ಬನಹಟ್ಟಿ: ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳ ಆವರಣಗಳು ಲಾಕ್‌ಡೌನ್ ನಂತರ ಕಸದ ತೊಟ್ಟಿಯಂತಾಗಿದ್ದವು. ಅವುಗಳ ನಿರ್ವಹಣೆಯಾಗದ ಕಾರಣ ಎಲ್ಲೆಂದರಲ್ಲಿ ಕಸದಿಂದ ಕೂಡಿ ಕಸದ ತೊಟ್ಟಿಯಂತಾಗಿದ್ದವು. ಈಗ ಸಾರಿಗೆ ಸಿಬ್ಬಂದಿಗಳ ಶ್ರಮದಿಂದ ಕಂಗೊಳಿಸುತ್ತಿವೆ.
ಲಾಕ್‌ಡೌನ್ ವೇಳೆಯಲ್ಲಿ ನಿರ್ವಹಣೆ ಸಮಸ್ಯೆಯಿಂದ ನಿಲ್ದಾಣ ಆವರಣದಲ್ಲಿ ತಗ್ಗು ಗುಂಡಿಗಳ ಜತೆಗೆ ಕಸದ ರಾಶಿ ಕಾಣಿಸಿಕೊಂಡಿತ್ತು.
ಲಾಕ್‌ಡೌನ್ ಮುಗಿದ ಬಳಿಕ ಬಸ್‌ಗಳ ಸಂಚಾರ ಪ್ರಾರಂಭವಾದರೂ ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿ ಬಸ್‌ಗಳಲ್ಲಿ ಪ್ರಯಾಣಿಸದ ಕಾರಣ ಹೆಚ್ಚಿನ ಬಸ್‌ಗಳು ಸಂಚರಿಸಲಿಲ್ಲ. ನಿರ್ವಾಹಕರು ಮತ್ತು ಚಾಲಕರು ಕೆಲಸವಿಲ್ಲದೆ ಡಿಪೋಗಳಲ್ಲಿ ಕುಳಿತುಕೊಳ್ಳುವಂತ ವಾತಾವರಣ ನಿರ್ಮಾಣವಾಗಿತ್ತು. ಈ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಪ್ರತಿದಿನ ಒಂದು ನಿಲ್ದಾಣಕ್ಕೆ ತೆರಳಿ ಸ್ವತ್ಛತೆ ಮಾಡಬೇಕೆಂದು ತೀರ್ಮಾನಿಸಿ ಇದಕ್ಕೊಂದು ಯೋಜನೆ ರೂಪಿಸಿಕೊಂಡರು.
ಇದನ್ನೂ ಓದಿ :ಜಮೀರ್ ಪರ ಮಾತನಾಡಿ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ: ಶೆಟ್ಟರ್
ನಿಲ್ದಾಣದಲ್ಲಿನ ಶೌಚಾಲಯ ದುರಸ್ತಿ, ಬಳಕೆಯಾದ ಸ್ಥಳಗಳಲ್ಲಿ ಕೆಂಪು ಮಣ್ಣು ಹಾಕಿ ಅಲ್ಲೆಲ್ಲ ಗಿಡಗಳನ್ನು ನೆಡುವುದು. ಪ್ರಯಾಣಿಕರ ಆಸನಗಳನ್ನು ಸರಿಯಾಗಿ ದುರಸ್ತಿ ಮಾಡುವುದು ಸೇರಿದಂತೆ ಅನೇಕ ಸೌಕರ್ಯಗಳು ಪ್ರಯಾಣಿಕರಿಗೆ ದೊರಕುವಂತೆ ನಿಲ್ದಾಣಗಳನ್ನು ಶುಚಿಗೊಳಿಸಿದ ಸಿಬ್ಬಂದಿಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಬಕವಿ ಬನಹಟ್ಟಿ ಬಸ್ ನಿಲ್ದಾಣಗಳ ಆವರಣಗಳು ಗಬ್ಬೆದ್ದು ನಾರುತ್ತಿದ್ದವು. ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಖಾಲಿ ಇದ್ದ ಜಾಗೆಯನ್ನು ಕಲ್ಲಿನಿಂದ ಚಿಕ್ಕಚಿಕ್ಕ ಕಾಲಂಗಳನ್ನು ಹಾಕಿ ವಾತಾವರಣವನ್ನೇ ಬದಲಿಸಿದ್ದಾರೆ ಸಿಬ್ಬಂದಿ.
ನಮಗೆ ಅಧಿಕಾರಿಗಳು ಆದೇಶ ನೀಡಿಲ್ಲ. ದೇಶದ ಪ್ರಧಾನಿಯವರೇ ಸ್ವತ್ಛತೆಗೆ ಮುಂದಾದಾಗ ಸಾಮಾನ್ಯ ಸರ್ಕಾರಿ ನೌಕರರಾಗಿ ಏಕೆ ಈ ಕೆಲಸಕ್ಕೆ ಮುಂದಾಗಬಾರದು ಎಂದು ನಾವೇ ಪ್ರೇರಣೆಗೊಂಡು ಒಂದು ನಿಲ್ದಾಣದಲ್ಲಿ ವಾರಪೂರ್ತಿ ಈ ಸ್ವತ್ಛತಾ ಕಾರ್ಯದಲ್ಲಿ ತೊಡಗಿ ನಿಲ್ದಾಣ ಶುಚಿಗೊಳಿಸಿದ್ದು ನಮಗೆ ಆತ್ಮತೃಪ್ತಿ ತಂದಿದೆ.
– ಪ್ರಭು ಬಿದರಿ, ನಿರ್ವಾಹಕರು.