Advertisement

Rabkavi ಬನಹಟ್ಟಿ ಕೆರೆ: ಅನಾಹುತಗಳು ನಡೆಯದಂತೆ ಕ್ರಮ ಅಗತ್ಯ

06:24 PM May 28, 2024 | Team Udayavani |

ರಬಕವಿ-ಬನಹಟ್ಟಿ: 1972ರಲ್ಲಿ ನಿರ್ಮಾಣವಾದ ಬನಹಟ್ಟಿಯ ವಿಶಾಲವಾದ ಕೆರೆಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಆ ನಿಟ್ಟಿನಲ್ಲಿ ಅಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುಬೇಕಾಗಿರುವುದು ಅವಶ್ಯವಾಗಿದೆ.

Advertisement

ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ರೈತರ ತೋಟದ ಬಾವಿಗಳಿಗೆ ಬಸಿಯುವ ನೀರಿನಿಂದ ಅಂತರ್ಜಲ ಮಟ್ಟವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಮತ್ತು ಕೆರೆಯಲ್ಲಿ ಹೆಚ್ಚಾದ ನೀರು ಹಳ್ಳದ ಮೂಲಕ ಹರಿದು ಬನಹಟ್ಟಿ ನಗರದ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1972 ರಲ್ಲಿ ಅಂದಿನ ಜಮಖಂಡಿಯ ವಿಧಾನ ಸಭೆಯ ಶಾಸಕರಾಗಿದ್ದ ಪಿ.ಎಂ.ಬಾಂಗಿ ಯವರು ಬನಹಟ್ಟಿಯ ಕೆರೆಯನ್ನು ನಿರ್ಮಾಣ ಮಾಡಿದ್ದರು. ಅಂದು ಈ ಪ್ರದೇಶದಲ್ಲಿ ಭೀಕರ ಬರಗಾಲವಿತ್ತು. ಬರಗಾಲವನ್ನು ನೀಗಿಸುವ ನಿಟ್ಟಿನಲ್ಲಿ ಕೆರೆಯನ್ನು ನಿರ್ಮಾಣ ಮಾಡಲಾಗಿತ್ತು.

ಆದರೆ ಸದ್ಯ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಕೆರೆಯಾಗಿರುವುದು ಆತಂಕ ಮೂಡಿಸಿದೆ. ಆ ನಿಟ್ಟಿನಲ್ಲಿ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.

16 ಎಪ್ರಿಲ್ 2016 ರಲ್ಲಿ ಬನಹಟ್ಟಿಯ ಒಂದೇ ಮನೆಯ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತ ಪಟ್ಟವು. ಕಳೆದ ವಾರ ಸಮೀಪದ ಹೊಸೂರಿನ ಇಬ್ಬರು ಬಾಲಕರು ಮತ್ತೆ ಕೆರೆಯಲ್ಲಿ ಮುಳುಗಿ ಮೃತ ಪಟ್ಟವು. ಮೊದಲಿನಿಂಲೂ ಇಂಥ ಪ್ರಕರಣಗಳು ನಡೆಯುತ್ತ ಬಂದಿವೆ.

ಕೆರೆಯ ಸುತ್ತಲೂ ಎತ್ತರವಾದ ಮಣ್ಣಿನ ದಿಣ್ಣೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕೆರೆಯಲ್ಲಿ ಹೆಚ್ಚಾದ ನೀರು ಹಳ್ಳದ ಮೂಲಕ ಹರಿದು ಬನಹಟ್ಟಿ ಕಡೆಗೆ ಹೋಗುವಂತೆ ಮಾಡಿದ್ದಾರೆ. ಇಲ್ಲಿ ಯಾವುದೇ ತಡೆಗೋಡೆಗಳು ಇಲ್ಲ.

Advertisement

ಕೆರೆಯು ತುಂಬಿದಾಗ ಸುತ್ತಲಿನ ಜನರು ಮನೆಯ ಹಾಸಿಗೆಗಳನ್ನು, ಬಟ್ಟೆಗಳನ್ನು ಹಾಗೂ ವಾಹನಗಳನ್ನು ಕೆರೆಯ ತೀರದಲ್ಲಿ ಶುಚಿಗೊಳಿಸುತ್ತಾರೆ. ಇನ್ನೂ ಟ್ಯಾಂಕರ್ ಗಳು ನೀರು ತುಂಬಿಕೊಳ್ಳುವುದರ ಸಲುವಾಗಿ ಇಲ್ಲಿ ಒಂದಿಷ್ಟು ಸ್ಥಳವನ್ನು ಬಿಡಲಾಗಿದೆ. ಈ ಸ್ಥಳದ ಮೂಲಕವೇ ಜನರು ಮತ್ತು ಮಕ್ಕಳು ಕೆರೆಗೆ ಇಳಿಯುತ್ತಾರೆ.

ಜನರು ಮತ್ತು ಮಕ್ಕಳು ಕೆರೆಗೆ ಇಳೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಲ್ಲಿ ಯಾವುದೇ ಫಲಕಗಳು ಇಲ್ಲದಂತಾಗಿವೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯ ನಿರ್ವಹಣೆಯ ಕಾರ್ಯವನ್ನು ಮಾಡುತ್ತಿದ್ದು, ಅಧಿಕಾರಿಗಳು ಕೆರೆಯಲ್ಲಿ ಜನರು ಮತ್ತು ಮಕ್ಕಳು ಇಳಿಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ರಜೆಯ ಸಂದರ್ಭದಲ್ಲಿ ಮಕ್ಕಳು ಕೆರೆ, ನದಿ ತೀರ ಮತ್ತು ಬಾವಿಗಳಿಗೆ ತೆರಳದಂತೆ ಪಾಲಕರು ಕೂಡಾ ಗಮನ ನೀಡಬೇಕಾಗಿದೆ. ಜನರು ಮತ್ತು ಮಕ್ಕಳು ಕೆರೆಗೆ ಇಳಿಯದಂತೆ ಮತ್ತು ಈಜಾಡದಂತೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕಾಗಿದೆ
-ಭೀಮಶಿ ಮಗದುಮ್ , ರೈತರು ಬನಹಟ್ಟಿ.

ಕೆರೆಯ ಫೆನ್ಸಿಂಗ್ ಕಾರ್ಯ ನಡೆದಿತ್ತು. ಆದರೆ ಸುತ್ತಲಿನ ರೈತರು ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿರುವುದರಿಂದ ಫೆನ್ಸಿಂಗ್ ಕಾರ್ಯ ಸ್ಥಗಿತಗೊಂಡಿದೆ. ಮುಂದೆ ಯಾವುದೇ ಅನಾಹುತಗಳು ನಡೆಯದಂತೆ ಕೆರೆಯ ಸುತ್ತ ಮುತ್ತ ಸೂಕ್ತ ಫಲಕಗಳನ್ನು ಅಳವಡಿಸಲು ಮತ್ತು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ಚೇತನ ಅಂಬಿಗೇರ, ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next