್ದಂತೆ ಮನೆಯ ಮುಂಭಾಗದಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವದೆಲ್ಲವು ಕಾಣೆಯಾಗುತ್ತಿದ್ದವು. ಕೆಲ ಮನೆಗಳಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಆಹಾರ, ಊಟವೆನ್ನೆಲ್ಲ ತಿಂದು ಹೊರನಡೆಯುತ್ತಾನೆ.
ಹೀಗಾಗಿ ರಹಸ್ಯ ಬೇಧಿಸಲು ಹೊರಟ ಕೆಲವರು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಸಾಯಿ ನಗರದಲ್ಲಿನ ವೈದ್ಯನೋರ್ವರ ಮನೆಗೆ ಬಂದಿದ್ದಾನೆ. ಕಂಪೌಂಡ್ ಒಳಗೆ ನುಗ್ಗಿ ಮನೆಯ ಹಿಂದಿನ ಬಾಗಿಲಿನಿಂದ ನುಗ್ಗುವ ಪ್ರಯತ್ನ ಮಾಡುವಾಗ, ಕಿಟಕಿಯಲ್ಲಿ ಮನೆಯಲ್ಲಿದ್ದವರನ್ನು ಗಮನಿಸಿ ಓಡುತ್ತಿದ್ದಂತೆ ಮಾಲಿಕರು ವಿಕಾರ ವ್ಯಕ್ತಿಯನ್ನು ನೋಡಿ ಗಾಬರಿಯಿಂದ ಚೀರಿದ್ದಾರೆ. ನೆರೆಹೊರೆಯವರು ಆತನನ್ನು ಹಿಡಿಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
ಇಂತಹ ಘಟನೆ ಕಳೆದ 15 ದಿನಗಳಿಂದ ನಿರ್ಜನ ಪ್ರದೇಶದ ಮನೆಗಳಲ್ಲಿ ಆಗಾಗ್ಗೆ ಕಂಡು ಬರುತ್ತಿರುವದು ಪೊಲೀಸ್ ಗಮನಕ್ಕೆ ಬಂದಿದ್ದು, ಮೊದಲಿಗೆ ನಿರ್ಲಕ್ಷ್ಯವಹಿಸಿದ್ದ ಇಲಾಖೆ. ತೀವ್ರ ಕಟ್ಟೆಚ್ಚರ ವಹಿಸಿದ್ದು, ಸೈಕೋ ಆರೋಪಿಯನ್ನು ಬಂಧಿಸುವಲ್ಲಿ ಪಡೆಯನ್ನು ರಚಿಸಿದ್ದಾರೆ.
ಈತನ ಕೃತ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಆರೋಪಿ ಪತ್ತೆಗೆ ಪೊಲೀಸ್ ಜಾಲ ತೀವ್ರ ನಿಗಾ ವಹಿಸಿದೆ. ಆದರೆ ದಿನಂಪ್ರತಿ ರಾತ್ರಿ ಹೊತ್ತು ಈ ಭಾಗದಜನತೆ ನಿದ್ರೆಯಿಲ್ಲದೆ ತಂಡ-ತಂಡವಾಗಿ ಬೀದಿಗಳಲ್ಲಿ ಬಡಿಗೆ ಹಿಡಿದುಕೊಂಡು ಗಸ್ತು ತಿರುಗುತ್ತಿದ್ದಾರೆ.
`”ವಿಕಾರ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ಹಿಡಿಯಲು ಪ್ರಯತ್ನಿಸಿದೇವು. ಪರಾರಿಯಾಗಿದ್ದಾನೆ. ಈತನಿಂದ ಪ್ರತಿದಿನ ಕಳ್ಳತನದ ಬೀತಿ ಹೆಚ್ಚಾದ ಹಿನ್ನಲೆಯಲ್ಲಿ ರಾತ್ರಿ ಗಸ್ತು ತಿರುಗುವುದು ಅನಿವಾರ್ಯವಾಗಿದೆ”.
–
ಸ್ಥಳೀಯ ನಾಗರೀಕರು, ಸಾಯಿನಗರ, ಬನಹಟ್ಟಿ