ಬನಹಟ್ಟಿ: ಕಳೆದ ಎರಡು ದಿನದಿಂದ ಬನಹಟ್ಟಿಯ ಪೊಲೀಸ್ ಠಾಣೆ ಎದುರು ರಸ್ತೆ ಅಗಲೀಕರಣ ನಿಮಿತ್ತ ನಡೆಯುತ್ತಿರುವ ಕಾಮಗಾರಿಯಿಂದ ಸಾಕಷ್ಟು ತೊಂದರೆ ಉಂಟಾಗಿದೆ.
ನೆಲ ಅಗೆಯುವ ಸಂದರ್ಭದಲ್ಲಿ ಜೆಸಿಬಿ ನಾಲಿಗೆಗೆ ಬಿಎಸ್‌ಎನ್‌ಎಲ್ ಕೇಬಲ್ ಸಿಲುಕಿ ಕಟ್ ಆಗಿರುವುದರಿಂದ ಬನಹಟ್ಟಿಯ ಎಸ್‌ಬಿಐ ಬ್ಯಾಂಕ್ ಗೆ ಸರ್ವರ್ ಇಲ್ಲದೇ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ರಬಕವಿ ಬನಹಟ್ಟಿ ರಾಂಪುರ ನಗರಗಳ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ.
ಲೋಕೋಪಯೋಗಿ ಇಲಾಖೆಯಡಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ರಸ್ತೆ ಬದಿ ಇರುವ ಅನೇಕ ವಿದ್ಯುತ್ ತಂತಿಗಳು ಹಾಗೂ ನೆಲದಲ್ಲಿ ಹುಗಿದ ಟೆಲಿಪೋನ್ ಕೇಬಲ್‌ಗಳು ಜೆಸಿಬಿ ಬಾಯಿಗೆ ಸಿಲುಕಿ ಹರಿಯತ್ತಿವೆ. ಇದನ್ನೇ ನಂಬಿದ ಅನೇಕ ಬ್ಯಾಂಕ್ ಗಳು ಕಳೆದ ಎರಡು ದಿನಗಳಿಂದ ಅಂತರ್ಜಾಲ ಸಂಪರ್ಕ ಕಡಿತವಾದ ಕಾರಣ ಬ್ಯಾಂಕ್ ವ್ಯವಹಾರ ಸ್ಥಗಿತವಾಗಿದೆ. ಬನಹಟ್ಟಿ ಬ್ಯಾಂಕ್ ಎದುರು ಶನಿವಾರ ಬ್ಯಾಂಕ್ ಸೇವೆಗೆ ಲಭ್ಯವಿಲ್ಲ ಎಂದು ನಾಮಫಲಕ ಹಾಕಿದ್ದರು.
ಬಿಎಸ್‌ಎನ್‌ಎಲ್ ಕೇಬಲ್ ಕಟ್ ಆದ ಕಾರಣ ಬ್ಯಾಂಕ್‌ನ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಪರ್ಯಾಯ ವ್ಯವಸ್ಥೆಗಾಗಿ ಬೇರೆ ಕಂಪನಿಯ ಟವರ್ ಹೊಂದಾಣಿಕೆ ಮಾಡಿಕೊಂಡಿದ್ದು, ಸೋಮವಾರವರೆಗೆ ಖಂಡಿತ ಪ್ರಾರಂಭವಾಗುತ್ತದೆ. ಈಗ ತಾತ್ಕಾಲಿಕವಾಗಿ ರಬಕವಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹರಿಗೆ ಸೇವೆ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ. ಗ್ರಾಹಕರು ಸಹರಿಸಬೇಕು.
ಧೀರಜಕುಮಾರ
ಎಸ್‌ಬಿಐ ಮ್ಯಾನೇಜರ್ ಬನಹಟ್ಟಿ
ರಾಂಪುರ ಬಿಎಸ್‌ಎನ್‌ಎಲ್ ಪ್ರಮುಖ ಕಚೇರಿಯಿಂದ ಬನಹಟ್ಟಿ ಕಡೆಗೆ ಹೊಗುವ ಬನಹಟ್ಟಿ ಪೊಲೀಸ್ ಠಾಣೆ ಎದುರಿಗೆ ಒಟ್ಟು ಎಂಟು ನೂರು ಸಂಪರ್ಕಗೊಳಿಸುವ ತಂತಿಗಳ ಕೇಬಲ್ ಕಡಿತಗೊಂಡಿದೆ. ಅವೆಲ್ಲವನ್ನು ಜೋಡಿಸಲು ಅಂದಾಜು ಎರಡು ದಿನಗಳು ಬೇಕಾಗುತ್ತದೆ. ಈಗ ನಿತ್ಯ ಹನ್ನೆರಡು ಗಂಟೆ ಸೇವೆ ಮಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಈ ಕಾರ್ಯ ಮುಗಿಯುತ್ತದೆ.
ಬಿ.ಎನ್. ದಶಗೀರ,
ಬಿಎಸ್‌ಎನ್‌ಎಲ್ ದಿನಗೂಲಿ ನೌಕರ
ಅವಳಿ ನಗರದಲ್ಲಿ ಸೀರೆ ವ್ಯಾಪಾರ ಕುಸಿತ ಕಂಡಿರುವ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿರುವುದು ತೊಂದರೆ ಉಂಟಾಗಿದೆ. ಬ್ಯಾಂಕ್‌ನವರು ಇಂತಹ ತುರ್ತುಸಂದರ್ಭದಲ್ಲಿ ತಕ್ಷಣ ಪರ್ಯಾಯ ಅಂತರ್ಜಾಲಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುತ್ತದೆ.
ನಟವರ್ ಕಾಬರಾ,
ಜವಳಿ ವ್ಯಾಪಾರಿ